Vande Bharat Express: ಬೆಂಗಳೂರು-ಧಾರವಾಡ ರೈಲು ಕುರಿತು ಮತ್ತೊಂದು ಬೇಡಿಕೆ

ಹಾವೇರಿ, ಸೆಪ್ಟೆಂಬರ್ 14: ಹಲವಾರು ಕಾರಣಕ್ಕೆ ಕರ್ನಾಟಕದಲ್ಲಿ ಸದಾ ಸುದ್ದಿಯಲ್ಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತದೆ. ಈ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇನ್ನೂ ಕಾಗದದಲ್ಲಿಯೇ ಉಳಿದಿದೆ, ಈ ನಡುವೆ ರೈಲಿನ ಕುರಿತು ಮತ್ತೊಂದು ಬೇಡಿಕೆಯನ್ನು ಮುಂದಿಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ 2023ರಲ್ಲಿ ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಇವುಗಳಲ್ಲಿ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲು ಒಂದು. ಬೆಂಗಳೂರು ಮತ್ತು ಉತ್ತರ ಕರ್ನಾಟಕವನ್ನು ಈ ರೈಲು ಸಂಪರ್ಕಿಸುತ್ತದೆ.

Demand For Stop At Haveri For KSR Bengaluru Dharwad Vande Bharat Express Train

ಹಾವೇರಿಯಲ್ಲಿ ನಿಲುಗಡೆ ಕೊಡಿ: ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ರೈಲು ಸಂಖ್ಯೆ 20662/ 20661 ಸಂಚಾರವನ್ನು ನಡೆಸುತ್ತಿದೆ. ಬಿಳಿ ಬಣ್ಣದ ಈ ರೈಲು ಯಶವಂತಪುರ, ತುಮಕೂರು, ದಾವಣಗೆರೆ, ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಿಲುಗಡೆ ಹೊಂದಿದೆ.

ಈ ರೈಲಿಗೆ ತುಮಕೂರಿನಲ್ಲಿ ನಿಲುಗಡೆ ನೀಡಬೇಕು ಎಂಬ ಬೇಡಿಕೆ ಇತ್ತು. 2024ರ ಲೋಕಸಭೆ ಚುನಾವಣೆ ಮುಗಿದು ತುಮಕೂರು ಕ್ಷೇತ್ರದ ಸಂಸದರಾಗಿ ವಿ. ಸೋಮಣ್ಣ ಆಯ್ಕೆಯಾದರು. ಬಳಿಕ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಅವರು ತುಮಕೂರಿನಲ್ಲಿ ರೈಲಿಗೆ ನಿಲುಗಡೆ ಕೊಡಿಸಲು ಯಶಸ್ವಿಯಾಗಿದ್ದಾರೆ. ವಂದೇ ಭಾರತ್ ರೈಲು ಆಗಸ್ಟ್‌ನಿಂದ ತುಮಕೂರಿನಲ್ಲಿ ನಿಲುಗಡೆ ಪಡೆದಿದೆ.

ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿಗೆ ಹಾವೇರಿಯಲ್ಲಿ ನಿಲುಗಡೆ ನೀಡಿ ಎಂದು ಒತ್ತಾಯಿಸಲಾಗಿದೆ. ಇದು ಹೊಸ ಬೇಡಿಕೆಯಲ್ಲ, ರೈಲು ಸಂಚಾರ ಆರಂಭಗೊಂಡಾಗಲೂ ಈ ಬೇಡಿಕೆ ಇಡಲಾಗಿತ್ತು. ಆದರೆ ವೇಗದ ನೆಪ ಹೇಳಿದ್ದ ರೈಲ್ವೆ ಇಲಾಖೆ ಈ ಬೇಡಿಕೆಯನ್ನು ತಿರಸ್ಕಾರ ಮಾಡಿತ್ತು. ಆದರೆ ಈಗ ಮತ್ತೆ ಬೇಡಿಕೆಯನ್ನು ಇಲಾಖೆ ಗಮನಕ್ಕೆ ತರಲಾಗಿದೆ.

