2 ವರ್ಷಗಳ ಬಳಿಕ ಭಕ್ತರಿಗೆ ಹಾಸನಾಂಬ ದೇವಿ ದರ್ಶನ ಭಾಗ್ಯ: ದರ್ಶನ ಸಮಯ ಇಲ್ಲಿದೆ
ಹಾಸನ, ಅಕ್ಟೋಬರ್ 29: ಎರಡು ವರ್ಷಗಳ ಬಳಿಕ ಭಕ್ತರಿಗೆ ಹಾಸನಾಂಬ ದೇವಿ ದರ್ಶನ ಭಾಗ್ಯ ದೊರೆತಿದ್ದು, ಹಾಸನಾಂಬೆಯ ಮೊದಲ ದಿನದ ದರ್ಶನೋತ್ಸವ ಇಂದಿನಿಂದ (ಅ.29, ಶುಕ್ರವಾರ) ಆರಂಭವಾಗಿದೆ.
ಇಂದು ಬೆಳಿಗ್ಗೆಯೇ ದೇವಾಲಯದತ್ತ ಸಹಸ್ರಾರು ಭಕ್ತರು ಲಗ್ಗೆಯಿಟ್ಟಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಭಕ್ತರು ಹಾಸನಾಂಬೆಯ ದರ್ಶನ ಪಡೆಯುತ್ತಿದ್ದಾರೆ. ನಿನ್ನೆ (ಗುರುವಾರ) ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆದಿದ್ದು, ಇಂದಿನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇಂದಿನಿಂದ (ಅ.28) ಹತ್ತು ದಿನಗಳ ಕಾಲ ಹಾಸನಾಂಬ ದೇವಾಲಯ ಬಾಗಿಲು ಓಪನ್
ಇಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಸನಾಂಬ ದೇವಿ ದರ್ಶನಕ್ಕೆ ಅವಕಾಶವಿದ್ದು, ಆ ನಂತರ ಮಧ್ಯಾಹ್ನ 3 ಗಂಟೆಯಿಂದ 7 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.
ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹಾಸನಾಂಬೆ ದೇವಸ್ಥಾನ ಬಾಗಿಲು ಆಶ್ವೀಜ ಮಾಸದ ಮೊದಲ ಗುರುವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ ಬಾಗಿಲು ತೆರೆದಿದ್ದು, ದೇವಿಯ ದರ್ಶನ ಇಂದಿನಿಂದ ಆರಂಭವಾಗಿದೆ.
ಹಾಸನಾಂಬ ದೇವಿ ವರ್ಷಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಅವಕಾಶವಿರುತ್ತದೆ. ಈ ಬಾರಿ ೧೦ ದಿನಗಳ ಕಾಲ ದೇವಾಲಯದ ಬಾಗಿಲು ತೆರಯಲಿದ್ದು, ಎಂಟು ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಸನ ಜಿಲ್ಲಾಡಳಿತ ಜಾತ್ರಾ ಮಹೋತ್ಸವ ನಡೆಸಲು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.

ಎರಡು ವರ್ಷಗಳ ನಂತರ ದರ್ಶನ ಪಡೆದ ಭಕ್ತರು
ಎರಡನೇ ದಿನ ಹಾಸನದ ಹಾಸನಾಂಬ ದೇವಾಲಯದ ಬಾಗಿಲು ಶುಕ್ರವಾರ ತೆರೆದಿದ್ದು, ದೇವಿ ದರ್ಶನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಬೆಳಿಗ್ಗೆ 5 ಗಂಟೆಯಿಂದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ದೇವಿ ದರ್ಶನಕ್ಕೆ ಬಂದಿರುವವರ ಸರ್ಟಿಫಿಕೇಟ್ ಅಥವಾ ಮೆಸೇಜ್‌ನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಸಾರ್ವಜನಿಕ ದರ್ಶನಕ್ಕೆ ತೊಂದರೆ ಆಗದಂತೆ ಸರತಿ ಸಾಲಿನಲ್ಲಿ ಬರಲು ಬ್ಯಾರೀಕೇಡ್‌ಗಳನ್ನು ನಿರ್ಮಿಲಾಗಿದ್ದು, ಶೀಘ್ರ ದರ್ಶನಕ್ಕಾಗಿ 300 ರೂ. ಮತ್ತು 1000 ರೂ.ಗಳ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ದರ್ಶನಕ್ಕೆ ಬರುವ ಭಕ್ತರಿಗೆ ಕೋವಿಡ್ ವ್ಯಾಕ್ಸಿನ್ ಕಡ್ಡಾಯಗೊಳಿಸಿರುವ ಜಿಲ್ಲಾಡಳಿತ ವ್ಯಾಕ್ಸಿನ್ ಪಡೆದ ದೃಢೀಕರಣ ಪತ್ರವನ್ನು ಮತ್ತು ಗುರುತಿನ ಚೀಟಿಯನ್ನು ತಂದರೆ ಮಾತ್ರ ಪ್ರವೇಶವೆಂದು ಆದೇಶಿಸಿದೆ.
