ಹಾಸನ ರಾಜಕೀಯ; ಎ. ಮಂಜುಗೆ ಪ್ರೀತಂ ಗೌಡ ಟಾಂಗ್!

ಹಾಸನ, ಡಿಸೆಂಬರ್ 19; "ಮನೆ ಒಡೆಯುವಂತಹ ಕೆಲಸ ನಾನು ಮಾಡಿಲ್ಲ. ನಮ್ಮ ಹತ್ತಿರ ಬಿಜೆಪಿ ಅಭ್ಯರ್ಥಿ ಆಗುತ್ತೇನೆ ಅಂತಾ ಚರ್ಚೆ ಮಾಡಿದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಆಗಲು ಯಾವಾಗ ಡಿಡಿ ಕೊಟ್ಟಿದ್ದಾರೆ ಅನ್ನುವುದನ್ನು ಕೆಪಿಸಿಸಿ ಕಚೇರಿಯಲ್ಲಿ ಚೆಕ್ ಮಾಡಲಿ" ಎನ್ನುವ ಮೂಲಕ ಎ. ಮಂಜುಗೆ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಟಾಂಗ್ ಕೊಟ್ಟಿದ್ದಾರೆ.

"ಪ್ರೀತಂ ಗೌಡ ನಡೆಯಿಂದ ನನ್ನ ಫ್ಯಾಮಿಲಿ ಡಿಸ್ಟರ್ಬ್ ಆಗಿದ್ದರು. 5 ಕೋಟಿ ಕೊಡುತ್ತೇನೆ, ನಿಮ್ಮ ಮಗನನ್ನು ಹಾಸನದಿಂದ ಎಂಎಲ್‍ಸಿ ಚುನಾವಣೆಗೆ ನಿಲ್ಲಿಸಿ ಎಂದು ಹೇಳಿ, ಆನಂತರ ಉಲ್ಟಾ ಹೊಡೆದಿದ್ದರು" ಎಂದು ಮಾಜಿ ಸಚಿವ ಎ. ಮಂಜು ಆರೋಪ ಮಾಡಿದ್ದರು.

ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ ಪೀತಂ ಗೌಡ ಮಾಜಿ ಸಚಿವ, ಬಿಜೆಪಿ ನಾಯಕ ಎ. ಮಂಜು ಆರೋಪಕ್ಕೆ ತಿರುಗೇಟು ನೀಡಿದರು. "ನನ್ನನ್ನು ಜನ ಹತ್ತು ವರ್ಷದಿಂದ ನೋಡುತ್ತಿದ್ದಾರೆ. ಅವರನ್ನು ಮೂವತ್ತು ವರ್ಷದಿಂದ ನೋಡುತ್ತಿದ್ದಾರೆ. ಯಾರು ಮಾತಿಗೆ ಬದ್ದವಾಗಿರುತ್ತಾರೆ?, ಯಾರು ಯಾವ್ಯಾವ ಪಾರ್ಟಿಗೆ ಯಾವ್ಯಾವ ಜಂಪ್ ಹಾರ್ತರೆ ಅನ್ನುವುದು ಜನರಿಗೆ ಗೊತ್ತಿದೆ" ಎಂದು ಟೀಕಿಸಿದರು.

Preetham J. Gowda

"ನಾನು ಬದುಕಿರುವವರೆಗೂ ಬಿಜೆಪಿ, ಸಾಯೋವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಯಾರೂ ಮಾತನಾಡುತ್ತಿದ್ದಾರೋ ಅವರ ಬಾಯಲ್ಲಿ ಇವತ್ತು ಯಾವ ಪಕ್ಷ, ನಾಳೆ ಯಾವ ಪಕ್ಷ ಅಂದರೆ ನಾಲಿಗೆ ಹೊರಳಲ್ಲ, ಅಂಥವರಿಗೆ ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ?" ಎಂದು ಎ. ಮಂಜುಗೆ ಪ್ರಶ್ನಿಸಿದರು.

