Red Chilli Price: ಮೆಣಸಿಕಾಯಿ ದರ ಇಳಿಕೆ- ಬ್ಯಾಡಗಿ ಮಾರುಕಟ್ಟೆ ಕಚೇರಿ ಮೇಲೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ, ಉದ್ವಿಗ್ನ
ಹಾವೇರಿ, ಮಾರ್ಚ್ 11: ಜಿಲ್ಲೆಯಲ್ಲಿ ಏಷ್ಯಾಖಂಡದಲ್ಲಿಯೇ ಪ್ರಸಿದ್ಧವಾಗಿ ಬ್ಯಾಡಗಿ ಮೆಣಸಿಕಾಯಿ ಮಾರುಕಟ್ಟೆ ಇದೆ. ಮೆಣಸಿನಕಾಯಿ ದರ ದಿಢೀರ್ ಕುಸಿತಗೊಂಡಿದ್ದಕ್ಕೆ ರೈತರು ಆಕ್ರೋಶ ಗೊಂಡು, ಮಾರುಕಟ್ಟೆ ಆಡಳಿತ ಕಚೇರಿ ಮೇಲೆ (APMC) ಕಲ್ಲುತೂರಾಟ ನಡೆಸಿದ್ದಾರೆ. ಕಚೇರಿ ಮುಂದಿನ ಕಾರನ್ನು ಪಲ್ಟಿ ಮಾಡಿದ್ದಲ್ಲದೇ, ಮತ್ತೊಂದು ಕಾರಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಹಾವೇರಿಯ ಬ್ಯಾಡಗಿಯ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶ ಉದ್ವಿಗ್ನಗೊಂಡಿದೆ. ಮಾರುಕಟ್ಟೆಯ ಕಚೇರಿಯಲ್ಲಿ ಗಾಜು, ಮೇಜನ್ನು ರೈತರು ಒಡೆದು ಹಾಕಿದ್ದಾರೆ. ಸೋಮವಾರ ಸಂಜೆ ಘಟನೆ ನಡೆದಿದ್ದು, ಸದ್ಯ ಇಲ್ಲಿ ಕ್ಷಣ ಕ್ಷಣಕ್ಕೆ ಪರಿಸ್ಥಿತಿ ಬಿಗುಡಾಯಿಸುತ್ತಿದೆ.

ಘಟನೆ ಸುದ್ದಿ ತಿಳಿದು ಸ್ಥಳಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ದೌಡಾಯಿಸಿದ್ದಾರೆ. ಆಕ್ರೋಶಗೊಂಡಿರುವ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ದರ ರೂ.20,000 ನಿಂದ 8000ಕ್ಕೆ ಇಳಿಕೆ
ಎಂದಿನಂತೆ ಇತ್ತೀಚೆಗೆ ದಿನಗಳ ಹಿಂದೆ 4.8 ಲಕ್ಷ ಚೀಲಗಳು ಪ್ರಸಿದ್ಧ ಬ್ಯಾಡಗಿ ಮಾರುಕಟ್ಟೆಗೆ ಆವಕವಾಗಿದ್ದವು. ಉತ್ಪನ್ನ ಹೆಚ್ಚು ಹೆಚ್ಚು ಮಾರುಕಟ್ಟೆಗೆ ಬಂದ ಪರಿಣಾಮ ಬೆಲೆಯನ್ನು ವರ್ತಕರು ದಿಢೀರನೇ ಇಳಿಸಿದ್ದಾರೆ. ಈ ಹಿಂದೆ ಪ್ರತಿ ಕ್ವಿಂಟಾಲ್ ಕೆಂಪು ಒಣ ಮೆಣಸಿನಕಾಯಿಗೆ ರೂ.20,000 ಇದ್ದ ಮೆಣಸಿಕಾಯಿ ಬೆಲೆ ಸೋಮವಾರ ದಿಢೀರನೇ ರೂ. 8000ಕ್ಕೆ ಕುಸಿತಗೊಂಡಿದೆ.
