ಹಾಸನದಲ್ಲಿ ನೂರರ ಗಡಿ ದಾಟಿದ ಕೊರೊನಾ ವೈರಸ್ ಸೋಂಕು
ಹಾಸನ, ಮೇ 25: ಹಾಸನ ಜಿಲ್ಲೆಯಲ್ಲಿ ಇಂದು 13 ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಇದರಿಂದಾಗಿ ಹಾಸನ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 112 ಕ್ಕೇರಿದೆ.
ಕೊರೊನಾ ವೈರಸ್ ಸೋಂಕಿತರಲ್ಲಿ ಕೆಲವರು ಕೊಡುವ ಮಾಹಿತಿ ಬಗ್ಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಸೋಂಕಿತರಲ್ಲಿ ಕೆಲವರು ತಮ್ಮ ಪ್ರಾಥಮಿಕ ಸಂಪರ್ಕದ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅವರನ್ನು ಹಲವು ಬಾರಿ ವಿಚಾರಿಸಿದ ನಂತರ ಒಂದೊಂದಾಗಿ ಮಾಹಿತಿ ನೀಡುತ್ತಾರೆ ಎಂದರು.
ತಾವು ಸರಿಯಾದ ಮಾಹಿತಿ ನೀಡಿದರೆ ಎಲ್ಲಿ ಎಲ್ಲರನ್ನೂ ಕ್ವಾರಂಟೈನ್ ಮಾಡುತ್ತಾರೆ ಎಂಬ ಯೋಚನೆ ಅವರದ್ದು. ಆದರೆ ನಾವು ಕೋವಿಡ್ ಕೇಂದ್ರದಲ್ಲಿ ಎಲ್ಲರಿಗೂ ಉತ್ತಮ ಆಹಾರ ನೀಡುತ್ತಿದ್ದು, ಸೂಕ್ತ ವ್ಯವಸ್ಥೆ ಮಾಡಿದ್ದೇವೆ. ಹೀಗಾಗಿ ಏನನ್ನೂ ಮುಚ್ಚಿಡದೆ ಸರಿಯಾದ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಇಂದು ಹಾಸನದಲ್ಲಿ ಪತ್ತೆಯಾದ 13 ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳೂ ಕೂಡ ಮುಂಬೈ ಟ್ರಾವೆಲ್ ಹಿಸ್ಟರಿ ಹೊಂದಿದ್ದು, ಎಲ್ಲರೂ ಚನ್ನರಾಯಪಟ್ಟಣ ತಾಲ್ಲೂಕಿನವರಾಗಿದ್ದಾರೆಂದು ಡಿಸಿ ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವೈರಸ್ ಸಂಬಂಧ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಈ ಸಂಬಂಧ ಒಂದು ದೂರು ದಾಖಲಾಗಿದೆ ಎಂದು ತಿಳಿಸಿದರು.












Click it and Unblock the Notifications