2ನೇ ಮದುವೆಗೆ ನಿಶ್ಚಿತಾರ್ಥ ಮಾಡಿಕೊಂಡ ಪತಿ; ಮೊದಲ ಪತ್ನಿ ಠಾಣೆಗೆ!
ಹಾಸನ, ನವೆಂಬರ್ 28; ಇಬ್ಬರು ಪರಸ್ಪರ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆ ಯಾಗಿದ್ದರು. ಇದೀಗ ಮೊದಲ ಪತ್ನಿಗೆ ಗೊತ್ತಾಗದ ರೀತಿಯಲ್ಲಿ ಎರಡನೇ ಮದುವೆಯಾಗಲು ರೆಡಿಯಾಗಿ ಭೂಪನೊಬ್ಬ ನಿಶ್ಚಿತಾರ್ಥ ಮಾಡಿಕೊಂಡಿರೋ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.
ಇನ್ನು ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮಗನಿದ್ದಾನೆ. ಒಂಬತ್ತು ವರ್ಷ ಸಂಸಾರ ಮಾಡಿದ ಗಂಡ ಈಗ ತನ್ನ ವರಸೆ ಬದಲಿಸಿದ್ದಾನೆ. ಪತ್ನಿಗೆ ತಿಳಿಯದೇ ಎರಡನೇ ಮದುವೆಗೆ ಸಿದ್ಧತೆ ನಡೆಸಿಕೊಂಡಿದ್ದಾನೆ. ಪತಿಯ ಎರಡನೇ ಮದುವೆ ವಿಷಯ ತಿಳಿದ ನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರೀತಿಸಿ ಮದುವೆಯಾದ ಪತ್ನಿ ಮತ್ತು ಎದೆಯತ್ತರದ ಮಗನಿದ್ದರೂ ವ್ಯಕ್ತಿಯೋರ್ವ ಸುಳ್ಳು ಹೇಳಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಇದೀಗ ಪತ್ನಿ ಗಂಡ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಲೋಹಿತ್ ಎರಡನೇ ಮದುವೆಗೆ ಸಿದ್ಧನಾದ ವ್ಯಕ್ತಿ. 9 ವರ್ಷಗಳ ಹಿಂದೆ ಕಾಲೇಜಿನಲ್ಲಿ ಲೋಹಿತ್ ಮತ್ತು ಅಕ್ಷತಾ ಭೇಟಿಯಾಗಿದ್ದರು. ಇಬ್ಬರ ಸ್ನೇಹಕ್ಕೆ ಪ್ರೇಮವಾಗಿ ಬದಲಾದಾಗ ಮದುವೆಯಾಗಿದ್ದರು. ಆದರೆ ಅಕ್ಷತಾ ಜಾತಿ ಬೇರೆ ಎಂದು ಲೋಹಿತ್ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಲೋಹಿತ್ ಪ್ರೀತಿಸಿದ ಅಕ್ಷತಾ ಕೈ ಹಿಡಿದಿದ್ದನು.
ಸುಳ್ಳು ಹೇಳಿ ಹುಡುಗಿಯನ್ನು ನಂಬಿಸಿರುವ ಬಗ್ಗೆ ಆಡಿಯೋ ಸಾಕ್ಷಿ ಇಟ್ಟುಕೊಂಡು ಅಕ್ಷತಾ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ವಂಚಕ ಪತಿ ಹಾಗೂ ಆತನ ಕುಟುಂಬಸ್ಥರಿಂದ ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.
ದೂರು ದಾಖಲಿಸಿದ ಮೊದಲ ಪತ್ನಿ; ಅನ್ಯ ಜಾತಿಯ ಹುಡುಗಿ ಎನ್ನುವ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ, ತಾಯಿ ಜಯಶೀಲಾರಿಂದ ಕಿರುಕುಳ ನೀಡಿತ್ತಿದ್ದಾರೆ ಎಂದು ಅಕ್ಷತಾ ಆರೋಪ ಮಾಡಿದ್ದಾರೆ. ಈಗ ತನ್ನಿಂದ ಗಂಡನನ್ನು ದೂರ ಮಾಡಿ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲಾನ್ ಮಾಡಿದ್ದಾರೆ. ಮಾವ ಮಲ್ಲಿಕಾರ್ಜುನ, ಅತ್ತೆ ಜಯಶೀಲ, ಮೈದುನ ದರ್ಶನ್ ಹಾಗೂ ಪತಿ ವಿರುದ್ದ ಅಕ್ಷತಾ ದೂರು ದಾಖಲಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡದ ಯುವತಿ ಜೊತೆ ನಿಶ್ಚಿತಾರ್ಥ; ಅಕ್ಷತಾ ಗಂಡ ಲೋಹಿತ್ ಇದೀಗ ಮೊದಲ ಮದುವೆ ಮುಚ್ಚಿಟ್ಟು ಮತ್ತೊಂದು ಮದುವೆ ಆಗಲು ನಿಶ್ಚತಾರ್ಥ ಸಹ ಮಾಡಿಕೊಂಡಿದ್ದಾನೆ. ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ಎಂಗೇಜ್ಮೆಂಟ್ ಆಗಿದೆ. ಅಕ್ಷತಾ ಜಾತಿ ಬೇರೆ ಎಂಬ ಕಾರಣಕ್ಕೆ ಮಗನಿಗೆ ಪೋಷಕರು ಮದುವೆ ಮಾಡಲು ಮುಂದಾಗಿದ್ದಾರೆ. ಪೋಷಕರ ಮಾತಿನಂತೆ ಲೋಹಿತ್ ಸಹ ಯುವತಿ ಮುಂದೆ ಸುಳ್ಳು ಹೇಳಿ ಮದುವೆಗೆ ರೆಡಿಯಾಗಿದ್ದಾಳೆ. ಸದ್ಯ ನಿಶ್ಚಿತಾರ್ಥದ ಪೋಟೋ ಕೂಡ ಒನ್ ಇಂಡಿಯಾಗೆ ಲಭ್ಯವಾಗಿವೆ. ಸದ್ಯ, ಈ ಬಗ್ಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಒಟ್ಟಾರೆ, ಅನ್ಯ ಜಾತೀಯ ಹುಡುಗಿ ಎಂದು ಮದುವೆಯಾಗಿ 9 ವರ್ಷವಾಗಿದ್ದರೂ ಲೋಹಿತ್ ಕುಟುಂಬಸ್ಥರು ಮತ್ತೊಂದು ಮದುವೆ ಮಾಡಲು ರೆಡಿಯಾಗಿರೋದು ದುರಂತವೇ ಸರಿ. ಹಿಂದೆ ಮುಂದೆ ತಿಳಿಯದೇ ಮದುವೆ ಮಾಡಲು ಸಿದ್ಧವಾಗಿದ್ದ ದಕ್ಷಿಣ ಕನ್ನಡ ಕುಟುಂಬವರು ಶಾಕ್ ಆಗಿದ್ದಾರೆ. ಒಟ್ಟಾರೆ ಪೊಲೀಸರ ತನಿಖೆಯಿಂದ ಸತ್ಯ ಸತ್ಯತೆ ತಿಳಿಯಬೇಕಿದೆ.












Click it and Unblock the Notifications