B.S.Yediyurappa: ಸಕಲೇಶಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿಎಸ್‌ವೈಗೆ ಮುನ್ನೂರು ಕೆ.ಜಿ. ತೂಕದ ಹಾರ ಹಾಕಿದ ಅಭಿಮಾನಿಗಳು
ಹಾಸನ, ಮೇ, 05: ವಿಧಾನಸಭೆ ಚುನಾವಣೆ ಹಿನ್ನೆಲೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಪರ ಮಾಜಿ ಸಿಎಂ ಯಡಿಯೂರಪ್ಪ ಅವರು ರೋಡ್ ಶೋ ನಡೆಸಿದರು.
ಸಕಲೇಶಪುರ ಪಟ್ಟಣದ ಪ್ರಮುಖ ಬೀದಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಬೃಹತ್ ರೋಡ್ ಶೋ ನಡೆಸಿದ್ದು, ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಅಲ್ಲದೆ ಸಕಲೇಶಪುರ ಸೇರಿದಂತೆ ಅರಕಲಗೂಡು, ಬೇಲೂರಿನಲ್ಲಿಯೂ ಯಡಿಯೂರಪ್ಪ ಪ್ರಚಾರ ನಡೆಸಿದರು.

ಹೀಗೆ ಯಡಿಯೂರಪ್ಪ ಅವರು ಜೆಡಿಎಸ್ ಭದ್ರಕೋಟೆಯಾದ ಹಾಸನದಲ್ಲಿ ಕಮಲ ಅರಳಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ಸಕಲೇಶಪುರ ಪಟ್ಟಣದ ಹಳೇ ಬಸ್ ನಿಲ್ದಾಣ ಬಳಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅಭಿಮಾನಿಗಳು ಕ್ರೇನ್ ಮೂಲಕ ಸುಮಾರು ಮುನ್ನೂರು ಕೆ.ಜಿ. ತೂಕದ ಬೃಹತ್ ಜೋಳದ ಹಾರ ಹಾಕಿ ಸಂಭ್ರಮಿಸಿದರು.
ಈ ಕ್ಷೇತ್ರದ ಪ್ರಚಾರದಿಂದ ದೂರ ಉಳಿದ ಬಿಎಸ್‌ವೈ
ಮತ್ತೊಂದೆಡೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಲಿಂಗಾಯತ ಸಮುದಾಯದ ಮತಗಳೇ ನಿರ್ಣಾಯಕ ಆಗಿದ್ದು, ಯಡಿಯೂರಪ್ಪ ಅವರು ಇಲ್ಲಿಗೆ ಆಗಮಿಸಿದರೂ ಕೂಡ ಕ್ಷೇತ್ರದಿಂದ ದೂರ ಉಳಿದರು. ಇದೀಗ ಯಡಿಯೂರಪ್ಪ ಅವರು ಕ್ಷೇತ್ರದಿಂದ ಅಂತರ ಕಾಯ್ದುಕೊಂಡ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಹಾಗೆಯೆ ಬಿಎಸ್‌ವೈ ಅವರು ಕಡೂರು, ತರೀಕೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ನಡೆಸಲಿದ್ದಾರೆ.
ಇನ್ನು ಕಾಫಿನಾಡಿನಲ್ಲಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಮೂರು ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ಮತಯಾಚನೆ ಆರಂಭವಾಗಿದ್ದು, ಇದೀಗ ಶೃಂಗೇರಿ, ಮೂಡಿಗೆರೆ ಕ್ಷೇತ್ರಗಳಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ಅಭ್ಯರ್ಥಿಗಳ ಪರ ಪ್ರಚಾರ ಮುಂದುವರೆಸಿದ್ದಾರೆ. ಹಾಗೆಯೆ ಕಾಂಗ್ರೆಸ್ ಅಭ್ಯರ್ಥಿ ಪರ ಮೂಡಿಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತಯಾಚನೆ ಮಾಡಿದರು.
ದಳಪತಿಗಳ ಸೀಕ್ರೇಟ್ ಏನು?
ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. ಈ ಬಾರೀ ಚುನಾವಣೆಯಲ್ಲಿ ಗೆಲುವು ಸಾಧದಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಹಲವು ತಂತ್ರಗಳನ್ನ ನಡೆಸುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡ್ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದೇವೆ ಎಂದು ದಳಪತಿಗಳು ಹೇಳಿಕೆ ನೀಡಿದ್ದು, ಇದೀಗ ಪ್ರಮಾಣ ವಚನದ ಬಗ್ಗೆಯೂ ದಿನಾಂಕ ನಿಗದಿ ಮಾಡಿದ್ದಾರೆ.
ಹೌದು, ಚುನಾವಣೆಗೆ ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿದ್ದು, ಚುನಾವಣಾ ಭರಾಟೆ ಹಾಗೂ ಅಂತಿಮ ಹಂತದ ಮತಬೇಟೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಇನ್ನೂ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೇಗೌಡರು ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಅರಸೀಕೆರೆ ಮತ್ತಿತರ ಕ್ಷೇತ್ರಗಳಲ್ಲಿ ಗುರುವಾರ ನಡೆದ ಬೃಹತ್ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮಾತನಾಡಿ, ಮೇ 10ರಂದು ಮತದಾನ ನಡೆಯಲಿದ್ದು,ಮೇ 13ಕ್ಕೆ ಮತ ಎಣಿಕೆನಡೆಯಲಿದೆ. ಇನ್ನೂ ಮೇ 18ರಂದು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸುವುದು ಶತಃಸಿದ್ಧ ಎಂದು ಜೆಡಿಎಸ್ ವರಿಷ್ಟ ಹೆಚ್ ಡಿ ದೇವೇಗೌಡರು ಭವಿಷ್ಯ ನುಡಿದಿದ್ದಾರೆ.
ಇನ್ನೂ ಬೇಲೂರು ತಾಲೂಕಿನ ನಿಷ್ಠಾವಂತ, ಸರಳ, ಸಜ್ಜನಿಕೆಯ ಕೆ.ಎಸ್.ಲಿಂಗೇಶ್ ಅವರನ್ನು ಮತ್ತೆ ಗೆಲ್ಲಿಸಬೇಕು. ಇನ್ನೂ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನವರಿಗೆ ರಾಜ್ಯದ ಜನರ ಹಿತ ಬೇಕಾಗಿಲ್ಲ. ಈ ಬಾರಿ ರಾಜ್ಯದ ಜನತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಕಿಡಿಕಾರಿದರು.
ರಾಜ್ಯದ ಉಳಿವಿಗಾಗಿ ಹಾಗೂ ಪ್ರಾದೇಶಿಕ ಪಕ್ಷದ ಉಳಿವಿಗಾಗಿ ನನ್ನ ಈ ಇಳಿವಯಸ್ಸಿನಲ್ಲಿ ರಾಜ್ಯಾದ್ಯಂತ ಸುತ್ತಾಟ ನಡೆಸುತ್ತಿದ್ದೇನೆ. ರಾಜ್ಯದ ನೆಲ, ಜಲ ಸಂರಕ್ಷಣೆಗಾಗಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ರಾಜ್ಯದ ಜನರಿಗೆ ನೀರಿಲ್ಲದಿದ್ದರೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂಥ ಅನಿವಾರ್ಯತೆ ಸೃಷ್ಟಿಸಲಾಗಿದೆ ಎಂದು ಹೇಳಿದರು.












Click it and Unblock the Notifications