ಬಿಸಿಲೆ ಘಾಟಿಯ ಕಾಡಾನೆ ದಾಳಿಯಲ್ಲಿ ವಾಹನದಲ್ಲಿದ್ದವರು ಅಪಾಯದಿಂದ ಪಾರು, ಬಚಾವ್ ಮಾಡಿದ್ದು ಯಾರು?!
ಹಾಸನ, ಅಕ್ಟೋಬರ್. 30: ರಸ್ತೆಯಲ್ಲಿ ಬರುತ್ತಿದ್ದ ವಾಹನದ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಸೋಮವಾರ ತಡರಾತ್ರಿ (ಅ.29) ಬಿಸಿಲೆ ಘಾಟ್ ನಲ್ಲಿ ನಡೆದಿದೆ. ಬಿಸಿಲೆ ಘಾಟಿಯ ಕುಲ್ಕುಂದ ಗೇಟಿನ ಬಳಿ ಕಳೆದ ರಾತ್ರಿ ವಾಹನದ ಮೇಲೆ ಕಾಡಾನೆ ದಾಳಿ ಮಾಡಿದ್ದು, ಆನೆ ದಾಳಿ ಸಂದರ್ಭದಲ್ಲಿ ವಾಹನದಲ್ಲಿದ್ದ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಅವರು ಹಾಗೆ ಪಾರಾಗಿದ್ದಕ್ಕೆ ಕಾರಣ ಯಾರು ಗೊತ್ತಾ? ಮುಂದೆ ಓದಿ....
ಘಟನೆಯ ವಿವರ
ಸೋಮವಾರಪೇಟೆ ಮೂಲದ ವ್ಯಾಪಾರಿಗಳಾದ ಹಮೀದ್ ಮತ್ತು ಅಬ್ದುಲ್ ಬಿಸಿಲೆ ಘಾಟ್ ಮೂಲಕ ಮಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಹಮೀದ್ ಹಾಗೂ ಅಬ್ದುಲ್ ಸಲೀಂ ಮೂಲತಃ ಮೀನು ವ್ಯಾಪಾರಿಗಳು. ಕೊಡಗಿನ ಸೋಮವಾರಪೇಟೆಯಿಂದ ಹಸಿ ಮೀನು ತರಲು ಮಂಗಳೂರಿಗೆ ಬರುತ್ತಿದ್ದರು. ಕುಲ್ಕುಂದ ದೇವರ ಗುಡ್ಡ ಬಳಿ ಬರುವಾಗ ತಿರುವಿನಲ್ಲಿ ಕಾಡಾನೆಯೊಂದು ಮರಿಯೊಂದಿಗೆ ರಸ್ತೆ ಮಧ್ಯೆ ಕಾಣಿಸಿಕೊಂಡಿದೆ.

ರಸ್ತೆಯಲ್ಲಿ ಸಾಗಿ ಬರುತ್ತಿದ್ದ ಇವರ ಮಹೀಂದ್ರ ಜೀತೊ ವಾಹನದ ಮೇಲೆ ಆನೆ ಏಕಾಏಕಿ ದಾಳಿ ಮಾಡಿದೆ.
ಆನೆ ದಾಳಿಯಿಂದ ಈ ಇಬ್ಬರೂ ಪಾರಾಗಿದ್ದಾರೆ. ವಾಹನದ ಮುಂಭಾಗದ ಕನ್ನಡಿಯ ಮೇಲೆ ಆನೆ ಸೊಂಡಿಲಿನ ಪ್ರಹಾರ ನಡೆಸಿದ್ದು, ಕನ್ನಡಿ ಪುಡಿ ಪುಡಿಯಾಗಿದೆ. " ಆದರೆ ಆ ವೇಳೆ ಆನೆಯ ಮರಿ ಕೂಗಿದ್ದರಿಂದ ಆನೆ ವಾಹನ ಬಿಟ್ಟು ಕಾಡು ಸೇರಿದೆ' ಎಂದು ಹಮೀದ್ ಮತ್ತು ಅಬ್ದುಲ್ ತಿಳಿಸಿದ್ದಾರೆ. ಅಲ್ಲಿಗೆ ತಾಯಿ ಆನೆ ಅಲ್ಲಿಂದ ಹೊರಡಲು ಕಾರಣ ಯಾರು ಅಂತ ಗೊತ್ತಾಯಿತಲ್ಲ?!

ಈ ಘಟನೆಯ ನಂತರ ದಾರಿಯಲ್ಲಿ ಬರುತ್ತಿದ್ದ ಬೇರೊಂದು ವಾಹನವೇರಿ ಹಮೀದ್ ಮತ್ತು ಸಲೀಮ್ ಮಂಗಳೂರು ತಲುಪಿದ್ದಾರೆ.












Click it and Unblock the Notifications