ಹಾಸನ ತಹಶೀಲ್ದಾರ್ ಶ್ವೇತಾ ವರ್ಗಾವಣೆ; ಕೆಎಟಿಯಿಂದ ತಡೆ
ಹಾಸನ, ನವೆಂಬರ್ 22; ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವರ್ಗಾವಣೆಯೊಂದು ಮತ್ತೊಮ್ಮೆ ಸುದ್ದಿಯಾಗಿದೆ. ಅದರಲ್ಲೂ ಜೆಡಿಎಸ್ ಭದ್ರಕೋಟೆ ಹಾಸನದ ತಹಶೀಲ್ದಾರ್ ವರ್ಗಾವಣೆಗೆ ಕರ್ನಾಟಕದ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ತಡೆ ನೀಡುವ ಮೂಲಕ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಹಾಸನ ತಹಶೀಲ್ದಾರ್ ಶ್ವೇತಾ ಸೇರಿದಂತೆ 13 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಶ್ವೇತಾ ಕೆಎಟಿಯಲ್ಲಿ ಪ್ರಶ್ನೆ ಮಾಡಿದ್ದರು. ಶ್ವೇತಾ ಅವರು ಗ್ರೇಡ್-1 ತಹಶೀಲ್ದಾರ್ ಆಗಿದ್ದರು. ಆದರೆ ಅವರ ಸ್ಥಾನಕ್ಕೆ ಗ್ರೇಡ್-2 ತಹಶೀಲ್ದಾರ್ ನೇಮಕ ಮಾಡಲಾಗಿತ್ತು.

ತಡೆ ನೀಡಿದ್ದು ಏಕೆ?; ಹಾಸನ ತಹಶೀಲ್ದಾರ್ ಆಗಿ ಶ್ವೇತಾ ಅಧಿಕಾರವಹಿಸಿಕೊಂಡು ಕೇವಲ 8 ತಿಂಗಳು ಕಳೆದಿದೆ. ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಅವರನ್ನು ವರ್ಗಾವಣೆ ಮಾಡಿದ ಜಾಗಕ್ಕೆ ಗ್ರೇಡ್-2 ತಹಶೀಲ್ದಾರ್ ನೇಮಕ ಮಾಡಿರುವುದನ್ನು ಕೆಎಟಿಯಲ್ಲಿ ಪ್ರಶ್ನೆ ಮಾಡಲಾಗಿತ್ತು.
ಶ್ವೇತಾ ಪರ ವಕೀಲರ ವಾದಕ್ಕೆ ಮನ್ನಣೆ ನೀಡಿದ್ದ ಕೆಎಟಿ ಕರ್ನಾಟಕ ಸರ್ಕಾರ ಶ್ವೇತಾರನ್ನು ವರ್ಗಾವಣೆ ಮಾಡಿದ ಆದೇಶಕ್ಕೆ ತಡೆ ನೀಡಿತ್ತು. ಶ್ವೇತಾ ಅವರ ಸ್ಥಾನಕ್ಕೆ ಎಸ್. ನವೀನ್ ಕುಮಾರ್ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು, ಅವರು ಅಧಿಕಾರವನ್ನು ಸಹ ವಹಿಸಿಕೊಂಡಿದ್ದರು.
ಕೆಎಟಿ ಆದೇಶದ ಪ್ರತಿ ಕೈ ಸೇರಿದ ಬಳಿಕ ಶ್ವೇತಾ ಅವರು ಪುನಃ ಹಾಸನ ಶಹಶೀಲ್ದಾರ್ ಆಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ. ಎಸ್. ನವೀನ್ ಕುಮಾರ್ ಅಧಿಕಾರ ಸ್ವೀಕಾರ ಮಾಡಿ ಹಾಸನ ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ನಡೆಸಿದ ಕೆಡಿಪಿ ಸಭೆಯಲ್ಲಿ ಸಹ ಪಾಲ್ಗೊಂಡಿದ್ದರು.
ದಿನಾಂಕ 18/11/2023ರಂದು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಇಂದ್ರೇಶ್ ಸರ್ಕಾರದ ಜಂಟಿ ಕಾರ್ಯದರ್ಶಿ ಕಂದಾಯ ಇಲಾಖೆ (ಸೇವೆಗಳು-3 & ಭೂ. ಸು. ಕೋ) ಮಾನ್ಯ ಮುಖ್ಯಂತ್ರಿಗಳಿಂದ ಅನುಮೋದಿತವಾದ ಆದೇಶವನ್ನು ಹೊರಡಿಸಿ ತಹಶೀಲ್ದಾರ್ ವರ್ಗಾವಣೆಗೊಳಿಸಿದ್ದರು.
ಆದೇಶದಲ್ಲಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಈ ಕೆಳಕಂಡ ತಹಶೀಲ್ದಾರ್‌ಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ತನಕ ಸ್ಥಳಕ್ಕೆ ನಿಯುಕ್ತಿಗೊಳಿಸಿ/ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದರು.
ಈ ಆದೇಶದಲ್ಲಿ ನವೀನ್ ಕುಮಾರ್ ಎಸ್. ತಹಶೀಲ್ದಾರ್ ಗ್ರೇಡ್-2 ಅವರನ್ನು ತಹಶೀಲ್ದಾರ್ ಗ್ರೇಡ್-1 ಹಾಸನ ತಾಲೂಕು, ಹಾಸನ ಜಿಲ್ಲೆ (ಶ್ರೀಮತಿ ಶ್ವೇತಾ ಇವರ ಸ್ಥಳಕ್ಕೆ) ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿಸಲಾಗಿತ್ತು.
ಚನ್ನರಾಯಪಟ್ಟಣದಲ್ಲಿಯೂ ತಹಶೀಲ್ದಾರ್ ವರ್ಗಾವಣೆ ವಿವಾದಕ್ಕೆ ಕಾರಣವಾಗಿತ್ತು. ತಹಶೀಲ್ದಾರ್ ಗೋವಿಂದರಾಜು ಸಹ ಕೆಎಟಿ ಮೊರೆ ಹೋಗಿ ವರ್ಗಾವಣೆ ಆದೇಶದಕ್ಕೆ ತಡೆ ತಂದಿದ್ದರು. ಇದೇ ಮಾದರಿಯಲ್ಲಿ ಹಾಸನ ತಹಶೀಲ್ದಾರ್ ವರ್ಗಾವಣೆ ವಿಚಾರವೂ ಸುದ್ದಿಯಾಗಿದೆ.
ಚನ್ನರಾಯಪಟ್ಟಣ ತಹಶೀಲ್ದಾರ್ ಆಗಿದ್ದ ಗೋವಿಂದರಾಜು ವರ್ಗಾವಣೆ ಮಾಡಿದ್ದ ಸರ್ಕಾರ ಅವರ ಸ್ಥಾನಕ್ಕೆ ಗೀತಾ ಎಂಬುವವರನ್ನು ನೇಮಕ ಮಾಡಿತ್ತು. ಗೋವಿಂದರಾಜು ಈ ಆದೇಶ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರು.











Click it and Unblock the Notifications