"ಇವರು ಓದಿರುವ ಸ್ಕೂಲ್‍ನಲ್ಲಿ ನಾನು ಓದಿ, ಆ ಸ್ಕೂಲಿನಲ್ಲಿ ಟೀಚರ್ ಆಗಿ, ಪ್ರಿನ್ಸಿಪಲ್ ಆಗಿ, ರಿಟೈರ್ಡ್ ಆಗಿ, ಮ್ಯಾನೇಜ್ ಮೆಂಟ್ ಕಮಿಟಿ ಅಧ್ಯಕ್ಷನಾಗಿದ್ದೀನಿ. ಅವರಿನ್ನೂ ಆ ಸ್ಕೂಲ್‍ನಲ್ಲಿ ಓದುತ್ತಿದ್ದಾರೆ. ಜಗತ್ತಿಗೆ ನಾನೋಬ್ಬನೆ ಬುದ್ಧಿವಂತ ಅಂದುಕೊಂಡಿದ್ದಾರೆ. ಆ ಕಾಲ ಮುಗಿದು ಹೋಗಿದೆ. ಅಂತಹವರು ಸುಮಾರು ಜನ ಬಂದಿದ್ದಾರೆ. ಹಾಗಾಗಿ ಹೆಚ್ಚು ಚಾಣಾಕ್ಷತನ ತೋರಿಸೋದು ಬೇಡ" ಎಂದು ಎ. ಮಂಜುಗೆ ಶಾಸಕರು ಸಲಹೆ ನೀಡಿದರು.

"ನನಗೆ ಬಿಜೆಪಿ ಇಷ್ಟವಿಲ್ಲ, ಚುನಾವಣೆ ಮಾಡದೇ ಗೆಲ್ಲುವುದಕ್ಕೆ ಆಗಲಿಲ್ಲ. ವಾಪಾಸ್ ಹೋಗುತ್ತೇನೆ ಅಂದರೆ ಜಿಲ್ಲೆಯ ಜನ ಒಪ್ಪಿಕೊಳ್ಳುತ್ತಾರೆ. ಯಾರಿಂದನೂ ಬಿಜೆಪಿ ಏನು ವ್ಯಾತ್ಯಾಸ ಆಗಲ್ಲ. ರಾಷ್ಟ್ರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷ. ಹಾಸನ ಜಿಲ್ಲೆಯಲ್ಲೂ ಮುಂದೆ ದೊಡ್ಡ ಪಕ್ಷ ಆಗುತ್ತದೆ" ಎಂದು ಶಾಸಕ ಪ್ರೀತಂ ಗೌಡ ಹೇಳಿದರು.

"ಕಟ್ಟಿರುವ ಮನೆಗೆ ಬಂದು ಗೃಹಪ್ರವೇಶ ಮಾಡುವುದಲ್ಲ. ಹೊಸದಾಗಿ ಸೈಟ್ ಹುಡುಕಿ, ಫೌಂಡೇಶನ್ ತೆಗೆದು, ಕ್ಯೂರಿಂಗ್ ಮಾಡಿ, ಆರ್‌ಸಿಸಿ ಹಾಕಿ ಬಣ್ಣ ಹೊಡೆದು ವಾಸ ಮಾಡಬೇಕೆಂದು ಬಂದಿರುವವನು ನಾನು. ಅವರು ಎಲ್ಲೆಲ್ಲಿ ಮನೆ ಇರುತ್ತೋ ಅಲ್ಲಲ್ಲಿ ಹೋಗಿ ವಾಸ ಮಾಡುತ್ತಾರೆ. ನಾನು ಪರ್ಮನೆಂಟ್ ಗಿರಾಕಿ, ಬಾಡಿಗೆ ಗಿರಾಕಿಗಳ ಬಗ್ಗೆ ಮಾತನಾಡಲ್ಲ" ಎಂದು ವ್ಯಂಗ್ಯವಾಡಿದರು.

