ಈ ವರ್ಷ ಹಾಸನಾಂಬೆ ದರ್ಶನ ಪಡೆದವರ ಸಂಖ್ಯೆ 6 ಲಕ್ಷಕ್ಕೇರಿಕೆ!
ಹಾಸನ, ಅಕ್ಟೋಬರ್ 28: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಐತಿಹಾಸಿಕ ಹಾಸನಾಂಬ ದೇವಾಲಯದ ಬಾಗಿಲನ್ನು ಸಂಪ್ರದಾಯ ಬದ್ಧವಾಗಿ ಪೂಜಾ ಕೈಂಕರ್ಯ ನೆರವೇರಿಸಿ ನಿನ್ನೆ ಮುಚ್ಚಲಾಗಿದೆ.
ಹಾಸನಾಂಬ ಜಾತ್ರೆಗೆ ತೆರೆ ಬಿದ್ದಿದ್ದು, ಜನಪ್ರತಿನಿಧಿಗಳa ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಾಸನಾಂಬ ದೇಗುಲದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ ಅರ್ಚನಾ, ಎಸ್‌ಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.
ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ತಂಡೋಪಾದಿಯಲ್ಲಿ ಹಾಸನಾಂಬ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಸರಳವಾಗಿ ಹಾಸನಾಂಬ ಜಾತ್ರೆ ನಡೆಸಲಾಗಿತ್ತು. ಆದರೆ ಈ ವರ್ಷ ಅದ್ಧೂರಿಯಾಗಿ ಹಾಸನಾಂಬ ಜಾತ್ರಾ ಮಹೋತ್ಸವ ನೆರವೇರಿದೆ. ಈ ಬಾರಿ ಭಕ್ತ ಸಾಗರವೇ ಹಾಸನಾಂಬೆ ದರ್ಶನಕ್ಕೆ ಹರಿದು ಬಂದಿದೆ. ನಿರೀಕ್ಷೆಗೂ ಮೀರಿ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ಅಕ್ಟೋಬರ್ 13 ರಿಂದ ಅಕ್ಟೋಬರ್ 27 ರವರೆಗೆ ದೇಗುಲ ಬಾಗಿಲು ತೆರೆದಿದ್ದು, ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಎಂಟನೇ ದಿನ ಜಿಲ್ಲಾಡಳಿತ ದೇವಿಯ ದರ್ಶನದ ಅವಧಿ ವಿಸ್ತರಣೆ ಮಾಡಿತ್ತು. ಪ್ರತಿ ದಿನ 30 ರಿಂದ 50 ಸಾವಿರ ಭಕ್ತರಂತೆ ಸುಮಾರು ಆರು ಲಕ್ಷಕ್ಕೂ ಅಧಿಕ ಭಕ್ತರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
ಇನ್ನು ಇಂದಿನಿಂದ ಹಾಸನಾಂಬೆ ಹುಂಡಿ ಹಣ ಎಣಿಕೆ ಕಾರ್ಯ ಆರಂಭವಾಗಿದೆ. ಎಸಿ ಜಗದೀಶ್ ಹಾಗೂ ತಹಶೀಲ್ದಾರ್ ನಟರಾಜ್ ಸಮ್ಮುಖದಲ್ಲಿ ಹುಂಡಿ ಸೀಲ್ ತೆರೆದು ಎಣಿಕೆ ಕಾರ್ಯ ಆರಂಭ ಮಾಡಲಾಗಿದೆ.
ಸುಮಾರು ಐವತ್ತಕ್ಕೂ ಹೆಚ್ಚು ಮಂದಿಯಿಂದ ಹುಂಡಿ ಹಣ ಎಣಿಕೆ ಮಾಡುತ್ತಿದ್ದು, ನೋಟುಗಳನ್ನು ಬಂಡಲ್ ಮಾಡಿ ಬ್ಯಾಂಕ್ ಸಿಬ್ಬಂದಿಗೆ ನೀಡಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಹರಕೆ ಚೀಟಿಗಳನ್ನು ಯಾರೂ ನೋಡದಂತೆ ಹಾಸನ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇಂದು ಸಂಜೆಯವರೆಗೂ ಹಾಸನಾಂಬ ಹುಂಡಿ ಎಣಿಕೆ ಕಾರ್ಯ ನಡೆಯಲಿದೆ.












Click it and Unblock the Notifications