ಅಸ್ಸಾಂನಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ
ಗುವಾಹಟಿ, ಸೆ.22: ತನ್ನ ಸ್ವಂತ ಅಪ್ರಾಪ್ತ ಸಂಬಂಧಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಅಸ್ಸಾಂನ ಧುಬ್ರಿಯ ಸ್ಥಳೀಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಅತುಲ್ ಬಿಸ್ವಾಸ್ ತನ್ನ ಸ್ವಂತ ಸಂಬಂಧಿಯಾಗಿದ್ದ 11 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅಸ್ಸಾಂನಲ್ಲಿ ಆಗಸ್ಟ್ 2021 ರಲ್ಲಿ ಅತ್ಯಾಚಾರ ಎಸಗಿದ್ದನು. ತಮರ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಾಥಪಾರಾದಲ್ಲಿ ಈ ಅತ್ಯಾಚಾರ ಪ್ರಕರಣ ನಡೆದಿತ್ತು.
ಧುಬ್ರಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕಮ್ ವಿಶೇಷ ನ್ಯಾಯಾಧೀಶ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪಿ ಕಟಕಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ಆದೇಶವನ್ನು ಹೊರಡಿಸಿದ್ದಾರೆ.
"ತಿರ್ಪು ಹೊರಡಿಸುವ ಮೊದಲು ಕಾಳಜಿಯೊಂದಿಗೆ ಹೇಳುವುದೆಂದರೇ, ಹೆಣ್ಣು ಮಕ್ಕಳ ಮೇಲಿನ ಎಲ್ಲಾ ರೀತಿಯ ಲೈಂಗಿಕ ದೌರ್ಜನ್ಯಗಳು ಹೆಚ್ಚು ವರದಿಯಾಗದಿದ್ದರೂ ಮತ್ತು ಬೆಳಕಿಗೆ ಬರದಿದ್ದರೂ ಮಕ್ಕಳ ಮೇಲೆ ಎಸಗುವ ಲೈಂಗಿಕ ಅಪರಾಧಗಳ ಆತಂಕಕಾರಿ ಮತ್ತು ಆಘಾತಕಾರಿಯಾಗಿ ಹೆಚ್ಚಳವಿದೆ ಎಂದು ತಿಳಿಯುತ್ತಿದೆ. ಮಕ್ಕಳು ಅತ್ಯಾಚಾರದ ಕೃತ್ಯದ ಬಗ್ಗೆ ಅಜ್ಞಾನ ಮತ್ತು ಪ್ರತಿರೋಧವನ್ನು ನೀಡಲು ಸಾಧ್ಯವಾಗುವುದಿಲ್ಲ. ಹೆಣ್ಣು ಮಕ್ಕಳು ಮತ್ತು ಯುವತಿಯರು ಆಮಿಷವೊಡ್ಡುವ ನಿರ್ಲಜ್ಜ, ಮೋಸದ ಮತ್ತು ಕಪಟ ಕಲೆಯನ್ನು ಪ್ರದರ್ಶಿಸುವ ಕಾಮಪ್ರಚೋದಕ ವಿವೇಚನಾರಹಿತರಿಗೆ ಸುಲಭವಾಗಿ ಬಲಿಯಾಗುತ್ತಾರೆ. ನಾಗರಿಕ ಸಮಾಜಕ್ಕೆ ಅಪಾಯ ಉಂಟುಮಾಡುವ ಇಂಥವರನ್ನು ನಿರ್ದಯವಾಗಿ ಮತ್ತು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕು" ಎಂದು ವಿಶೇಷ ನ್ಯಾಯಾಧೀಶರ (ಪೋಕ್ಸೊ) ಆದೇಶ ಹೇಳುತ್ತದೆ.

ಅದರ ಪ್ರಕಾರ, ಅಪರಾಧಿ ಅತುಲ್ ಬಿಸ್ವಾಸ್‌ಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ತಪ್ಪಿದಲ್ಲಿ ಪೋಕ್ಸೋ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಮತ್ತೊಂದು ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ವಿಶೇಷ ನ್ಯಾಯಾಧೀಶರ (ಪೋಕ್ಸೊ) ಆದೇಶವು ತಿಳಿಸಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉತ್ತಮ್ ಕುಮಾರ್ ಸರ್ಕಾರ್ ಹೇಳುವಂತೆ, ಈ ಪ್ರಕರಣವನ್ನು ಮೊದಲು ತಮರ್ಹಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಯಿತು ಮತ್ತು ನಂತರ ಅದನ್ನು ವಿಶೇಷ ನ್ಯಾಯಾಧೀಶ (ಪೋಕ್ಸೊ) ನ್ಯಾಯಾಲಯದಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376-ಎಬಿ (ಐಪಿಸಿ) ಮತ್ತು POCSOನ ಸೆಕ್ಷನ್ 6 ರ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿದರು.
"ಅತುಲ್ ಬಿಸ್ವಾಸ್ ಅವರು 11 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಗಸ್ಟ್ 31, 2021 ರಂದು ಅತ್ಯಾಚಾರವೆಸಗಿದ್ದರು. ಆರೋಪಿಯು ಸಂತ್ರಸ್ತ ಬಾಲಕಿಯ ಚಿಕ್ಕಪ್ಪನಾಗಿದ್ದಾನೆ. ಸಂತ್ರಸ್ತ ಬಾಲಕಿ ಅಳುತ್ತಿದ್ದಾಗ ಆರೋಪಿಯು 100 ರೂಪಾಯಿ ಮತ್ತು ಚಿಪ್ಸ್ ಪ್ಯಾಕೆಟ್ ಅನ್ನು ನೀಡಿದ್ದಾನೆ. ನಂತರ ಆಕೆ ತನ್ನ ತಾಯಿಗೆ ಘಟನೆಯನ್ನು ವಿವರಿಸಿದಳು. ಸಂತ್ರಸ್ತ ಬಾಲಕಿಯ ತಾಯಿ ಅತುಲ್ ಬಿಸ್ವಾಸ್ ವಿರುದ್ಧ ತಮರ್ಹತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು" ಎಂದು ಉತ್ತಮ್ ಕುಮಾರ್ ಸರ್ಕಾರ್ ಹೇಳಿದ್ದಾರೆ.












Click it and Unblock the Notifications