ಎ ಮಂಜು ಬಿಜೆಪಿ ಸೇರುತ್ತಾರಾ? ತೀರ್ಮಾನ ಹೇಳಲಿದ್ದಾರೆ ಸೋಮವಾರ
Recommended Video

ಹಾಸನ, ಮಾರ್ಚ್ 16 : ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದಿರುವ ಮಾಜಿ ಶಾಸಕ ಎ ಮಂಜು ಅವರು ಇಂದೇ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗೆ ತಾತ್ಕಾಲಿಕ ತಡೆಯುಂಟಾಗಿದ್ದು, ತಮ್ಮ ನಿರ್ಧಾರವನ್ನು ಸೋಮವಾರ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಎ ಮಂಜು ಅವರೊಂದಿಗೆ ಮಾತನಾಡಿದ ನಂತರ, ಎ ಮಂಜು ಅವರು ಬಿಜೆಪಿ ಸೇರುವ ತಮ್ಮ ತೀರ್ಮಾನದ ಬಗ್ಗೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಕಾರ್ಯಕರ್ತರು ನಿಮ್ಮ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಮತ್ತು ನಿಮಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಅವರೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿದ ನಂತರ ತೀರ್ಮಾನ ತಿಳಿಸುವುದಾಗಿ ಎ ಮಂಜು ಹೇಳಿದ್ದಾರೆ.

ಇನ್ನೂ ನಾನು ಬೇಲೂರು, ಹೊಳೆನರಸೀಪುರ ತಾಲೂಕಿಗೆ ಹೋಗಬೇಕು. ಕುಟುಂಬದ ವಿರುದ್ಧವಾಗಿ ಮತ್ತು ದೇಶದ ಪರವಾಗಿ ಎಲ್ಲರೂ ಇರಬೇಕು ಎಂದು ಒಟ್ಟಾರೆ ಅಭಿಪ್ರಾಯವನ್ನ ಹೇಳಿದ್ದಾರೆ ಕಾರ್ಯಕರ್ತರು. ನನ್ನ ನಿರ್ಧಾರ ಏನಿದೆ ಅನ್ನುವುದಕ್ಕಿಂತ, ಅವರ ನಿರ್ಧಾರದ ಪರವಾಗಿ ನಾನಿರುತ್ತೇನೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಅವರ ನಿರ್ಧಾರ ಏನಿದೆಯೆಂದರೆ, ನೀವೆಲ್ಲಿರುತ್ತೀರೋ ನಾವೂ ಅಲ್ಲಿಯೇ ಇರುತ್ತೇವೆ ಎಂದಿದ್ದಾರೆ. ಕಾರ್ಯಕರ್ತರ ಭಾವನೆಯಂತೆ ನಾನು ನಡೆದುಕೊಳ್ಳುತ್ತೇನೆ ಎಂದಿರುವ ಎ ಮಂಜು ಅವರು, ಭಾರತೀಯ ಜನತಾ ಪಕ್ಷ ಸೇರುವ ಬಗ್ಗೆ ದೊಡ್ಡ ಸುಳಿವನ್ನಂತೂ ನೀಡಿದ್ದಾರೆ. ನಿರ್ಧಾರವನ್ನು ಸೋಮವಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
ಅರಕಲಗೂಡಿನ ಮಾಜಿ ಶಾಸಕ ಎ ಮಂಜು ಅವರು ಶನಿವಾರ ಬೆಳಿಗ್ಗೆ, ಬಿಜೆಪಿಯ ಹಾಸನದ ಶಾಸಕ ಪ್ರೀತಂ ಗೌಡ ಅವರ ಮನೆಯಲ್ಲಿ ಉಪಾಹಾಸ ಸೇವಿಸಿದ್ದು, ಮಂಜು ಅವರು ಬಿಜೆಪಿ ಸೇರುವ ಸುದ್ದಿಗೆ ರೆಕ್ಕೆಪುಕ್ಕ ನೀಡಿದೆ. ಮಂಜು ಅವರು ಬಿಜೆಪಿಗೆ ಬಂದರೆ ಯಾವತ್ತೂ ಸ್ವಾಗತವಿರುತ್ತದೆ ಎಂದು ಪ್ರೀತಂ ಗೌಡ ಅವರ ಹೇಳಿದ್ದಾರೆ.
ಈ ಬಾರಿ ಲೋಕಸಭೆ ಚುನಾವಣೆ ನಡೆಯುತ್ತಿರುವುದು ದೇಶದ ಭದ್ರತೆಗಾಗಿ, ಈ ಕಾರಣಕ್ಕಾಗಿ ಭಾರತೀಯ ಜನತಾ ಪಕ್ಷ ಗೆಲ್ಲಲೇಬೇಕು ಮತ್ತು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲೇಬೇಕು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬಲವರ್ಧನೆಗೆ ಎ ಮಂಜು ಬಿಜೆಪಿ ಸೇರಿದರೆ ಅವರಿಗೆ ಸ್ವಾಗತ ಎಂದಿದ್ದಾರೆ ಪ್ರೀತಂ.
ಒಂದು ವೇಳೆ ದೇವೇಗೌಡರೇ ಹಾಸನದಲ್ಲಿ ಸ್ಪರ್ಧಿಸುವುದಾದರೆ ನಾನು ತುಂಬು ಹೃದಯದಿಂದ ಪ್ರಚಾರ ಮಾಡುತ್ತೇನೆ. ಆದರೆ, ಪ್ರಜ್ವಲ್ ರೇವಣ್ಣನಂಥವನಿಗಾಗಿ ಮತ ಹೇಗೆ ಕೇಳುವುದು ಎಂಬ ದ್ವಂದ್ವಕ್ಕೆ ಹಿರಿಯ ನಾಯಕ ಎ ಮಂಜು ಸಿಲುಕಿದ್ದಾರೆ. ಗೌಡರು ನಿಲ್ಲಲಿ ಎಂದು ಹೇಳುವ ಬದಲು ತಮ್ಮ ಮಗನೇ ನಿಲ್ಲಲಿ ಎನ್ನುತ್ತಿರುವ ರೇವಣ್ಣ ಅವರಿಗೆ ಬುದ್ಧಿ ಕಮ್ಮಿ ಎಂದು ಎ ಮಂಜು ಕೆಲ ದಿನಗಳ ಹಿಂದೆ ಟೀಕಿಸಿದ್ದರು.












Click it and Unblock the Notifications