ವಿಡಿಯೋ; ಹಾಸನದಲ್ಲಿ ಮಳೆ ಅಬ್ಬರ, ರಸ್ತೆ ಸಂಚಾರ ಬಂದ್
ಹಾಸನ, ಅಕ್ಟೋಬರ್ 06; ಹಾಸನ ಜಿಲ್ಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಆರಂಭವಾದ ಮಳೆ ಜನರಿಗೆ ಸಂಕಷ್ಟ ತಂದಿದೆ. ಹಾಸನ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮಂಗಳವಾರ ತಡರಾತ್ರಿಯಿಂದ ಹಾಸನ, ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು ತಾಲ್ಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಉತ್ತಮ ಮಳೆಯಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಮತ್ತೊಂದು ಕಡೆ ಮಳೆ ಹಲವು ಕಡೆ ಹಾನಿಯನ್ನು ಮಾಡಿದೆ.
ಹಾಸನ ಜಿಲ್ಲೆಯಲ್ಲಿ ಭಾರೀ ಮಳೆ. ಮಳೆಯಿಂದ ಅರಕಲಗೂಡು ತಾಲ್ಲೂಕಿನ ಶಿರದನಹಳ್ಲಿ ಬಳಿ ರಸ್ತೆಗುರುಳಿದ ಭಾರೀ ಗಾತ್ರದ ಮರ. ಅರಕಲಗೂಡು-ಕೇರಳಾಪುರ ನಡುವಿನ ರಾಜ್ಯ ಹೆದ್ದಾರಿ ಸಂಪರ್ಕ ಸ್ಥಗಿತ. ಮರ ತೆರವುಗೊಳಿಸಲು ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಕೈಗೊಂಡಿದ್ದಾರೆ. #Hassan #HassanRains pic.twitter.com/05UiKrHcKG
— oneindiakannada (@OneindiaKannada) October 6, 2021
ಅರಕಲಗೂಡು ತಾಲ್ಲೂಕಿನ ಶಿರದನಹಳ್ಳಿ ಬಳಿ ರಸ್ತೆ ಸಂಚಾರ ಬಂದ್ ಆಗಿದೆ. ಅರಕಲಗೂಡು-ಕೇರಳಾಪುರ ನಡುವೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ವಾಹನ ಸಂಚಾರ ಬಂದ್ ಆಗಿದ್ದು, ಸವಾರರು ಪರದಾಡುವಂತಾಗಿದೆ.

ಮರ ತೆರವುಗೊಳಿಸಲು ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳಕ್ಕೆ ಆರ್‌ಐ ಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮರ ತೆರವುಗೊಳಿಸುವ ಕಾರ್ಯಾಚರಣೆ ಕೆಲವು ಗಂಟೆಗಳ ತನಕ ನಡೆಯಲಿದೆ.
ಇನ್ನು ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಕೊಚ್ಚಿ ಹೋಗಿದೆ. ಕಾಳೇನಹಳ್ಳಿ ಗ್ರಾಮದಲ್ಲಿ ರಸ್ತೆಗೆ ಹಾನಿಯಾಗಿದ್ದು, ಇದರಿಂದ ಕೆರಳಾಪುರ ಹಾಗೂ ರಾಮನಾಥಪುರಕ್ಕೆ ಸಂಚರಿಸಲು ತೊಂದರೆ ಉಂಟಾಗಿದೆ.
ಹಾಸನ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಆರಂಭವಾದ ಮಳೆ. ಹಾಸನ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.#Karnataka #HassanRains pic.twitter.com/K93g03dzsM
— oneindiakannada (@OneindiaKannada) October 6, 2021
ಮಳೆಯಿಂದಾಗಿ ಆಂಜನೇಯ ಹೊಸಹಳ್ಳಿ ಕೆರೆ ಕೋಡಿ ಬಿದ್ದಿದೆ. ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹಾಗೂ ಬಸವಾಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದ್ದು, ಎರಡೂ ಗ್ರಾಮದಲ್ಲಿ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿದೆ.
ಬಸವಾಪಟ್ಟಣ ವ್ಯಾಪ್ತಿಯಲ್ಲಿ 80 ಮಿ. ಮೀ. ಮಳೆ ಸುರಿದಿದೆ. ಮನೆಯೊಳಗೆ ನೀರು ನುಗ್ಗಿ ಅಹಾರ ಧಾನ್ಯ, ಎಲೆಕ್ಟ್ರಾನಿಕ್ ಸಾಮಾಗ್ರಿಗಳಿಗೆ ಹಾನಿ ಉಂಟಾಗಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಸ್ವಾಮಿ, ಗ್ರಾಮ ಲೆಕ್ಕಿಗರಾದ ಮದನ್, ಯಾದವ್, ಉಮೇಶ್, ಪೂಜಾರಿ ಮತ್ತು ತಂಡದಿಂದ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.











Click it and Unblock the Notifications