ಲೋಕಸಭೆ ಚುನಾವಣೆಗೆ ಮತಯಂತ್ರ ಸಿದ್ಧ: 18 ತಂತ್ರಜ್ಞರಿಂದ ತಪಾಸಣೆ ಕಾರ್ಯ ಪೂರ್ಣ
ಹಾವೇರಿ, ಆಗಸ್ಟ್ 27: ಕೇಂದ್ರ ಚುನಾವಣಾ ಆಯೋಗ 2024ರ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಇದರ ಮೊದಲ ಭಾಗವಾಗಿ ಜಿಲ್ಲಾ ಚುನಾವಣಾ ವಿಭಾಗ ಮತಯಂತ್ರಗಳ ಎಫ್ಎಲ್ಸಿ (ಫಸ್ಟ್ ಲೆವೆಲ್ ಚೆಕಿಂಗ್) ಕಾರ್ಯ ಪೂರ್ಣಗೊಳಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಬಳಸಿದ ಮತಯಂತ್ರಗಳನ್ನೇ ಲೋಕಸಭೆ ಚುನಾವಣೆಗೂ ಬಳಸಲು ಆಯೋಗ ನಿರ್ಧರಿಸಿದೆ.
2024ರ ಮೇನಲ್ಲಿ ಲೋಕಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾ ವಿಭಾಗ ಅಗತ್ಯ ಸಿದ್ಧತೆ ಆರಂಭಿಸಿದೆ. ಇಂದು ಹಾವೇರಿ ಜಿಲ್ಲಾಧಿಕಾರಿ ಕಚೇರಿ ಆವರಣದ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣದಲ್ಲಿ ಯಂತ್ರಗಳನ್ನು ಭದ್ರವಾಗಿ ಇರಿಸಲಾಗಿದೆ.

ಹೈದರಾಬಾದ್ನ ಎಲೆಕ್ಟ್ರಾನಿಕ್ಸ್ ಕಾಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್(ಎಚ್ಎಸಿಒಐಎಲ್)ನ 18 ಇಂಜಿನಿಯರ್ಗಳ ತಂಡ ಜಿಲ್ಲೆಗೆ ಆಗಮಿಸಿ ಆ. 14ರಿಂದ ಆ. 24ರವರೆಗೆ ಎಫ್ಎಲ್ಸಿ ಕಾರ್ಯ ಪೂರ್ಣಗೊಳಿಸಿದೆ. ವಿಧಾನಸಭಾ ಚುನಾವಣೆಯ ದಾಖಲೆ ಹಾಗೆಯೇ ಉಳಿದಿದೆಯೇ ಎಂಬಿತ್ಯಾದಿ ಅಂಶವನ್ನು ಪರಿಶೀಲಿಸಿದೆ. ಜಿಲ್ಲೆಯ ಉಗ್ರಾಣದಲ್ಲಿರುವ ಒಟ್ಟು 2,799 ಬ್ಯಾಲೆಟ್ ಯೂನಿಟ್ (ಬಿಯು), 1,953 ಕಂಟ್ರೋಲ್ ಯೂನಿಟ್ (ಸಿಯು) ಹಾಗೂ 2,065 ವಿವಿ ಪ್ಯಾಟ್ ಯಂತ್ರಗಳನ್ನು ಪರಿಶೀಲಿಸಿದೆ.
ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ, ಅಪರ ಜಿಲ್ಲಾ ಚುನಾವಣಾಧಿಕಾರಿ ವೀರಮಲ್ಲಪ್ಪ ಪೂಜಾರ ನೇತೃತ್ವದ ತಂಡ ಮತಯಂತ್ರಗಳ ಭದ್ರತೆ ಹಾಗೂ ಎಫ್ಎಲ್ಸಿ ಕಾರ್ಯಾಚರಣೆ ಪೂರ್ಣಗೊಳಿಸಿದೆ. ಪರಿಶೀಲನಾ ಕಾರ್ಯದಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಎದುರಲ್ಲೇ ಎಫ್ಎಲ್ಸಿ ನಡೆಸಲಾಗಿದೆ. ಮತಯಂತ್ರಗಳನ್ನು ಅವರೂ ತಪಾಸಣೆ ನಡೆಸಿದ್ದಾರೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದ್ದಾರೆ.
ಈಗಾಗಲೇ ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣೆಗೆ ತಾಲೀಮು ನಡೆಸಿದ್ದು, ಜಿಲ್ಲಾಡಳಿತವೂ ಚುನಾವಣೆಗೆ ಅಣಿಯಾಗುತ್ತಿದೆ. ಈ ಮೂಲಕ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ.
19 ಮಷಿನ್ನಲ್ಲಿ ದೋಷ ಪತ್ತೆ
ತಾಂತ್ರಿಕ ದೋಷವುಳ್ಳ 3 ಬಿಯು, 2 ಸಿಯು ಹಾಗೂ 14 ವಿವಿಪ್ಯಾಟ್ ಯೂನಿಟ್ಗಳನ್ನು ತಂತ್ರಜ್ಞರ ತಂಡ ಪತ್ತೆ ಹಚ್ಚಿ ಇವುಗಳನ್ನು ತಿರಸ್ಕರಿಸಿದೆ. ಈ 19 ಯಂತ್ರಗಳನ್ನು ಮತಯಂತ್ರ ತಯಾರಿಸುವ ಹೈದರಾಬಾದ್ನ ಎಚ್ಎಸಿಒಐಎಲ್ಗೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
24/7 ಬಿಗಿ ಭದ್ರತೆ
ಡಿಸಿ ಕಚೇರಿಯ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣ 24/7 ವೆಬ್ ಕಾಸ್ಟಿಂಗ್ ಹಾಗೂ ಸಿಸಿಟಿವಿ ಕಣ್ಗಾವಲು ಇಡಲಾಗಿದೆ. ಮೂರು ಪಾಳಿಯಲ್ಲಿ ಪೊಲೀಸ್ ಭದ್ರತೆಯನ್ನೂ ಏರ್ಪಡಿಸಲಾಗಿದೆ. ಕೇಂದ್ರದಲ್ಲಿ ಅನ್ಯರಿಗೆ ಪ್ರವೇಶವಿಲ್ಲ. ಅಧಿಕೃತ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಜತೆಗೆ ಮೊಬೈಲ್ ಫೋನ್ ಕೇಂದ್ರದೊಳಗೆ ಒಯ್ಯುವಂತಿಲ್ಲ.
ಕೇಂದ್ರ ಚುನಾವಣೆ ಆಯೋಗದ ಆದೇಶದಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮಾರ್ಗದರ್ಶನದಂತೆ ಈಗಾಗಲೇ ಎಫ್ಎಲ್ಸಿ ಮುಕ್ತಾಯವಾಗಿದ್ದು, ಚುನಾವಣೆಗೆ ಮತಯಂತ್ರಗಳು ಸಜ್ಜಾಗಿವೆ. ಮತಯಂತ್ರಗಳಿಗೆ ಅಗತ್ಯ ಭದ್ರತೆ ಒದಗಿಸಲಾಗಿದೆ ಎಂದು ಚುನಾವಣಾ ಅಧಿಕಾರಿಯಾದ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಮಾಹಿತಿ ನೀಡಿದರು.












Click it and Unblock the Notifications