ಬಿಜೆಪಿ ಸರ್ಕಾರ ಕಿತ್ತು ಎಸೆಯಿರಿ: ಸಿದ್ದರಾಮಯ್ಯ ಕರೆ
ಹಾಸನ, ಮೇ30: "ದೇಶ ಉಳಿಸಲು, ಸಂವಿಧಾನ ಉಳಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ರಾಜದಲ್ಲಿರುವ ಬಿಜೆಪಿ ಸರ್ಕಾರ ಕಿತ್ತು ಎಸೆಯಿರಿ, ದಯವಿಟ್ಟು ಈ ರಾಜ್ಯ ಉಳಿಸಿ ಕೈ ಮುಗಿಯುತ್ತೀನಿ" ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿಗೆ ಎಂದು ತಪ್ಪುವುದಿಲ್ಲ" ಎಂದರು.
"ನಮ್ಮ ಅಭ್ಯರ್ಥಿ ತಂದೆ ಶಾಸಕರು, ಸಂಸದರು, ಸಚಿವರಾಗಿಯು ಕೆಲಸ ಮಾಡಿದ್ದಾರೆ, ಮಾದೇಗೌಡ ಓರ್ವ ಶಿಕ್ಷಣ ಪ್ರೇಮಿ, ರೈತ ಪರ ಹೋರಾಟಗಾರ ಆಗಿದ್ದರು. ಕೊನೆ ಉಸಿರಿರುವವರೆಗು ಹೋರಾಟ ಮಾಡಿದ್ದು ಮಾದೇಗೌಡರ ಪುತ್ರ ಮಧು ಮಾದೇಗೌಡ, ಇವರು ಗೆದ್ದರೆ ಪದವೀಧರರ ಸಮಸ್ಯೆ ಬಗೆಹರಿಯುತ್ತೆ" ಎಂದು ಹೇಳಿದರು.
"ಈ ಚುನಾವಣೆಯಲ್ಲಿ ಮಧು ಮಾದೇಗೌಡ ಗೆದ್ದರೆ ಅಸೆಂಬ್ಲಿ ಚುನಾವಣೆಗೆ ದಿಕ್ಸೂಚಿ ಆಗುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮಾತ್ರ ರಾಜ್ಯ ಉಳಿಯುತ್ತದೆ ಹಾಗಾಗಿ ನಮ್ಮ ಅಭ್ಯರ್ಥಿ ಗೆಲ್ಲಿಸಿ" ಎಂದು ಮತದಾರರಲ್ಲಿ ಸಿದ್ದರಾಮಯ್ಯ ಮನವಿ ಮಾಡಿದರು.

ರಾಜ್ಯ ಉಳಿಸಿ ನಿಮಗೆ ಕೈ ಮುಗಿತೀನಿ
"ಮನಮೋಹನ್ ಸಿಂಗ್ ಇದ್ದಾಗ 53 ಲಕ್ಷದ 11 ಸಾವಿರ ಕೋಟಿ ಸಾಲಯಿತ್ತು. ಈಗ 155 ಲಕ್ಷ ಕೋಟಿ ಸಾಲ ಆಗಿದೆ, ಈಗ ದೇಶದ ಪ್ರತಿಯೊಬ್ಬರೂ 1.68 ಲಕ್ಷ ಮೊತ್ತದ ಸಾಲಗಾರರು, ಇಂತಹ ಬಿಜೆಪಿ ಇರಬೇಕಾ, ಕಿತ್ತು ಎಸೆಯಿರಿ, ದಯವಿಟ್ಟು ರಾಜ್ಯ ಉಳಿಸಿ ನಿಮಗೆ ಕೈ ಮುಗಿತೀನಿ" ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ನನ್ನ ಭಾಷಣ ಕೇಳಿ ಎಂದು ಮೈಕ್ ನಲ್ಲಿ ಮನವಿ ಮಾಡಿದ ಮುಖಂಡ
"ಸಿದ್ದರಾಮಯ್ಯ ಅವರೇ ಹೋಗಬೇಡಿ ಕುಳಿತುಕೊಳ್ಳಿ" ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಭಾಷಣ ಕೇಳುವಂತೆ ವೇದಿಕೆಯಲ್ಲೇ ನಿಂತು ಸಿದ್ದರಾಮಯ್ಯಗೆ ಮನವಿ ಮಾಡಿಕೊಂಡಿದ್ದಾರೆ.
