ಹಾಸನಾಂಬ ಜಾತ್ರೆ; ದೇವಸ್ಥಾನಕ್ಕೆ ದೇವಿಯ ಆಭರಣ ಆಗಮನ
ಹಾಸನ, ಅಕ್ಟೋಬರ್, 11: ಅಕ್ಟೋಬರ್ 13 ರಿಂದ 27ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಹಿನ್ನೆಲೆ ಹಾಸನಾಂಬೆ ದೇವಿಯ ಆಭರಣಗಳ್ನು ಖಜಾನೆಯಿಂದ ದೇಗುಲಕ್ಕೆ ಕೊಂಡೊಯ್ದಿದ್ದಾರೆ. ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿಯಲ್ಲಿ ಇರಿಸಿ ಬೆಳ್ಳಿ ರಥದಲ್ಲಿ ಆಭರಣಗಳನ್ನು ಅರ್ಚಕರು ದೇವಸ್ಥಾನಕ್ಕೆ ಕೊಂಡೊಯ್ದಿದ್ದಾರೆ.
ತಹಶೀಲ್ದಾರ್ ನಟೇಶ್ ಸಮ್ಮುಖದಲ್ಲಿ ಪುಷ್ಪಾಲಂಕೃತ ಅಡ್ಡ ಪಲ್ಲಕ್ಕಿ ಮೇಲೆ ಆಭರಣಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಸಂಪ್ರದಾಯಂತೆ ಮಡಿವಾಳರು ಪಂಜು ಮತ್ತು ಮುತ್ತೈದೆಯರು ಆರತಿ ಬೆಳಗಿದ್ದು, ಈ ವೇಳೆ ಭಕ್ತರು ದೇವಿಗೆ ಜೈಕಾರ ಕೂಗಿದರು. ಹೀಗೆ ಬೆಳ್ಳಿ ರಥದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಹಾಸನಾಂಬೆ ದೇಗುಲಕ್ಕೆ ಆಭರಣಗಳನ್ನು ತರಲಾಯಿತು. ಒಡವೆ ಕೊಂಡೊಯ್ಯುವ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಬಾರಿ ಹದಿನೈದು ದಿನಗಳ ಕಾಲ ದೇವಾಲಯ ಬಾಗಿಲು ತೆರೆಯಲಿದ್ದು, ಮೊದಲ ದಿನ ಹಾಗೂ ಕೊನೆಯ ದಿನ ಮತ್ತು ಅಕ್ಟೋಬರ್ 25 ರಂದು ಗ್ರಹಣ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಇರುವುದಿಲ್ಲ. ಉಳಿದ ಹನ್ನೆರಡು ದಿನಗಳ ಕಾಲ ಗರ್ಭಗುಡಿಯ ಬಾಗಿಲು ತೆರಯಲಿದೆ.
12 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ

ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಅದ್ಧೂರಿಯಾಗಿ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆದಿರಲಿಲ್ಲ. ಈ ವರ್ಷ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಅಧಿದೇವತೆಯ ದರ್ಶನವನ್ನು ಭಕ್ತರು ಪಡೆಯಬಹುದಾಗಿದೆ. ಒಟ್ಟು 12 ದಿನಗಳ ಕಾಲ ದೇವಾಲಯ ತೆರೆಯಲಿದೆ. ಆಶ್ವಿಜ ಮಾಸದ ಶುಕ್ಲ ಪಕ್ಷದ ಮೊದಲ ಗುರುವಾರದಂದು ಹಾಸನಾಂಬೆಯ ಬಾಗಿಲು ತೆರೆಯಲಿದ್ದು, ಬಲಿಪಾಡ್ಯಮಿಯ ಮಾರನೇಯ ದಿನ ಶಾಸ್ತ್ರೋಕ್ತವಾಗಿ ಗರ್ಭಗುಡಿಗೆ ಬಾಗಿಲು ಹಾಕಲಾಗುತ್ತದೆ. ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಧಿಕಾರಿಗಳು ಬಾಗಿಲು ತೆರೆಯುವ ಮತ್ತು ಮುಚ್ಚುವ ವೇಳೆ ಉಪಸ್ಥಿತರಿರುತ್ತಾರೆ. ಕಳೆದ ಎರಡು ವರ್ಷ ಮಹಾಮಾರಿ ಕೊರೊನಾ ಹಿನ್ನೆಲೆ ಭಕ್ತರಿಗೆ ಹಲವು ನಿಬಂಧನೆಗಳನ್ನು ಹಾಕಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವವನ್ನು ನಡೆಸಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ.












Click it and Unblock the Notifications