ದೇಶದಲ್ಲಿ ಅತಿ ಭ್ರಷ್ಟ ಪಕ್ಷ ಎಂದರೆ...; ಅಸ್ಸಾಂನಲ್ಲಿ ಸ್ಮೃತಿ ಇರಾನಿ ವಾಗ್ದಾಳಿ
ಅಸ್ಸಾಂ, ಮಾರ್ಚ್ 13: "ದೇಶದಲ್ಲಿ ಅತಿ ಭ್ರಷ್ಟ ಪಕ್ಷ ಎಂದರೆ ಕಾಂಗ್ರೆಸ್" ಎಂದು ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಸರ್ಕಾರದ ಹಲವು ಯೋಜನೆಗಳ ಕುರಿತು ವಿವರಿಸಿ ಬಿಜೆಪಿಗೆ ಮತ ನೀಡಿ ಎಂದು ಅಸ್ಸಾಂ ಜನರಿಗೆ ಮನವಿ ಮಾಡಿದರು.
ಬಿಜೆಪಿ ಮುಖಂಡ ರಮಣಿ ತಂತಿ ಪರ ಪ್ರಚಾರಕ್ಕೆ ಅಸ್ಸಾಂಗೆ ಆಗಮಿಸಿರುವ ಸ್ಮೃತಿ ಇರಾನಿ ಚುನಾವಣಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಬಿಜೆಪಿಯ ಹಲವು ಯೋಜನೆಗಳ ಕುರಿತು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸರ್ಬಾನಂದ ಸೋನೊವಾಲ ಅಸ್ಸಾಂನ ಬಡ ಜನರ ಏಳಿಗೆಗಾಗಿ ಹಲವು ಯೋಜನೆಗಳನ್ನು ಪರಿಚಯಿಸಿದ್ದಾರೆ. ಈ ಯೋಜನೆಗಳು ಮುಂದುವರೆಯಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.
ಇದೇ ಸಂದರ್ಭ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಕಾಂಗ್ರೆಸ್‌ಗಿಂತ ಭ್ರಷ್ಟ ಪಕ್ಷ ಬೇರೆ ಇಲ್ಲವೇ ಇಲ್ಲ. ಬಡ ಜನರಿಗಾಗಿ ಕೆಲಸ ಮಾಡುತ್ತಿರುವ ಏಕೈಕ ಪಕ್ಷ ಬಿಜೆಪಿ. ರಾಜ್ಯದಲ್ಲಿ ಚಹಾ ಕಾರ್ಮಿಕರ ಕಲ್ಯಾಣಕ್ಕಾಗಿ ಬಿಜೆಪಿ ನಿರಂತರ ಶ್ರಮಿಸಿದೆ" ಎಂದು ಹೇಳಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆಗಳ ಪಟ್ಟಿ ನೀಡಿದ ಸ್ಮೃತಿ ಇರಾನಿ, "ಕಾಂಗ್ರೆಸ್ ಎಂದಿಗೂ ಬಡಜನರಿಗಾಗಿ ಕೆಲಸ ಮಾಡಲಿಲ್ಲ" ಎಂದು ದೂರಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರು ಹೇಳದೇ ಅವರ ಕುರಿತು ಮಾತನಾಡಿದ ಸ್ಮೃತಿ ಇರಾನಿ, "ಅಸ್ಸಾಂನಿಂದ ಕೇಂದ್ರಕ್ಕೆ ಹೋದ ದೊಡ್ಡ ಕಾಂಗ್ರೆಸ್ ಮುಖಂಡರಿದ್ದಾರೆ. ಪ್ರಧಾನಿ ಕೂಡ ಆಗಿದ್ದಾರೆ. ಆದರೆ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿಯೇ ಅಸ್ಸಾಂನಲ್ಲಿ ಏಮ್ಸ್ ಬರಲು ಸಾಧ್ಯವಾಯಿತು" ಎಂದಿದ್ದಾರೆ.
ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27 ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. 126 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಪರಿಶಿಷ್ಟ ಜಾತಿಗೆ ಎಂಟು ಹಾಗೂ ಪರಿಶಿಷ್ಟ ಪಂಗಡಕ್ಕೆ 16 ಸೀಟುಗಳನ್ನು ಮೀಸಲಿರಿಸಲಾಗಿದೆ. ಈ ಬಾರಿ ಅಸ್ಸಾಂನಲ್ಲಿ 33,530 ಮತದಾನ ಕೇಂದ್ರಗಳು ನಿಗದಿಯಾಗಿದ್ದು, ಕಳೆದ ಬಾರಿಗಿಂತ 34.71% ಏರಿಕೆ ಮಾಡಲಾಗಿದೆ.












Click it and Unblock the Notifications