ವಂದೇ ಭಾರತ್ ರೈಲು 80 ರಿಂದ 100 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುತ್ತದೆ. ರೈಲಿಗೆ ಹೆಚ್ಚು ನಿಲುಗಡೆ ನೀಡಿದರೆ ವೇಗ ನಿಧಾನವಾಗುತ್ತದೆ ಎಂಬುದು ರೈಲ್ವೆ ಅಧಿಕಾರಿಗಳ ವಾದ. ಅದಕ್ಕೆ ಹಾವೇರಿಗೆ ನಿಲುಗಡೆ ಕೇಳಿದಾಗ ಹಿಂದೆ ಅದನ್ನು ತಿರಸ್ಕಾರ ಮಾಡಲಾಗಿತ್ತು. ಆದರೆ ಈಗ ಹೊಸದಾಗಿ ರೈಲಿಗೆ ತುಮಕೂರಿನಲ್ಲಿ ನಿಲುಗಡೆ ನೀಡಲ್ಲವೇ?, ಹಾವೇರಿಯಲ್ಲಿಯೂ ನಿಲುಗಡೆ ನೀಡಿ ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಹಾವೇರಿಯಲ್ಲಿ ಬೆಳೆಯುವ ಬ್ಯಾಡಗಿ ಮೆಣಸು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ದೇಶ ವಿದೇಶದ ವ್ಯಾಪಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ಹಾವೇರಿ ಮತ್ತು ರಾಣೆಬೆನ್ನೂರು ನಡುವೆ ಹಲವು ಚಿಕ್ಕಪುಟ್ಟ ಕೈಗಾರಿಕೆಗಳಿವೆ. ಕಾಗಿನೆಲೆ, ಶಿಗ್ಗಾವಿ, ಶಿಶುವಿನಹಾಳ ಸೇರಿ ಹಲವು ಧಾರ್ಮಿಕ ಕೇಂದ್ರಗಳಿವೆ. ರೈಲು ಹಾವೇರಿಯಲ್ಲಿ ನಿಲುಗಡೆಗೊಂಡರೆ ವ್ಯಾಪರ ವಹಿವಾಟು, ಪ್ರವಾಸೋದ್ಯಮಕ್ಕೆ ಸಹ ಅನುಕೂಲವಾಗಲಿದೆ ಎಂಬುದು ಬೇಡಿಕೆಯಾಗಿದೆ.

ಸದ್ಯದ ವೇಳಾಪಟ್ಟಿಯಂತೆ ಧಾರವಾಡ-ಕೆಎಸ್ಆರ್ ಬೆಂಗಳೂರು (ರೈಲು ಸಂಖ್ಯೆ 20662, ಮಂಗಳವಾರ ಹೊರತುಪಡಿಸಿ) 13:15ಕ್ಕೆ ಧಾರವಾಡದಿಂದ ಹೊರಟು, ಎಸ್ಎಸ್‌ಎಸ್ ಹುಬ್ಬಳ್ಳಿ 13:35/13:40, 15:38/15:40 ದಾವಣಗೆರೆ, 18:18/18:20 ತುಮಕೂರು, 18.58:19:00 ಯಶವಂತಪುರ, 19:45 ಕೆಎಸ್ಆರ್ ಬೆಂಗಳೂರು ಆಗಮನ/ ನಿರ್ಗಮನ.

ಕೆಎಸ್ಆರ್ ಬೆಂಗಳೂರು-ಧಾರವಾಡ (ರೈಲು ಸಂಖ್ಯೆ 20661, 6 ದಿನ ಮಂಗಳವಾರ ಹೊರತುಪಡಿಸಿ) 5:45ಕ್ಕೆ ಕೆಎಸ್ಆರ್ ಬೆಂಗಳೂರು ನಿರ್ಗಮನ. ಯಶವಂತಪುರ 05.55/05.57, ತುಮಕೂರು 06.32/06.34, ದಾವಣಗೆರೆ 09.15/09.17, ಎಸ್‌ಎಸ್‌ಎಸ್ ಹುಬ್ಬಳ್ಳಿ 11.00/11.05, ಧಾರವಾಡ 12.10 ಆಗಮನ/ ನಿರ್ಗಮನವಾಗುತ್ತಿದೆ.

ಈ ರೈಲಿಗೆ ಹಾವೇರಿಯಲ್ಲಿ ನಿಲುಗಡೆ ನೀಡಲು ಸಾಧ್ಯವೇ? ಎಂಬ ಕುರಿತು ರೈಲ್ವೆ ಇಲಾಖೆ ಅಧಿಕಾರಿಗಳೇ ತೀರ್ಮಾನ ಮಾಡಬೇಕಿದೆ. ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ಸಿಕ್ಕಿದೆ, ಪ್ರಾಯೋಗಿಕ ಸಂಚಾರವೂ ಮುಗಿದಿದೆ. ಆದರೆ ಇನ್ನೂ ಸಹ ರೈಲು ಸಂಚಾರ ವಿಸ್ತರಣೆಯಾಗಿಲ್ಲ. ಈ ನಡುವೆಯೇ ಹಾವೇರಿಯಲ್ಲಿ ನಿಲುಗಡೆಯ ಬೇಡಿಕೆ ಇಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+