ಹಾಸನಾಂಬೆ ಜಾತ್ರೆಗೆ ತೆರೆ; ಹುಂಡಿ ಕಾಣಿಕೆ ಸಂಗ್ರಹವೆಷ್ಟು?
ಹಾಸನ, ಅಕ್ಟೋಬರ್ 30 : ಹಾಸನಾಂಬೆ ದೇವಿಯ ಜಾತ್ರೆ ಮುಕ್ತಾಯಗೊಂಡಿದ್ದು, ಬುಧವಾರ ದೇವಾಲಯದ ಬಾಗಿಲು ಮುಚ್ಚಲಾಗಿದೆ. ಈ ಬಾರಿ ದೇವಿಯ ದರ್ಶನ ಸಂದರ್ಭದಲ್ಲಿ ಒಟ್ಟಾರೆ 3,06,41,011/- ರೂ ಹಣ ಸಂಗ್ರಹವಾಗಿದೆ.
ಗುರುವಾರ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಹಾಸನಾಂಬ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು. ದೇವಾಲಯದ ಆಡಳಿತಾಧಿಕಾರಿ ಡಾ.ಎಚ್.ಎಲ್. ನಾಗರಾಜ್ ಹುಂಡಿ ಎಣಿಕೆಯ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು.
ಈ ವರ್ಷ ಒಟ್ಟಾರೆ 3,06,41,011 ರೂ. ಹಣ ಸಂಗ್ರಹವಾಗಿದೆ. ವಿವಿಧ ರೀತಿಯ ಟಿಕೆಟ್, ಲಾಡು ಮತ್ತಿತರ ಮಾರಾಟದಿಂದ 1,75,16,587 ರೂ., ಹಾಸನಾಂಬ ದೇವಾಲಯದ ಹುಂಡಿಯಲ್ಲಿ 1,31,24,424 ರೂ. ಹಣ ಸಂಗ್ರವಾಗಿದೆ.

ಹಾಸನಾಂಬ ದೇವರ ದರ್ಶನದ 300 ರೂಪಾಯಿ ಟಿಕೆಟ್ ಮಾರಾಟದಿಂದ 72,28,004 ರೂ. ಹಾಗೂ 1000 ರೂ. ಟಿಕೆಟ್ ಮಾರಾಟದಿಂದ 76,16,000 ರೂ. ಸಂಗ್ರಹವಾಗಿದೆ. ಲಾಡು ಮಾರಾಟದಿಂದ 25, 46, 840 ರೂ. ಸಂಗ್ರಹವಾದರೆ, ದೇಣಿಗೆ ರೂಪದಲ್ಲಿ 32,011 ರೂ. ಹಣ ಬಂದಿದೆ.
ಸೀರೆ ಮಾರಾಟದಿಂದ 93,732 ರೂ. ಸಂಗ್ರಹವಾಗಿದೆ. ಇದಲ್ಲದೇ ಸಿದ್ದೇಶ್ವರ ದೇವಾಲಯದ ಹುಂಡಿಯಲ್ಲಿ 12,18,329 ರೂ. ಸಂಗ್ರಹವಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಹುಂಡಿಯಲ್ಲಿ ಅಧಿಕ ಹಣ ಸಂಗ್ರಹವಾಗಿದೆ. 2018ರಲ್ಲಿ 2.64 ಕೋಟಿ ರೂ. ಸಂಗ್ರಹವಾಗಿತ್ತು. ವರ್ಷಕ್ಕೆ ಒಮ್ಮೆ ಮಾತ್ರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಮುಂದಿನ ವರ್ಷ ನವೆಂಬರ್ 5ರಂದು ದೇವಾಲಯದ ಬಾಗಿಲು ತೆರೆಯಲಾಗುತ್ತದೆ.












Click it and Unblock the Notifications