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಕೂಗು ಇದೀಗ ಚರ್ಚೆಗೂ ಕಾರಣವಾಗಿದೆ. ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಮುಗಿದ ತಕ್ಷಣ ಸಭೆ ಮುಕ್ತಾಯಗೊಳ್ಳುತ್ತಿತ್ತು.
ಈ ಬೆನ್ನಲ್ಲೇ ಸಿದ್ದರಾಮಯ್ಯ ಅವರೊಂದಿಗೆ ಇತರ ಮುಖಂಡರೂ ವೇದಿಕೆಯಿಂದ ನಿರ್ಗಮಿಸುತ್ತಿದ್ದರು. ಈ ವೇಳೆ ಮೈಕ್ ಹಿಡಿದು ನಿಂತ ಸ್ಥಳೀಯ ಮುಖಂಡರೊಬ್ಬರು ನೀವು ನಿಜವಾದ ಕಾಂಗ್ರೆಸ್‌ನವರಾದ್ರೆ ಈಗ ಕುಳಿತುಕೊಳ್ಳಿ, ನನ್ನ ಭಾಷಣ ಕೇಳಿ ಎಂದು ಮೈಕ್ ನಲ್ಲಿ ಮತ್ತೆ ಮತ್ತೆ ಮನವಿ ಮಾಡಿದರು. ಆದರೂ ಇದ್ಯಾವುದು ಕೇಳಿಸದಂತೆ ಸಿದ್ದರಾಮಯ್ಯ ವೇದಿಕೆಯಿಂದ ಕೆಳಗಿಳಿದು ಹೊರಟೇಬಿಟ್ಟರು.
ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಈಗಾಗಲೇ ಭಿನ್ನಮತ ಸ್ಫೋಟಗೊಂಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಮುಖಂಡನ ಕೂಗು, ಪ್ರತಿಪಕ್ಷಗಳ ಟೀಕೆಗೆ ಅಸ್ತ್ರವಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಸ್ತ ಲಾಘವ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಸ್ತ ಲಾಘವ ಮಾಡಲು ಕಾರಿನ ಹಿಂದೆ ಓಡಿ ಹೋಗಿ ಅಭಿಮಾನಿಯೊಬ್ಬರು ಬಿದ್ದ ಪ್ರಸಂಗ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಕಾರ್ಯಕ್ರಮ ವೇಳೆ ಈ ಘಟನೆ ನಡೆದಿದೆ.
ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡರ ಮನೆಯಲ್ಲಿ ಊಟ ಮುಗಿಸಿ ಸಿದ್ದರಾಮಯ್ಯ ಸಭೆಗೆ ಹೊರಟರು. ಈ ವೇಳೆ ಅಭಿಮಾನಿಯೊಬ್ಬರು ಅವರ ಕಾರಿನ ಹಿಂದೆ ಓಡಿ ಹೋಗಿದ್ದಾರೆ. ಆಗ ಕಾಲುಜಾರಿ ಕಾರಿನ ಬಳಿ ಅಭಿಮಾನಿ ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೇ ಅಭಿಮಾನಿಯನ್ನು ರಕ್ಷಣೆ ಮಾಡಿ ಭಾರೀ ಅನಾಹುತದಿಂದ ಪಾರು ಮಾಡಿದ್ದಾರೆ. ಒಟ್ಟಿನಲ್ಲಿ ಸ್ಥಳದಲ್ಲಿದ್ದವರ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಸಿದ್ದರಾಮಯ್ಯ ಅಭಿಮಾನಿ ಪಾರಾಗಿದ್ದಾರೆ.












Click it and Unblock the Notifications