ಎ ಮಂಜು ಬಗ್ಗೆ ಮುಖ್ಯಮಂತ್ರಿಗೆ ಏನೋ ದಾಕ್ಷಿಣ್ಯ ಇದೆ: ಎಚ್ ಡಿ ದೇವೇಗೌಡ
ಹಾಸನ, ಜನವರಿ 25 : ಕೆಆರ್ ಡಿಸಿಎಲ್ ಗೆ ಕೆಲಸ ಕೊಡಿಸಲು ಸಚಿವರಿಗೇಕೆ ಅಷ್ಟೊಂದು ಆಸಕ್ತಿ? ಚುನಾವಣೆ ಆಯೋಗದ ಸ್ಪಷ್ಟ ನಿರ್ದೇಶನವಿದ್ದರೂ ಏಕಾಏಕಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿಸಿದ್ದು ಏಕೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಗುರುವಾರ ಇಲ್ಲಿ ಪ್ರಶ್ನೆ ಮಾಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತ ಆಗುವುದಕ್ಕೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರವೇ ಕಾರಣ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಾಸನದಲ್ಲಿ ಐವರು ಜಿಲ್ಲಾಧಿಕಾರಿಗಳ ವರ್ಗಾವಣೆ ಆಗಿದೆ. ಸದ್ಯಕ್ಕೆ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಇರುವುದರಿಂದ ವರ್ಗಾವಣೆ ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ರೋಹಿಣಿ ಸಿಂಧೂರಿ ನಮ್ಮ ಪರ ಯಾವುದೇ ಕೆಲಸ ಮಾಡಿಕೊಟ್ಟಿಲ್ಲ. ಅವರ ಬಗ್ಗೆ ನಮಗೆ ವಿಶೇಷ ಕಾಳಜಿಯೇನೂ ಇಲ್ಲ. ಅವರ ಪರಿಚಯವೂ ನನಗಿಲ್ಲ. ಆದರೆ ಮಹಾಮಸ್ತಾಕಾಭಿಷೇಕ ಸಂದರ್ಭದಲ್ಲಿ ವರ್ಗಾವಣೆ ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ದೇವೇಗೌಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಷ್ಠಾವಂತರ ವರ್ಗಾವಣೆ ನಿರಂತರವಾಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದಕ್ಕೆ ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಕಾರಣ. ಮುಖ್ಯಮಂತ್ರಿಗೆ ಏನೋ ದಾಕ್ಷಿಣ್ಯ ಇದೆ. ಈ ಮಂತ್ರಿಯನ್ನು ಏನಾದರೂ ಏಜೆಂಟ್ ಆಗಿ ಇಟ್ಟುಕೊಂಡಿದ್ದೀರಾ ಎಂದು ದೇವೇಗೌಡರು ಪ್ರಶ್ನೆ ಮಾಡಿದರು.












Click it and Unblock the Notifications