ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರ ಭಾವನೆ ಹೀಗಿದೆ ನೋಡಿ: ಬಸವರಾಜ ಬೊಮ್ಮಾಯಿ
ಹಾವೇರಿ, ಏಪ್ರಿಲ್ 10: ಸಾರಿಗೆ ಬಸ್, ಹಾಲು, ಅಲ್ಲೋಹಾಲು, ವಿದ್ಯುತ್ ದರ ಹೆಚ್ಚಳ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರ್ಕಾರ ಯಾವಾಗ ತೊಲಗಿತ್ತೊ ಎಂದು ಜನರು ಕಾಯುತ್ತಿದ್ದಾರೆ. ಜನರ ಭಾವನೆಯಂತೆ ಬೆಲೆ ಏರಿಕೆ ವಿರುದ್ಧ ಕರ್ನಾಟಕ ಬಿಜೆಪಿಯು ಹೋರಾಟ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾದ್ಯಂತ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊರಾಟ ಆರಂಭಿಸಿದೆ. ಪ್ರತಿ ಜಿಲ್ಲೆಯಲ್ಲಿ ಜನಾಕೋಶ ಯಾತ್ರೆ ಆರಂಭಿಸಿದೆ. ಹಾವೇರಿ ಜಿಲ್ಲೆಯಲ್ಲಿ ಅಹೋರಾತ್ರಿ ಹೋರಾಟ ಆರಂಭ ಮಾಡಿದ್ದೇವೆ. ಕರ್ನಾಟಕ ಸರ್ಕಾರ ಎಲ್ಲ ವಸ್ತುಗಳ ಬೆಲೆ ಹೆಚ್ಚಿಸಿದೆ.

ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ
ಹಾಲು, ಆಲೊಹಾಲು, ಎಲೆಕ್ಟ್ರಿಸಿಟಿ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳ ಮಾಡಿದೆ. ಸರ್ಕಾರ ದಿವಾಳಿಯಾಗಿದೆ. ಬರುವಂತಹ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಮಾಹಿತಿ ಇದೆ ಎಂದು ಹೇಳಿದರು. ಭ್ರಷ್ಟಾಚಾರ ಎಲ್ಲೆ ಮೀರಿದೆ. ಕಾಂಗ್ರೆಸ್‌ನ ಶಾಸಕರೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಹೇಳಿದರು.
ಸರ್ಕಾರದಿಂದ ಜನರಿಗೆ ಹೊರೆ
ಲೋಕೋಪಯೋಗಿ ಇಲಾಖೆ, ಎಲೆಕ್ನಿಕ್ ಕಾಂಟ್ರಾಕ್ಟರ್, ಅಬಕಾರಿ ಗುತ್ತಿಗೆದಾರರು ಎಲ್ಲರೂ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಜನರು ಆರೋಪಿಸಿದ್ದಾರೆ. ಇಷ್ಟೆಲ್ಲಾ ಅಕ್ರಮಗಳು ನಡೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಬಡವನ ಬದುಕು ಭಾರವಾಗಿದೆ. ಗ್ಯಾರೆಂಟಿಯನ್ನೂ ಸರಿಯಾಗಿ ನೀಡದೇ ದೊಡ್ಡ ಪ್ರಮಾಣದ ತೆರಿಗೆಯ ಭಾರವನ್ನು ಜನರ ಮೇಲೆ ಹಾಕಿದ್ದಾರೆ. ಹಾಲಿನ ಸಬ್ಸಿಡಿ ರೈತರಿಗೆ ಕೊಡುವ ಬದಲು ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಅದರ ವಿರುದ್ಧ ಜನರ ಧ್ವನಿಯಾಗಿ ಹೋರಾಟ ನಡೆಸಿದ್ದೇವೆ ಎಂದು ತಿಳಿಸಿದರು.
ಎಲೆಕ್ಟ್ರಿಕ್ ಮೀಟರ್ ಅಳವಡಿಕೆಯಲ್ಲಿ ಭ್ರಷ್ಟಾಚಾರ
ಎಲೆಕ್ಟ್ರಿಕ್ ಮೀಟರ್ ಅಳವಡಿಕೆಯಲ್ಲಿ ಬಹಳ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಗುತ್ತಿಗೆದಾರರು ದಾಖಲೆ ಸಮೇತ ಹೇಳಿದ್ದಾರೆ. ಬೇರೆ ರಾಜ್ಯಗಳಲ್ಲಿ ಕೇವಲ 700 ರೂ. ಇರುವ ಮೀಟರ್‌ಗಳಿಗೆ 5000-6000 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಯಾವಾಗ ಈ ಸರ್ಕಾರ ತೊಲಗಿತ್ತೊ ಎಂಬ ಜನರ ಭಾವನೆ ಇದೆ. ಅವರ ಭಾವನೆಯಂತೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಾತಿ ಗಣತಿ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ವಿಚಾರದಲ್ಲಿ ರಾಜ್ಯ ಸರ್ಕಾರ ಏನು ಮಾಡತ್ತದೆ ಮಾಡಲಿ. ಜಾತಿ ಗಣತಿ ವರದಿಯನ್ನು ಕೊಟ್ಟು ಒಂದು ವರ್ಷವಾಯಿತು. ಸಿಎಂ ಸಿದ್ದರಾಮಯ್ಯ ಅವರು ಅದನ್ನು ಯಾಕೆ ಮುಚ್ಚಿಟ್ಟುಕೊಂಡಿದ್ದಾರೊ ಗೊತ್ತಿಲ್ಲ. ಅವರು ಬಿಡುಗಡೆ ಮಾಡಲು ಏನು ಸಮಸ್ಯೆಯಾಗಿದೆ. ಅವರು ಬಿಡುಗಡೆ ಮಾಡಲಿ ಆ ನಂತರ ಮಾತನಾಡುತ್ತೇನೆ ಎಂದರು.












Click it and Unblock the Notifications