ಮಹಾಮಸ್ತಕಾಭಿಷೇಕ ಕಾಮಗಾರಿಗೆ ಸಿಎಂ ಶಿಲಾನ್ಯಾಸ
ವಿಂಧ್ಯಗಿರಿ ಪರ್ವತದಲ್ಲಿರುವ ಜೈನರ ಮಹಾಮುನಿ ಬಾಹುಬಲಿಯ 57 ಅಡಿ ಎತ್ತರದ ಬೃಹತ್ ಏಕಶಿಲಾ ಪ್ರತಿಮೆ ಸ್ಥಾಪನೆಯಾಗಿದ್ದು 983ರಲ್ಲಿ. ಬೆಂಗಳೂರಿನಿಂದ 143 ಕಿ.ಮೀ. ದೂರದಲ್ಲಿರುವ ಈ ಸುಂದರ ಮೂರ್ತಿಗೆ 2006ರಲ್ಲಿ ಮಹಾಮಸ್ತಿಕಾಭಿಷೇಕವಾಗಿತ್ತು.
ಹಾಸನ, ಏಪ್ರಿಲ್ 24 : ಶ್ರವಣಬೆಳಗೊಳದಲ್ಲಿ 2018ರಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಸಿದ್ದತೆಗಳು ಭರದಿಂದ ಸಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಸ್ತಕಾಭಿಷೇಕ್ಕಾಗಿ 171.73 ಕೋಟಿ ರುಪಾಯಿಗಳ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.
ಪ್ರತಿ 12 ವರ್ಷಗಳಿಗೊಮ್ಮೆ ಗೊಮ್ಮಟೇಶ್ವರನಿಗೆ ನಡೆಯುವ ಮಹಾಮಸ್ತಕಾಭಿಷೇಕ 2018ರ ಫೆಬ್ರವರಿಯಲ್ಲಿ ಜರುಗಲಿದೆ. ಈ ವೈಭವದ ಆಚರಣೆಯನ್ನು ಕಣ್ತುಂಬಿಕೊಳ್ಳಲು ದೇಶವಿದೇಶಗಳಿಂದ ಲಕ್ಷಾಂತರ ಜನರು ಬರಲಿದ್ದು, ಇದಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. [2018ಕ್ಕೆ ಮಹಾಮಸ್ತಕಾಭಿಷೇಕ, ಗಿನ್ನೆಸ್ ದಾಖಲೆಗೆ ಸೋನಾಕ್ಷಿ ಸಿನ್ಹಾ]

ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಕೇಂದ್ರ ಸಚಿವರು, ದಿಗಂಬರ ಮುನಿಗಳು ಶ್ರವಣಬೆಳಗೊಳಕ್ಕೆ ಬರಲಿದ್ದಾರೆ. ಈ ಉತ್ಸವವನ್ನು ಯಶಸ್ವಿಯಾಗಿಸಲು ಸಿದ್ದರಾಮಯ್ಯನವರು ಖುದ್ದು ಆಸಕ್ತಿ ತೋರಿಸಿದ್ದಾರೆ.
ಕಳೆದ ಬಾರಿ ಹಣಕಾಸು ಸಚಿವನಾಗಿ ಮಹಾಮಸ್ತಕಾಭಿಷೇಕಕ್ಕೆ ಹಣ ಕೊಟ್ಟಿದ್ದೆ. ಮಹಾಮಸ್ತಕಾಭಿಷೇಕಕ್ಕೆ ಬರಲು ಅವಕಾಶ ಇರಲಿಲ್ಲ. ಆದರೆ ಈ ಬಾರಿ ನಾನೇ ನಿಂತು ಮಹಾಮಸ್ತಕಾಭಿಷೇಕ ಯಶಸ್ಸಿಗೆ ಶ್ರಮಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು. [ಶ್ರವಣಬೆಳಗೊಳದಲ್ಲಿ 2018ಕ್ಕೆ ಮಹಾಮಸ್ತಕಾಭಿಷೇಕ]

ಮುಖ್ಯಮಂತ್ರಿಗಳ ಜೊತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಸಚಿವರಾದ ಎ ಮಂಜು, ಶ್ರವಣಬೆಳಗೊಳ ಜೈನ ಮಠಾಧೀಶರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಗಣ್ಯರು ಉಪಸ್ಥಿತರಿದ್ದರು. ಶ್ರವಣಬೆಳಗೊಳದಲ್ಲಿ ಕಾರ್ಯಕ್ರಮ ಜರುಗಿತು.

ವಿಂಧ್ಯಗಿರಿ ಪರ್ವತದಲ್ಲಿರುವ ಜೈನರ ಮಹಾಮುನಿ ಬಾಹುಬಲಿಯ 57 ಅಡಿ ಎತ್ತರವಿರುವ ಬೃಹತ್ ಏಕಶಿಲಾ ಪ್ರತಿಮೆ ಸ್ಥಾಪನೆಯಾಗಿದ್ದು ಕ್ರಿಸ್ತಶಕ 983ರಲ್ಲಿ. ಬೆಂಗಳೂರಿನಿಂದ 143 ಕಿ.ಮೀ. ದೂರದಲ್ಲಿರುವ ಈ ಸುಂದರ ಮೂರ್ತಿಗೆ 2006ರಲ್ಲಿ ಮಹಾಮಸ್ತಿಕಾಭಿಷೇಕವಾಗಿತ್ತು.












Click it and Unblock the Notifications