ಗುರುವಾರ 12 ಗಂಟೆ ಸುಮಾರಿಗೆ ದೇವಾಲಯದ ಬಾಗಿಲನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಜಿಲ್ಲಾಧಿಕಾರಿ ಆರ್. ಗಿರೀಶ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ತೆರೆಯಲಾಗಿತ್ತು. ಅಕ್ಟೋಬರ್ 28ರಿಂದ ನವೆಂಬರ್ 6ರವರೆಗೂ ಹಾಸನಾಂಬ ಜಾತ್ರಾ ಮಹೋತ್ಸವ ಹತ್ತು ದಿನಗಳು ನಡೆಯಲಿದ್ದು, ನಿನ್ನೆ ಮತ್ತು ಕೊನೆಯ ದಿನ ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಭಕ್ತರಿಗೆ ದರ್ಶನದ ಅವಕಾಶವಿರುವುದಿಲ್ಲ.
ದರ್ಶನ ಪಡೆದ ಮಾಜಿ ಸಚಿವ ಎಚ್.ಡಿ. ರೇವಣ್ಣ
ಹಾಸನ ಹಾಸನಾಂಬೆ ದೇವಿ ದರ್ಶನಕ್ಕೆ ಇಂದಿನಿಂದ ಸಾರ್ವಜನಿಕರ ಅವಕಾಶ ಕಲ್ಪಿಸಲಾಗಿದ್ದು, ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಹಾಸನಾಂಬೆ ದೇವಿ ದರ್ಶನಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗಮಿಸಿದ್ದು, ಪತ್ನಿ ಭವಾನಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ, ದರ್ಶನ ಪಡೆದರು.
ಹಾಸನಾಂಬ ದರ್ಶನ ಪಡೆದ ಸಾಲುಮರದ ತಿಮ್ಮಕ್ಕ
ಇನ್ನು ಶತಾಯುಷಿ ಸಾಲುಮರದ ತಿಮ್ಮಕ್ಕ ತನ್ನ ಪುತ್ರನ ಜೊತೆಗೆ ಆಗಮಿಸಿ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಪದ್ಮಶ್ರೀ ಸಾಲುಮರದ ತಿಮ್ಮಕ್ಕ ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನ ಅಧಿದೇವತೆ ಆಶೀರ್ವಾದ ಪಡೆದು ಗರ್ಭಗುಡಿಯಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದಲ್ಲಿ ಭಕ್ತರ ಆಕ್ರೋಶ
ಹಾಸನಾಂಬ ದರ್ಶನ ಪಡೆಯಲು ಗಣ್ಯ ವ್ಯಕ್ತಿಗಳು ಬಂದಾಗ ದರ್ಶನ ಬಂದ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದರ್ಶನ ಬಂದ್ ಮಾಡದಂತೆ ಒತ್ತಾಯಿಸಿ ಹಾಸನಾಂಬೆ ದೇವಾಲಯದ ಬಳಿ ಭಕ್ತರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಗಣ್ಯರು ಬಂದಾಗ ಸಾರ್ವಜನಿಕರಿಗೆ ದರ್ಶನ ಬಂದ್ ಮಾಡುವುದರಿಂದ ದರ್ಶನಕ್ಕಾಗಿ ಸಾಲುಗಟ್ಟಿ ನಿಂತ ಭಕ್ತರು ಸುಸ್ತಾಗುತ್ತಿದ್ದಾರೆ ಎಂದು ಅಸಮಧಾನಗೊಂಡಿದ್ದಾರೆ.
ಮಾಜಿ ಸಚಿವ ಎಚ್.ಡಿ. ರೇವಣ್ಣ ದಂಪತಿ ಹಾಸನಾಂಬ ದೇವಿಯ ದರ್ಶನಕ್ಕೆ ಬಂದ ಹಿನ್ನೆಲೆ ದೇವಾಲಯ ಆಡಳಿತ ಮಂಡಳಿ ಸುಮಾರು 20 ನಿಮಿಷ ಭಕ್ತರಿಗೆ ದರ್ಶನ ಸ್ಥಗಿತಗೊಳಿಸಿದ್ದರು. ಇದರಿಂದ ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ. ಮೂರ್ನಾಲ್ಕು ಗಂಟೆಯಿಂದ ಕಾದು ರೇವಣ್ಣ ಬಂದರೆಂದು ನಮ್ಮನ್ನು ನಿಲ್ಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.