ಬರಗಾಲದಲ್ಲಿ ಕಷ್ಟ ಪಟ್ಟು ಸಾಲ ಮಾಡಿ ರೈತರು ಬಂಗಾರದಂತ ಬೆಳೆ ಬೆಳೆದಿದ್ದರು. ಈ ಮೆಣಸಿನಕಾಯಿಯೆ ಲಾಭ ತಂದುಕೊಡಲಿದೆ ಎಂದು ಭಾವಿಸಿದ್ದರು. ಆದರೆ ದರ ಇಳಿಕೆಯು ಅವರಿಗೆ ಆಘಾತ ನೀಡಿದೆ. ಹೀಗಾಗಿ ಮಾರುಕಟ್ಟೆ ಆಡಳಿತದ ವಿರುದ್ಧ, ವರ್ತಕರ ವಿರುದ್ಧ ರೈತರ ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳದಲ್ಲಿ ಪ್ರತಿಭಟಿಸಿದ್ದಾರೆ.
ಬೆಲೆ ಇಳಿಕೆಯಿಂದ ರೈತರಿಗೆ ಅನ್ಯಾಯ
ಬೆಲೆ ಇಳಿಕೆ ವಿಚಾರ ತಿಳಿಯುತ್ತಿದ್ದ ಬ್ಯಾಡಗಿ ಮಾರುಕಟ್ಟೆ ಆಡಳಿತದ ಕಚೇರಿ ಮುಂದೆ ಜಮಾಯಿಸಿದ್ದಾರೆ. ಕಚೇರಿ ಹೊರಗಿದ್ದ ಕಾರಿಗೆ ಬಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಕಚೇರಿ ಮೇಲೆ ಕಲ್ಲು ತೂರಾಡಿ ನಮಗೆ ಅನ್ಯಾವಾಗಿದೆ ಎಂದು ಘೋಷಣೆ ಕೂಗಿದ್ದಾರೆ.
ಬಳಿಕ ಕಚೇರಿ ಮುಂದೆ ಇದ್ದ ಮತ್ತೊಂದು ಕಾರೊಂದನ್ನು ಪಲ್ಟಿ ಮಾಡಿ, ಗ್ಲಾಜು ಪುಡಿ ಪುಡಿ ಮಾಡಿದ್ದಾರೆ. ನಂತರ ಒಳಗೆ ನಡೆದ ರೈತರು ಕಚೇರಿ ಪಿಠೋಪಕರಣ ಧ್ವಂಸಗೊಳಿಸಿದ್ದಾರೆ. ಈ ವೇಳೆ ಕಚೇರಿ ಒಳಗೆ ಇದ್ದ ವರ್ತರಕು ಒಬ್ಬೊಬ್ಬರಾಗೇ ಹೊರ ಬಂದಿದ್ದಾರೆ. ಅವರನ್ನು ಎಳೆದು ಥಳಿಸಿದ ಘಟನೆ ನಡೆದಿದೆ.
ರೈತರಿಗೆ ಗಾಯದ ಮೇಲೆ ಬರೆ
ಬರಗಾಲದಲ್ಲೂ ಸಾಲ ಸೂಲ ಮಾಡಿ ಕಷ್ಟ ಪಟ್ಟು ರೈತರು ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಆದರೆ ಇಳುವರಿ ನಿರೀಕ್ಷೆ ಮಟ್ಟದಲ್ಲಿ ಬಂದರೂ ಸಹಿತ ಬೆಲೆ ಇಳಿಕೆ ಮಾಡಿದ್ದರಿಂದ ಅವರು ಹತಾಶರಾದರು. ಬರಗಾಲ ಗಾಯಕ್ಕೆ ಬೆಲೆ ಇಳಿಕೆ ಬರೆ ಎಳೆದಂತಾಗಿದೆ. ಬರಗಾಲದಲ್ಲಿ ರೈತರಿಗೆ ಆಸರೆಯಾಗುತ್ತಿದ್ದ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತದಂತೆ ರೈತರು ಕಂಗಾಲಾಗಿದ್ದಾರೆ. ಆಕ್ರೋಶ ತಾಳಲಾಗದೇ ಕಚೇರಿ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹಾವೇರಿ APMC ಗಲಾಟೆ ವಿಚಾರ: ಗೃಹ ಸಚಿವರ ಪ್ರತಿಕ್ರಿಯೆ
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಬೆಲೆ 20000 ರೂ.ನಿಂದ 8 ,000ಕ್ಕೆ ಇಳಿಕೆ ಆಗಿದೆ. ಇದು ಕೇವಲ ಆ ಎಪಿಎಂಸಿಯಲ್ಲಿ ಆಗಿದೆಯೋ? ಇಲ್ಲ ಬೇರೆ ಕಡೆಗೂ ಆಗಿದೆಯೋ ಎಂಬ ಬಗ್ಗೆ ಪರಿಶೀಲಿಸುತ್ತೇವೆ.
