ಹಾಸನ ಮೈತ್ರಿಯಲ್ಲಿ ಬಿರುಕು: ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆಗೆ ಸಿದ್ಧ ಎಂದ ಬಿಜೆಪಿ ನಾಯಕ
ಹಾಸನ, ಮಾರ್ಚ್ 04: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಅನ್ನು ಎದುರಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈಗಾಗಲೇ ಬಿಜೆಪಿ-ಜೆಡಿಎಸ್ ಕ್ಷೇತ್ರ ಹಂಚಿಕೆ ಕೂಡ ಅಂತಿಮ ಹಂತದಲ್ಲಿದ್ದು, ಎರಡು ಪಕ್ಷಗಳು ಜೋಡಿಯಾಗಿಯೇ ಚುನಾವಣಾ ಅಖಾಡಕ್ಕಿಳಿದಿದೆ. ಅತ್ತ ಕಾಂಗ್ರೆಸ್ ಎದುರಿಸಲು ಬಿಜೆಪಿ-ಜೆಡಿಎಸ್ ತಂತ್ರ ರೂಪಿಸುತ್ತಿದ್ದರೆ ಇತ್ತ ಹಾಸನದಲ್ಲಿ ಬಿಜೆಪಿ-ಜೆಡಿಎಸ್ ಮಧ್ಯೆ ಬಿರುಕು ಮೂಡಿದೆ.
ಬಿಜೆಪಿ ಮುಖಂಡ ದೇವರಾಜೇಗೌಡ ಮಾಜಿ ಪ್ರಧಾನಿಗಳ ಹೆಚ್.ಡಿ ದೇವಗೌಡರ ಕುಟುಂಬದ ವಿರುದ್ಧ ಕಿಡಿಕಾರುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದ ಯಾರೇ ಅಭ್ಯರ್ಥಿ ಆದರೂ ಅವರ ವಿರುದ್ಧ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಹೇಳಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಆರು ವರ್ಷ ಅನರ್ಹಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣದ ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿ ನಾಳೆ ಅಂತಿಮ ವಿಚಾರಣೆ ನಡೆಯಲಿದೆ. ಆದರೆ ಅವರು ಮೇಲ್ಮನವಿ ಸಲ್ಲಿಸಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಹಾಸನದಿಂದ ನಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ನಡೆ ನಮ್ಮ ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರ ದಾರಿ ತಪ್ಪಿಸುವ ಕೆಲಸವಾಗಿದೆ. ಇದರ ವಿರುದ್ಧ ನಾನು ಕೇಂದ್ರದ ನಾಯಕರಿಗೆ ದೂರು ನೀಡಿದ್ದೆ. ಕೇಂದ್ರದ ನಾಯಕರು ಕರೆಸಿ ಮಾತನಾಡಿದ್ದಾರೆ. ಹಾಸನದಿಂದ ಮೈತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ , ನೀವು ಕೆಲಸ ಮಾಡಿ ಎಂದು ಹೇಳಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಚುನಾವಣೆ ಕಚೇರಿ ತೆರೆಯಲಾಗಿದೆ. ಯಾವುದೇ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗೋದು ಬೇಡ ಎಂದರು.
ನಮ್ಮ ಕೆಲ ನಾಯಕರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಇದೇ ದೇವೇಗೌಡರು ನಮ್ಮನ್ನು ಚಡ್ಡಿಗಳು ಎಂದಿದ್ದರು. ದೇವೇಗೌಡರು ದೇಶ ಬಿಡುತ್ತೇನೆ ಎಂದಿದ್ದರು. ಭವಾನಿ ರೇವಣ್ಣ ನಡುರಾತ್ರಿಯಲ್ಲಿ ವಾಮಾಚಾರ ಮಾಡುತ್ತಾರೆ. ಹಂದಿ ಮತ್ತು ಕುರಿ, ಮೇಕೆ ಕಡಿದು ವಾಮಾಚಾರ ಮಾಡಿದ್ದಾರೆ. ದೇವೇಗೌಡರು ಯಜ್ಞ ಯಾಗಾದಿ ಮಾಡುತ್ತಾರೆ. ಇವರು ದೇವರನ್ನೇ ಕಟ್ಟಿಹಾಕುವ ಕೆಲಸ ಮಾಡುತ್ತಿದ್ದಾರೊ ಹೇಗೆ ಎಂದು ವ್ಯಂಗ್ಯವಾಡಿದರು.

ಕೆಲವು ರಾಜ್ಯ ನಾಯಕರು ಕೂಡ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ದೇವೇಗೌಡರ ಮನೆಗೆ ಹೋಗಿ ಓಲೈಕೆ ಕೆಲಸ ಮಾಡುತ್ತಿದ್ದಾರೆ. ಹಾಸನದಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ಇದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಅಂತಿಮ ಹಂತಕ್ಕೆ ಬಂದು ಕುತ್ತಿಗೆಗೆ ಬಂದಿದೆ. ರೇವಣ್ಣ ಕೂಡ ಜೈಲಿಗೆ ಹೋಗುವ ಪರಿಸ್ಥಿತಿ ಬಂದೇ ಬರುತ್ತದೆ. ಈ ಬಾರಿ ಪಕ್ಷಾತೀತವಾಗಿ ನಾವು ಚುನಾವಣೆ ಮಾಡುತ್ತೇವೆ. ನಮ್ಮ ಕೆಲ ನಾಯಕರು ಜೆಡಿಎಸ್ ಮೇಲಿನ ಸಿಟ್ಟಿಗೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ಆಲೋಚನೆ ಮಾಡಿದ್ದಾರೆ. ಯಾರೂ ಈ ರೀತಿ ಗೊಂದಲಕ್ಕೆ ಒಳಗಾಗೋದು ಬೇಡಾ ಎಂದು ಮನವಿ ಮಾಡಿದರು.
ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಸ್ ನಡೆಯುತ್ತಿದೆ. ಈ ತೀರ್ಪು ಬಂದ ಕೂಡಲೇ ಕರ್ನಾಟಕ ಸರ್ಕಾರ ವಜಾ ಆಗುತ್ತದೆ. ತೀರ್ಪು ಬಂದ ಹತ್ತು ನಿಮಿಷಕ್ಕೆ ರಾಷ್ಟ್ರಪತಿ ಆಡಳಿತ ಜಾರಿ ಆಗುತ್ತದೆ ಎಂದಿರುವ, ಭವಿಷ್ಯ ನುಡಿದ ಬಿಜೆಪಿ ಮುಖಂಡ ದೇವರಾಜೇಗೌಡ, ದೇವೇಗೌಡರ ಕುಟುಂಬದ ಯಾರೇ ಅಭ್ಯರ್ಥಿ ಆದರೂ ಅವರ ವಿರುದ್ಧ ನಾನು ಸ್ಪರ್ಧೆ ಮಾಡುತ್ತೇನೆ ಎಂದರು.












Click it and Unblock the Notifications