ಹಾಸನಾಂಬೆ ಉತ್ಸವ ಮುಕ್ತಾಯ: ಭಕ್ತಾದಿಗಳು ಕಡಿಮೆ,ಕಾಣಿಕೆ ಸಂಗ್ರಹ ಕುಸಿತ
ಹಾಸನ, ನವೆಂಬರ್ 09: ಇತಿಹಾಸ ಪ್ರಸಿದ್ಧ ಹಾಸನದ ಹಾಸನಾಂಬೆ ದೇವಾಲಯ ಉತ್ಸವ ಇಂದು ಮುಕ್ತಾಯವಾಗಿದ್ದು, ಇಂದು ಬಾಗಿಲು ಮುಚ್ಚಲಾಗಿದೆ. ಮುಂದಿನ ವರ್ಷದವರೆಗೆ ದೇವಾಲಯದ ಬಾಗಿಲು ತೆರಯದು.
ನವೆಂಬರ್ 1 ರಿಂದ ಪ್ರಾರಂಭವಾಗಿ ಒಂಬತ್ತು ದಿನಗಳ ಕಾಲ ಹಾಸನಾಂಬೆ ದೇಗುಲದ ಬಾಗಿಲು ತೆರೆದು ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಲಾಯಿತಾದರೂ ಭಕ್ತಾದಿಗಳ ಆಗಮನ ಕಳೆದ ವರ್ಷಕ್ಕಿಂತಲೂ ಕಡಿಮೆಯೇ ಇತ್ತು.
ಒಂಬತ್ತು ದಿನಗಳ ವರೆಗೆ ನಡೆದ ಉತ್ಸವದಲ್ಲಿ ಒಟ್ಟು 12 ಲಕ್ಷಕ್ಕೂ ಮಿಕ್ಕಿ ಜನರು ಹಾಸನಾಂಬೆ ದರ್ಶನ ಮಾಡಿದ್ದಾರೆ ಎಂದು ಜಿಲ್ಲಾ ಆಡಳಿತ ಹೇಳಿದೆ. ಅಂತೆಯೇ ಕಾಣಿಕೆ ಸಂಗ್ರಹದಲ್ಲಿಯೂ ಈ ಬಾರಿ ಕಡಿಮೆ ಆಗಿದೆ ಎನ್ನಲಾಗಿದೆ. ಕಾಣಿಕೆ ಹಣ ಎಣಿಸುವ ಕಾರ್ಯ ಚಾಲ್ತಿಯಲ್ಲಿದೆ.

ಪ್ರತಿಬಾರಿಯಂತೆ ಈ ಬಾರಿಯೂ ಗಣ್ಯರಿಗೆ ವಿಶೇಷ ಪಾಸ್ ವ್ಯವಸ್ಥೆ ಮತ್ತು ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ದರ್ಶನದ ಟಿಕೆಟ್ ನಿಂದ ಒಟ್ಟು 1.14 ಕೋಟಿ ಆದಾಯ ಬಂದಿದೆ. ಲಾಡು ಮಾರಾಟದಿಂದ 13.39 ಲಕ್ಷ ಲಾಭ ಬಂದಿದೆ. ಸೀರೆ ಮಾರಾಟದಿಂದ 56,200 ರೂಪಾಯಿ ಬಂದಿದೆ ಎಂದು ದೇವಾಲಯದ ಆಡಳಿತ ಹೇಳಿದೆ.
ಮಾಮೂಲಿನಂತೆ ಹುಂಡಿಯಲ್ಲಿ ಹಣದ ಜೊತೆಗೆ ಹಲವು ಪತ್ರಗಳೂ ಸಿಕ್ಕಿವೆ. ಪಾಸು ಮಾಡೆಂದು ಕೋರಿರುವವರು, ಕೆಲಸ ಕೊಡಿಸೆಂದು ಹಾಸನಾಂಬೆ ಬಳಿ ಹಾಕಿರುವ ಅರ್ಜಿಗಳು, ಶತ್ರು ನಾಶಕ್ಕಾಗಿ ಕೊರಿ ಬರೆದಿರುವ ಮನಿಗಳೂ ಹುಂಡಿಯಲ್ಲಿ ದೊರೆತಿವೆ.












Click it and Unblock the Notifications