"ಕೊಡಗಿನಲ್ಲಿ ಬಿಜೆಪಿಯೇ ಗೆದ್ದಿರುವುದು. ಹಾಗಾದರೆ ಜನ ಯಾರಿಗೆ ಬುದ್ಧಿ ಕಲಿಸಿದರು. ಒಂದು ಓಟಿನಲ್ಲಿ ಸೋತರೂ ಸೋಲೆ, ನೂರು, ಸಾವಿರ ಓಟಿನಲ್ಲಿ ಸೋತರೂ ಸೋಲೇ. ವಿಧಾನ ಪರಿಷತ್​ಗೆ ಹೋಗುತ್ತಿರುವುದು ಯಾರು?" ಎಂದು ಶಾಸಕರು ಪ್ರಶ್ನಿಸಿದರು.

"ವಿಧಾನ ಪರಿಷತ್ ಚುನಾವಣೆಯಲ್ಲಿ ಹಾಸನದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಿರುವುದು ಸತ್ಯ. ಯಾರೂ ಮಾತನಾಡಿದ್ದಾರೋ ಅವರು ಕಳೆದ ಮೂರ್ನಾಲ್ಕು ಚುನಾವಣೆಯಲ್ಲಿ ಗೆಲುವೇ ಕಂಡಿಲ್ಲ. ಹಾಗಂತ ಬೇಜಾರು ಮಾಡಿಕೊಳ್ಳುವುದಕ್ಕೆ ಆಗುತ್ತದೆಯೇ?. ರಾಜಕಾರಣ ಬಿಡೋಕೆ ಆಗುತ್ತಾ?" ಎಂದು ಎಂ. ಮಂಜು ವಿರುದ್ಧ ಟೀಕೆ ಮಾಡಿದರು.

"ಹಾಸನದಲ್ಲಿ ಆಗಲಿಲ್ಲ ಅಂಥಾ ಈಗ ಕೂರ್ಗಿಗೆ ಹೋಗಿದ್ದಾರೆ. ನಾಳೆ ಯಾವ ಜಿಲ್ಲೆಗೆ ಹೋಗುತ್ತಾರೆ ಗೊತ್ತಿಲ್ಲ. ಆದರೆ ನಾನು ರಾಜಕಾರಣ ಮಾಡುವುದು ಹಾಸನದಲ್ಲೇ. ಪಲಾಯನವಾದ ರಾಜಕಾರಣ ನಾನು ಮಾಡೋದಿಲ್ಲ. ದೇವೇಗೌಡ ಕುಟುಂಬದವರು ನಿಂತರೆ ನಾನು ವಿರೋಧವಾಗಿ ನಿಲ್ಲುತ್ತೇನೆ ಅಂಥಾ ಹೇಳುತ್ತಿದ್ದರು. ಈಗ ಎಲ್ಲಿ ನಿಂತರು?, ಹೋಗಿ ಕೂರ್ಗ್​ನಲ್ಲಿ ನಿಂತರು" ಎಂದು ಪರಿಷತ್ ಚುನಾವಣೆಯಲ್ಲಿ ಎ. ಮಂಜು ಪುತ್ರ ಮಂಥರ್ ಗೌಡ ಕೊಡಗಿನಿಂದ ಸ್ಪರ್ಧೆ ಮಾಡಿದ ಬಗ್ಗೆ ವಾಗ್ದಾಳಿ ಮಾಡಿದರು.

