ದೇವೇಗೌಡರು ನನ್ನ ಹಂಗಲ್ಲಿ ಇದ್ದಾರೆಂದ ಸಚಿವ ಎ ಮಂಜು
ಹಾಸನ, ಜನವರಿ 25 : "ದೇವೇಗೌಡರಿಗೆ ವಯಸ್ಸಾಗಿದೆ. ಅದಕ್ಕೇ ಏನೇನೋ ಮಾತಾಡ್ತಾರೆ. ನಾನು ಏಳನೇ ಕ್ಲಾಸನ್ನೇ ಏಳು ಸಾರಿ ಫೇಲಾಗಿ ಅವರ ಥರಾ ಮಂತ್ರಿ ಆದವನಲ್ಲ. ನಮ್ಮಪ್ಪ ನನ್ನನ್ನು ಡಬಲ್ ಡಿಗ್ರಿ ಮಾಡಿಸಿದ್ದಾರೆ" ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಿರುದ್ಧ ಸಚಿವ ಎ.ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾನು ಯಾರದೋ ಕೃಪಾ ಕಟಾಕ್ಷದಿಂದ ಮಂತ್ರಿಯಾಗಿಲ್ಲ. ದೇವೇಗೌಡರು ಯಾರ ಸಹಾಯದಿಂದ ಸಂಸದರಾದರು ಎಂದು ಹೇಳಲಿ. ಅವರು ಸೋತು ಮನೆಯಲ್ಲಿ ಕುಳಿತಿದ್ದಾಗ ನನ್ನ ಹತ್ತಿರ ಸಹಾಯ ಕೇಳಿಕೊಂಡು ಬಂದರು. ದೇವೇಗೌಡರಿಗೆ ಪ್ರಧಾನಮಂತ್ರಿ ಕುರ್ಚಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದೇವೇಗೌಡರು ವಯಸ್ಸಿಗೆ ತಕ್ಕಂತೆ ಮಾತನಾಡಲಿ" ಎಂದರು ಮಂಜು.
ದೇವೇಗೌಡರು ಮಕ್ಕಳ ವ್ಯಾಮೋಹ ಮೊದಲು ಬಿಡಲಿ. ಏಕೆ ಜಿಲ್ಲಾಧಿಕಾರಿ ಬದಲಾವಣೆ ಮಾಡಿದರು ಅನ್ನೋದನ್ನು ಕೆಲವೇ ದಿನದಲ್ಲಿ ಬಹಿರಂಗಪಡಿಸುತ್ತೀನಿ. ನಾನು ಅವರ ಹಂಗಲ್ಲಿ ಇಲ್ಲ, ನನ್ನ ಹಂಗಲ್ಲಿ ಅವರು ಇದ್ದಾರೆ ಎನ್ನುವ ಮೂಲಕ ದೇವೇಗೌಡರ ಆರೋಪಕ್ಕೆ ಎ.ಮಂಜು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಮಕ್ಕಳು ಮಾತ್ರ ಮಂತ್ರಿಗಳಾಗಿರಬೇಕು. ಅವರು ಮಾತ್ರ ಗೌಡರು. ಮಿಕ್ಕವರು ಅಲ್ಲವಾ? ಅವರ ಮಕ್ಕಳು, ಮರಿಗಳು ಮಾತ್ರ ಅಧಿಕಾರದಲ್ಲಿದ್ದರೆ ಈ ದೇಶ, ಈ ರಾಜ್ಯ. ಯಾಕೆ ಅವರು ಜಿಲ್ಲಾಧಿಕಾರಿ ಬದಲಾವಣೆ ಬಗ್ಗೆ ಹೇಳಿದರು ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ ಎಂದರು.
ಇಂಥ ಅಧಿಕಾರಿಗಳು ಬೇಕು ಹಾಗೂ ಈ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ದೇವೇಗೌಡರು ಎಷ್ಟು ಬಾರಿ ಪತ್ರ ಬರೆದಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.











Click it and Unblock the Notifications