Hasanamba jatra 2023: ಹಾಸನಾಂಬೆಗೆ ಹರಿದು ಬಂತು ದಾಖಲೆಯ ಆದಾಯ, ಇಲ್ಲಿದೆ ವಿವರ
ಹಾಸನ, ನವೆಂಬರ್, 16: ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದಲ್ಲಿ ಹುಂಡಿ ಎಣಿಕೆ ನಡೆದಿದ್ದು, ಈ ಬಾರಿ ದಾಖಲೆಯ ಆದಾಯ ಹರಿದುಬಂದಿದೆ. ಹಿಂದೆಂದಿಗಿಂತಲೂ ಹೆಚ್ಚು 8,72,41,531 ರೂಪಾಯಿ ಆದಾಯ ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಹಾಸನಾಂಬ ಉತ್ಸವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಾಗ 5 ಕೋಟಿ 20 ಲಕ್ಷ ಹಣ ಸಂಗ್ರಹವಾಗಿ ದಾಖಲೆ ನಿರ್ಮಾಣ ಆಗಿತ್ತು. ಆದರೆ ಈ ಬಾರಿ ಮಾತ್ರ ವಿಶೇಷ ದರ್ಶನ ಟಿಕೆಟ್, ಲಾಡು ಪ್ರಸಾದದಿಂದಲೇ 6 ಕೋಟಿ 15 ಲಕ್ಷ ರೂಪಾಯಿ ಸಂಗ್ರಹವಾಗುವ ಮೂಲಕ ಹಳೆಯ ದಾಖಲೆಯನ್ನು ಮೀರಿಸಿದೆ.

ಈ ಬಾರಿ ಹಾಸನಾಂಬ ಉತ್ಸವ 12 ದಿನಗಳ ಕಾಲ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ದೊರೆತಿದ್ದು, ಈ ವರ್ಷ ಹಾಸನಾಂಬೆಯ ಹುಂಡಿಯಲ್ಲಿ 2,55,41,497 ರೂಪಾಯು ಹಣ ಸಂಗ್ರಹ ಆಗಿದೆ.
ಇನ್ನು ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ಉತ್ಸವ ಸಂಪನ್ನಗೊಂಡಿದೆ. ಇಂದು ಬೆಳಗ್ಗೆ 7:45ಕ್ಕೆ ಭಕ್ತರ ದರ್ಶನಕ್ಕೆ ತೆರೆ ಬಿದ್ದಿದೆ. ಮಧ್ಯಾಹ್ನ 12:23ಕ್ಕೆ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವು ಮಾಡಿ, ಪೂಜೆ ಬಳಿಕ ಗರ್ಭಗುಡಿಗೆ ಬೀಗ ಹಾಕಲಾಗಿದೆ.
ಮಲೆ ಮಾದಪ್ಪನಿಗೆ ಹರಿದುಬಂತು ₹2.8 ಕೋಟಿ
ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನವೆಂಬರ್ 10ರಿಂದ 14 ರವರೆಗೆ ಅದ್ಧೂರಿಯಾಗಿ ದೀಪಾವಳಿ ಜಾತ್ರೆ ನಡೆದಿದ್ದು, ಕೇವಲ ಈ 5 ದಿನಗಳ ಅವಧಿಯಲ್ಲಿ ಕ್ಷೇತ್ರಕ್ಕೆ 2.8 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.
ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಈ ಸಂಬಂಧ ಮಾಹಿತಿ ನೀಡಿದ್ದು, ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ 5 ದಿನಗಳ ಅವಧಿಯಲ್ಲಿ 2.8 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಚಿನ್ನದ ರಥ ಸೇವೆ, ರುದ್ರಾಕ್ಷಿ ವಾಹನ, ಬೆಳ್ಳಿ ರಥ, ಲಾಡು ಮಾರಾಟ, ಮಿಶ್ರ ಪ್ರಸಾದ ಮಾರಾಟ, ಪಾರ್ಕಿಂಗ್, ವಿಶೇಷ ದರ್ಶನದ ಟಿಕೆಟ್ ಸೇರಿದಂತೆ ವಿವಿಧ ಸೇವೆಗಳಿಂದ 2,08,82,110 ರೂಪಾಯಿ ಆದಾಯ ಬಂದಿದ್ದು, ಇದರಲ್ಲಿ ಹುಂಡಿ ಹಣ ಸೇರಿಲ್ಲ.
ಕಳೆದ 5 ದಿನಗಳ ಅವಧಿಯಲ್ಲಿ 1786 ಚಿನ್ನದ ರಥೋತ್ಸವ, 50 ಬೆಳ್ಳಿ ರಥೋತ್ಸವ, 1,114 ಬಸವ ವಾಹನ, 9135 ಹುಲಿ ವಾಹನ, 410 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಸಿದ್ದಾರೆ. ಇನ್ನು ಮಲೆ ಮಹದೇಶ್ವರ ಹುಲಿವಾಹನ ಉತ್ಸವಕ್ಕೆ ಅತಿ ಹೆಚ್ಚು ಭಕ್ತರು ಆಗಮಿಸಿದ್ದಾರೆ. ಈ ಉತ್ಸವಗಳಿಂದಲೇ 86 ಲಕ್ಷ ರೂಪಾಯಿ ಹಣ ಪ್ರಾಧಿಕಾರಕ್ಕೆ ಸಂದಾಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು, ಲಾಡು ಮಾರಾಟದಿಂದ 54 ಲಕ್ಷ, ಮಿಶ್ರ ಪ್ರಸಾದದಿಂದ 8 ಲಕ್ಷ, ಪುದುವಟ್ಟು ಸೇವೆಯಿಂದ 2 ಲಕ್ಷ, ಸೇವೆಗಳಿಂದ 5 ಲಕ್ಷ, ಪ್ರಸಾದದ ಕ್ಯಾರಿ ಬ್ಯಾಗ್‌ನಿಂದಲೇ 72 ಸಾವಿರ ಹಣ ಬಂದಿದ್ದು, ಒಟ್ಟಾರೆ 5 ದಿನದ ಅವಧಿಯಲ್ಲಿ ಕ್ಷೇತ್ರಕ್ಕೆ 2,08,82,110 ರೂಪಾಯಿ ಆದಾಯ ಬಂದಿದೆ.
ತಿರುಪತಿ ಮಾದರಿಯಲ್ಲಿ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಪಾದಯಾತ್ರೆಗಳಿಗೆ ಉಚಿತ ದರ್ಶನ, ವಸತಿ ಹಾಗೂ ದಾಸೋಹದ ಪಾಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಸುಮಾರು 10,600ಕ್ಕೂ ಹೆಚ್ಚು ಕಾಲ್ನಡಿಗೆ ಭಕ್ತಾದಿಗಳು ಈ ಪಾಸ್ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ದೀಪಾವಳಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಮಲೆ ಮಹದೇಶ್ವರನ ದರ್ಶನ ಪಡೆಯುವ ಜೊತೆಗೆ ಕೋಟ್ಯಾಂತರ ರೂಪಾಯಿ ಆದಾಯವನ್ನು ಕ್ಷೇತ್ರಕ್ಕೆ ಕೊಟ್ಟಿದ್ದಾರೆ.












Click it and Unblock the Notifications