ಬೆಲೆ ಕುಸಿತ ಹಿನ್ನೆಲೆ ಗಲಾಟೆ ಆಗಿದ್ದು, ರೈತರು ಮಾರುಕಟ್ಟೆಯ ಎಪಿಎಂಸಿ ಕಚೇರಿ ನುಗ್ಗಿದ್ದಾರೆ. ಅಲ್ಲದೇ ಕುರ್ಚಿಗಳನ್ನು ಒಡೆದು ಹಾಕಿ, ಎರಡು ವಾಹನ ಸುಟ್ಟಿದ್ದಾರೆ. ತಕ್ಷಣವೇ ಪೊಲೀಸರನ್ನ ಕಳಿಸಿದ್ದೇವೆ, ಸದ್ಯ ನಿಯಂತ್ರಣದಲ್ಲಿದೆ. ಮೆಣಸಿನಕಾಯಿ ಧಿಡೀರ್ ಬೆಲೆ ಕುಸಿತಕ್ಕೆ ಕಾರಣ ತಿಳಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಇದೆಲ್ಲ ನೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಿಎಂ ಮನೆಗೆ ರೈತರು ಕಲ್ಲೆಸೆಯುತ್ತಾರೆ ಎಚ್ಚರಿಕೆ
ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನೀತಿಗಳಿಂದ ರಾಜ್ಯದಲ್ಲಿ ರೈತರು ದಿನಕ್ಕೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಬ್ಯಾಡಗಿ ಮೆಣಸಿನಕಾಯಿ ಬೆಲೆ ಕುಸಿತದಿಂದ ಬೇಸತ್ತು ರೈತರು ಆಕ್ರೋಶದಿಂದ ಹಾವೇರಿಯ ಎಪಿಎಂಸಿ ಕಚೇರಿ ಮೇಲೆ ದಾಳಿ ಮಾಡಿರುವ ಘಟನೆಗೆ ಸಿಎಂ ಸಿದ್ದರಾಮಯ್ಯನವರ ದುರಾಡಳಿತವೇ ಕಾರಣ ಎಂದು ಬಿಜೆಪಿ ದೂರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್ ಅಶೋಕ್ ಅವರು, ಬರ ಪರಿಸ್ಥಿತಿಯಿಂದ ಬೆಳೆ ನಾಶವಾಗಿ ಈಗಾಗಲೇ ನಷ್ಟ ಎದುರಿಸುತ್ತಿರುವ ರೈತರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಪರಿಹಾರ ಕೊಟ್ಟಿದ್ದಿದ್ದರೆ ರೈತರು ಇವತ್ತು ಇಷ್ಟೊಂದು ಹತಾಶರಾಗುವ, ಸಹನೆ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ.
ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕು. ಅದು ಬಿಟ್ಟು ಈ ಘಟನೆಯನ್ನೇ ನೆಪ ಮಾಡಿಕೊಂಡು ರೈತರ ಮೇಲೆ ಲಾಠಿ ಚಾರ್ಜ್ ಮಾಡುವುದು, ಕೇಸು ದಾಖಲಿಸುವಂತಹ ದೌರ್ಜನ್ಯ ಮಾಡಿದರೆ, ಮುಂದೆ ರೈತರು ವಿಧಾನಸೌಧಕ್ಕೆ, ಮುಖ್ಯಮಂತ್ರಿಗಳ ಮನೆಗೇ ಕಲ್ಲೆಸೆದು ಮಾಡಿ, ಬೆಂಕಿ ಹಚ್ಚುವ ದಿನ ದೂರವಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications