Hassan Firing: ಹಾಸನದಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್- ಆರೋಪಿ ಕಾಲಿಗೆ ಗುಂಡೇಟು!
ಹಾಸನ ಆಗಸ್ಟ್ 11: ದರೋಡೆ ಪ್ರಕರಣದಲ್ಲಿ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಈ ಪ್ರಕರಣದಿಂದ ಹಾಸನದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಪೊಲೀಸ್ ಗುಂಡಿನ ದಾಳಿಗೆ ಜನ ಬೆಚ್ಚಿಬಿದ್ದಿದ್ದಾರೆ. ತಪ್ಪಿಸಿಕೊಳ್ಳುತ್ತಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಆರೋಪಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಬೂಕನಬೆಟ್ಟದ ಬಳಿ ಈ ಘಟನೆ ನಡೆದಿದೆ. ಆರೋಪಿ ಸತೀಶ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ಮುಂಜಾನೆ ಬಂಧಿಸಲು ತೆರಳಿದ್ದ ವೇಳೆ ಪೊಲೀಸರಿಂದ ಫೈರಿಂಗ್ ನಡೆದಿದೆ. ಒಂದು ತಿಂಗಳ ಅಂತರದಲ್ಲಿ ಎರಡು ದರೋಡೆ ಪ್ರಕರಣ ನಡೆಸಿದ್ದ ಆರೋಪ ಈತನ ಮೇಲಿತ್ತು.

ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಆರೋಪಿ ಸತೀಶ್ ಆಟ್ಯಾಕ್ ಮಾಡಲು ಮುಂದಾಗಿದ್ದನು. ಡ್ರ್ಯಾಗನ್ ನಿಂದ ಪೊಲೀಸ್ ಕಾನ್ಸಟೇಬಲ್ ಪುಟ್ಟರಾಜ್ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿ ಸತೀಶ್ ಹಾಸನದ ಹಿಮ್ಸ್ ಗೆ ದಾಖಲು ಮಾಡಲಾಗಿದೆ. ಅಲ್ಲದೆ ಆರೋಪಿಯಿಂದ ದಾಳಿಗೊಳಗಾಗಿ ಗಾಯಗೊಂಡಿದ್ದ ಪೊಲೀಸ್ ಕಾನ್ಸಟೇಬಲ್ ಪುಟ್ಟರಾಜುಗೂ ಹಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಸನದಲ್ಲಿ ಸತೀಶ್ ಮೇಲೆ ಹಲವಾರು ದೂರುಗಳಿದ್ದವು. ಆತನ ಮೇಲೆ ದರೋಡೆ ಆರೋಪಗಳು ಕೇಳಿ ಬಂದಿದ್ದವು. ಇದರಿಂದ ಇಂದು ಮುಂಜಾನೆ ಚನ್ನರಾಯಪಟ್ಟಣ ಹಾಗೂ ಹಿರೀಸಾವೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಅಲ್ಲದೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಪೊಲೀಸರು ರಕ್ಷಣೆಗಾಗಿ ದರೋಡೆ ಪ್ರಕರಣ ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗುಂಡು ಹಾರಿಸಿ ಆರೋಪಿ ಸತೀಶ್ ಸೆರೆಹಿಡಿಯುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಇದರಿಂದಾಗಿ ಹಾಸನದಲ್ಲಿ ಮತ್ತೆ ಪೊಲೀಸರ ಪಿಸ್ತೂಲ್ ಸದ್ದು ಮಾಡಿದ್ದು, ಆರೋಪಿ ಬಂಧನದಿಂದ ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಹಾಸನದಲ್ಲಿ ಗುಂಡಿನ ದಾಳಿಗಳು ಆಗಾಗ ನಡೆಯುತ್ತಲೇ ಇರುತ್ತವೆ.
ಹಾಸನದಲ್ಲಿ ಫೈರಿಂಗ್
ಹಾಸನದಲ್ಲಿ ಜೂನ್ 20ರಂದು ಹಾಡಹಗಲೇ ಗುಂಡಿನ ದಾಳಿ ನಡೆದಿತ್ತು. ವ್ಯಕ್ತಿಯೊಬ್ಬನ ಹತ್ಯೆ ಮಾಡಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದನು. ಹಾಸನದ ಹೊಯ್ಸಳ ನಗರ ಬಡಾವಣೆಯಲ್ಲಿ ಈ ಫೈರಿಂಗ್ ನಡೆದಿತ್ತು. ದಾಳಿಯಲ್ಲಿ ಒಬ್ಬ ವ್ಯಕ್ತಿಯ ಹತ್ಯೆಯಾಗಿದ್ದು, (Murder) ಮತ್ತೊಬ್ಬರು ಮೃತಪಟ್ಟಿದ್ದನು. ಒಬ್ಬ ವ್ಯಕ್ತಿಯ ಶವ ಕಾರಿನ ಒಳಗೆ ಕಂಡುಬಂದಿದ್ದು, ಕಾರಿನ ಹೊರಗಡೆ ಮತ್ತೊಂದು ಶವ ಪತ್ತೆಯಾಗಿತ್ತು. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹಾಸನದ ಕೆಆರ್ ಪುರಂ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಓರ್ವ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದನು. ಕಾರಿನ ಹೊರಗಿರುವ ಶವದ ತಲೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಸೈಟ್ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿರುವ ಮಾಹಿತಿ ಇದೆ.












Click it and Unblock the Notifications