ದೇವಾಲಯದಲ್ಲಿ ಜಾರಿ ಬಿದ್ದ ರೇವಣ್ಣ, ಐಸಿಯುನಲ್ಲಿ ಚಿಕಿತ್ಸೆ
ಹಾಸನ, ಜುಲೈ 17: ಅಪಾರ ದೈವ ಭಕ್ತರಾಗಿರುವ ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ದೇವಾಲಯದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಸದ್ಯ ಅವರು ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ಎಚ್. ಡಿ. ರೇವಣ್ಣ ಎಚ್.ಡಿ.ರೇವಣ್ಣ ಹೊಳೆನರಸೀಪುರ ತಾಲೂಕಿನ, ಹರದನಹಳ್ಳಿ ದೇವಾಲಯದಲ್ಲಿ ಕಾಲು ಜಾರಿ ಬಿದ್ದರು. ಅವರ ಪಕ್ಕೆಲುಬಿಗೆ ಪೆಟ್ಟಾಗಿದೆ. ಏಕಾದಶಿ ಪ್ರಯುಕ್ತ ಉಪವಾಸವಿದ್ದ ರೇವಣ್ಣ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬರುವ ವೇಳೆ ಜಾರಿ ಬಿದ್ದಿದ್ದಾರೆ.

ಎಚ್. ಡಿ. ರೇವಣ್ಣ ಹರದನಹಳ್ಳಿಯಿಂದ ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಹೊರಟಿದ್ದರು. ಈ ವೇಳೆ ಅವರು ಕಾಲು ಜಾರಿ ಬಿದ್ದಿದ್ದು, ಪಕ್ಕೆಲುಬಿಗೆ ತೀವ್ರವಾದ ನೋವಾಗಿದೆ.
ತಕ್ಷಣ ಅವರನ್ನು ಹೊಳೆನರಸೀಪುರದ ತಾಲೂಕು ಆಸ್ಪತ್ರೆಯ ಐಸಿಯುಗೆ ದಾಖಲು ಮಾಡಲಾಗಿದೆ. ರೇವಣ್ಣ ಅವರ ಅಪಾರ ಬೆಂಬಲಿಗರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಸಂಜೆಯ ವೇಳೆಗೆ ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ತಿಳಿಯಲಿದೆ.
ಎಚ್. ಡಿ. ರೇವಣ್ಣ ಉಪವಾಸ ಇದ್ದರು. ದೇವಾಲಯದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಪಕ್ಕೆಲುಬಿಗೆ ನೋವಾಗಿದ್ದು, ಅವರು ಸುಸ್ತಾಗಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅವರನ್ನು ವೈದ್ಯರ ಸಲಹೆಯಂತೆ ಬೆಂಗಳೂರು ನಗರಕ್ಕೆ ಕರೆದುಕೊಂಡು ಬರುವ ಸಾಧ್ಯತೆ ಇದೆ.
ಎಚ್. ಡಿ. ರೇವಣ್ಣ ಮಂಗಳವಾರ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಂಡಿದ್ದರು. ಬುಧವಾರ ಅವರು ಹೊಳೆನರಸೀಪುರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಬೇಕಿತ್ತು. ರೇವಣ್ಣ ಅಪಾರ ದೈವ ಭಕ್ತರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಹರದನಹಳ್ಳಿಯಲ್ಲಿರುವ ದೇವಾಲಯಗಳಿಗೆ ದೇವೇಗೌಡರ ಕುಟುಂಬ ಭಕ್ತಿಯಿಂದ ನಡೆದುಕೊಳ್ಳುತ್ತದೆ. ಬುಧವಾರವೂ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಪಸ್ ಆಗುವಾಗ ರೇವಣ್ಣ ಜಾರಿ ಬಿದ್ದರು.
ಎಚ್. ಡಿ. ರೇವಣ್ಣ ಕುಟುಂಬ ಹಲವಾರು ಕಾನೂನು ಸಮರವನ್ನು ಎದುರಿಸುತ್ತಿದೆ. ರೇವಣ್ಣ ಪುತ್ರರಾದ ಪ್ರಜ್ವಲ್, ಸೂರಜ್ ಜೈಲಿನಲ್ಲಿದ್ದಾರೆ. 10 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದ ರೇವಣ್ಣ ಸದ್ಯ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.
ಆದ್ದರಿಂದ ಆಷಾಢ ಮಾಸದಲ್ಲಿ ರೇವಣ್ಣ ವಿಶೇಷ ಪೂಜೆ ಸಲ್ಲಿಕೆ ಮಾಡಲು ಬುಧವಾರ ದೇವಾಲಯಕ್ಕೆ ಭೇಟಿ ನೀಡಿದ್ದರು. ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಶೀಘ್ರವೇ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಈ ಹಿನ್ನಲೆಯಲ್ಲಿ ರೇವಣ್ಣ ದೇವಾಲಯಕ್ಕೆ ಭೇಟಿ ನೀಡಿದ್ದರು.
ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಎಚ್. ಡಿ. ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಆರೋಪಿಗಳು. ಪ್ರಜ್ವಲ್ ರೇವಣ್ಣರನ್ನು ಎಸ್‌ಐಟಿ ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಭವಾನಿ ರೇವಣ್ಣ ಬಂಧಿಸದಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅವರು ಈಗಾಗಲೇ ಎಸ್‌ಐಟಿ ವಿಚಾರಣೆ ಎದುರಿಸಿದ್ದಾರೆ.
ಇದೇ ಪ್ರಕರಣದಲ್ಲಿ ಎಸ್ಐಟಿ ಪ್ರಜ್ವಲ್ ರೇವಣ್ಣ ಬಂಧಿಸಿತ್ತು. ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಲೈಂಗಿಕ ದೌರ್ನಜ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಬಂಧಿಸಲಾಗಿದೆ.












Click it and Unblock the Notifications