"ನಮ್ಮ‌ ನಾಯಕರಾದ ಎ. ಮಂಜಣ್ಣ ಏನು ಹೇಳಿದ್ದಾರೆ ಎಂದು ಗಮನಿಸಿದ್ದೇನೆ. ಆದರೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಮಾಹಿತಿಯಿಲ್ಲ. ಮುಂದಿನ ವಾರ ಪಕ್ಷದ ಕಚೇರಿಗೆ ಅವರು ಬಂದ ಸಂದರ್ಭದಲ್ಲಿ ಚರ್ಚೆ ಮಾಡುತ್ತೇನೆ. ಎಲ್ಲಾರು ಒಟ್ಟಿಗೆ ಸೇರಿ ಸರಿ ಮಾಡುತ್ತೇವೆ. ಯಾವ ಸಮಯದಲ್ಲಿ, ಯಾವ ಸಂದರ್ಭದಲ್ಲಿ ಅವರ ಮಗನಿಗೆ ಟಿಕೆಟ್ ಕೊಡುತ್ತೇವೆ, 5 ಕೋಟಿ ಕೊಡುತ್ತೇನೆ ಎಂದು ಯಾರೂ ಹೇಳಿದರು ನನಗೆ ಗೊತ್ತಿಲ್ಲ" ಎಂದು ಸ್ಪಷ್ಟಪಡಿಸಿದರು.

ಸೂರಜ್ ರೇವಣ್ಣಗೆ ರಾಜಕೀಯ ಪಾಠ; "ಮುಂದಿನ ಚುನಾವಣೆಯಲ್ಲಿ ಹಾಸನದ ಶಾಸಕರನ್ನು ಮನೆಯಲ್ಲಿ ಕೂರಿಸುತ್ತೇನೆ" ಎಂಬ ಎಂಎಲ್‌ಸಿ ಸೂರಜ್ ರೇವಣ್ಣ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರೀತಂಗೌಡ, "ನನ್ನ ಚುನಾವಣೆ ಬರಲಿ ರಾಜಕಾರಣ ಏನು ಅಂಥಾ ತೋರಿಸುತ್ತೇನೆ. ರಾಜಕಾರಣ ಮಾಡೋದು ಹೇಗೆ ಅಂಥಾ ಅವರಿಗೆ ಗೊತ್ತಿಲ್ಲದ ವಿದ್ಯೆಯನ್ನು ನಾನು ಹೇಳಿಕೊಡ್ತಿನಿ" ಎಂದು ತಿರುಗೇಟು ನೀಡಿದರು.

"ಅವರು ಹೇಳಿಕೊಟ್ಟಿರುವ ವಿದ್ಯೆ ಕಲಿತು ಆಗಿದೆ. ನನ್ನ ಚುನಾವಣೆಗೆ ಬರಲಿ ಯಾವ ಥರಾ ರಾಜಕಾರಣ ಮಾಡುವುದು ಅಂಥಾ ತೋರಿಸಿ ಕೊಡುತ್ತೇನೆ. ಯಾರು, ಯಾರು ಉದ್ದುದ್ದ ಭಾಷಣ ಮಾಡುತ್ತಿದ್ದಾರೆಲ್ಲ ಬರಲಿ. ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಂದು ಪ್ರೀತಂಗೌಡನ ವಿರುದ್ಧ ರಾಜಕಾರಣ ಮಾಡಲಿ, ಆಮೇಲೆ ಮಾತನಾಡುತ್ತೇನೆ" ಎಂದು ಜೆಡಿಎಸ್ ನಾಯಕರ ವಿರುದ್ಧ ಗರಂ ಆದರು.

"ನನ್ನ ಕ್ಷೇತ್ರದ ವಿಚಾರವಾಗಿ ಯಾರಾದರೂ ಬರುವವರಿದ್ದರೆ ಬಂದು ಮಾತನಾಡಲು ಹೇಳಿ. ನಾನು ಯಾವುದಕ್ಕೂ ಹೆದರುವುದಿಲ್ಲ, ತಲೆನೂ ಕೆಡಿಸಿಕೊಳ್ಳುವುದಿಲ್ಲ. ಏನಾದರೂ ಹೆದರುವ ಪರಿಸ್ಥಿತಿ ಇದ್ದರೆ ಅವರು ಹೆದರಬೇಕು, ಹೆದರದೆ ಇರಿ ಅಂಥಾ ಅವರಿಗೆ ನೈತಿಕ ಬೆಂಬಲ ಕೊಡುತ್ತೇನೆ" ಎಂದು ಶಾಸಕ ಪ್ರೀತಂ ಗೌಡ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+