ಹಾಸನ: ಡಬಲ್ ಮರ್ಡರ್ ಕೇಸ್ ನಲ್ಲಿ ಏಳು ಮಂದಿ ಅರೆಸ್ಟ್
ಹಾಸನ, ಮಾರ್ಚ್ 10: ಜೋಡಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ 7 ಕೊಲೆಗಾರರನ್ನು ಬಂಧಿಸುವಲ್ಲಿ ಹೊಳೆನರಸೀಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ರಾಹುಲ್ ಕುಮಾರ್ ಅವರು ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ರಾಚೇನಹಳ್ಳಿ ಗ್ರಾಮದ ನಿವಾಸಿ ದಿಲೀಪ್ (29) ಹಾಗೂ ಕಡೂರು ತಾಲೂಕಿನ ಆರ್.ಜಿ. ಕೊಪ್ಪಲು ನಿವಾಸಿ ರಾಜಶೇಖರಪ್ಪ (32) ಎಂಬುವರನ್ನು ಡಿಸೆಂಬರ್ 17, 2016ರಂದು ಕೊಲೆ ಮಾಡಲಾಗಿತ್ತು.
ಕೊಲೆ ಆರೋಪಿಗಳಾದ ಚನ್ನರಾಯಪಟ್ಟಣದ ಯಾಚೇನಹಳ್ಳಿ ಗ್ರಾಮದ ನಿವಾಸಿ ಚೇತು (29), ಚನ್ನರಾಯಪಟ್ಟಣದ ಟೌನ್ ವಾಸಗೂರನಹಳ್ಳಿ ನಿವಾಸಿ ಕಾಳಿ (32), ಕೇಶವ (32), ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ ಕಂಚನಹಳ್ಳಿ ಗ್ರಾಮದ ನಿವಾಸಿ ರಖಿತ (27), ಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ನಿವಾಸಿ ಪ್ರಶಾಂತ್ (24), ಯಾಚೇನಹಳ್ಳಿ ಗ್ರಾಮದ ಮಂಜುನಾಥ್ (28), ವಿಜಯಕುಮಾರ್ (26) ಎಂಬ ಆರೋಪಿಗಳನ್ನು ಹೊಳೆನರಸೀಪುರ ಪೊಲೀಸರು ಬಂಧಿಸಿದ್ದಾರೆ.[ಹಾಸನದಲ್ಲಿ ಬೆಂಕಿ ಆರಿಸಲು ಹೋದ ರೈತ ಸಜೀವ ದಹನ]
ಘಟನೆ ವಿವರ: ರೌಡಿಗಳಾದ ಚೇತು, ಕಾಳಿ, ಕೇಶವ ಸೇರಿದಂತೆ ಇತರರು ಚನ್ನರಾಯಪಟ್ಟಣದ ಬರಗೂರು ವಿಜಿಯ ಕಡುವೈರಿಗಳಾಗಿದ್ದರು. ವಿಜಿಗೆ ಹಾಸನದ ಚೈಲ್ಡ್ ರವಿಗೆ ಬೆಂಬಲ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ ರವಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು.

2016ರ ಡಿಸೆಂಬರ್ 17 ರಂದು ಚೈಲ್ಡ್ ರವಿಯ ಆಪ್ತರಾದ ದಿಲೀಪ್ ಮತ್ತು ರಾಜಶೇಖರಪ್ಪ ಎಂಬುವರನ್ನು ಬೆಂಗಳೂರಿನಲ್ಲಿ ಅಪಹರಿಸಿ ಮಾಗಡಿ ತಾಲೂಕಿನ ಪಾಲನಹಳ್ಳಿಯ ತೋಟದ ಮನೆಯಲ್ಲಿ ಕೂಡಿಹಾಕಿದ್ದರು. ಇವರ ಮೂಲಕ ಚೈಲ್ಡ್ ರವಿಗೆ ಕರೆ ಮಾಡಿಸಿ ಕರೆಯಿಸಿಕೊಳ್ಳಲು ಪ್ರಯತ್ನಿಸಿದ್ದರು.
ಆದರೆ, ಅವರಿಬ್ಬರೂ ಸಹಕರಿಸದಿದ್ದಾಗ ಅವರನ್ನು ಕೊಲೆ ಮಾಡಲಾಗಿತ್ತು. ನಂತರ ಇಬ್ಬರ ಶವವನ್ನು ಹೊಳೆನರಸೀಪುರ ತಾಲೂಕು ಹರದನಹಳ್ಳಿ, ಸಿಗರನಹಳ್ಳಿ ಗ್ರಾಮಗಳ ಬೆಟ್ಟದ ತಪ್ಪಲಿನಲ್ಲಿ ಹಾದು ಹೋಗಿರುವ ಚಾನಲ್ ಗೆ ಎಸೆದು ಪರಾರಿಯಾಗಿದ್ದರು.[ಹಾಸನದ ಲಾಡ್ಜ್ ನಲ್ಲಿ ನೇಣಿಗೆ ಕೊರಳು ಕೊಟ್ಟ ಅಣ್ಣ-ತಮ್ಮ]
ಕೊಲೆ ಮಾಡಿದ ಬಳಿಕ ರೌಡಿಗಳಾದ ಚೇತು, ಕಾಳಿ, ಕೇಶವ ಸೇರಿದಂತೆ ಇತರರು ಮುಂಬೈ, ಉತ್ತರಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ತನಿಖಾ ತಂಡ ಇವರ ಫೋಟೊವನ್ನು ಇತರೆ ಪೊಲೀಸ್ ಠಾಣೆಗೆ ರವಾನಿಸಿ, ಮಾಹಿತಿ ನೀಡುವಂತೆ ಮನವಿ ಮಾಡಿತ್ತು.
ಹಾಗೆ ನೋಡಿದರೆ ಕೊಲೆಗೀಡಾದ ದಿಲೀಪ್ ಮತ್ತು ರಾಜಶೇಖರಪ್ಪ ಇಬ್ಬರೂ ರೌಡಿಗಳೇ. ಬೆಂಗಳೂರು ನಗರದ ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣ ಹಾಗೂ ಬೆಂಗಳೂರು ನಗರದಲ್ಲಿ ಇತರೆ ನಾಲ್ಕು ಪ್ರಕರಣ ದಾಖಲಾಗಿದೆ.
ಕೊಲೆಯಾದ ರಾಜಶೇಖರಪ್ಪನ ಮೇಲೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ಹಾಗೂ ಬೆಂಗಳೂರು ನಗರದಲ್ಲಿ ನಡೆದ ನಾಲ್ಕು ಸುಲಿಗೆ ಹಾಗೂ ಕಳವು ಪ್ರಕರಣಗಳು ಇವೆ. ಈತ ರೌಡಿ ಚೈಲ್ಡ್ ರವಿಯ ನಿಕಟವರ್ತಿ ಆಗಿದ್ದ. ಹೀಗಾಗಿ ವೈಷಮ್ಯದ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಏಳು ಮಂದಿ ಸೇರಿ ಕೊಲೆಗೈದಿದ್ದರು.