ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬೇಡಿ: ಪ್ರಧಾನಿಗೆ ಪತ್ರ ಬರೆದ ನಂದಿವೇರಿ ಶಿವಕುಮಾರ ಸ್ವಾಮೀಜಿ
ಕಪ್ಪತ್ತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹೊಂಚು ಹಾಕಿ ಕುಳಿತಿದ್ದು, ಇದಕ್ಕೆ ಅವಕಾಶ ಮಾಡಿಕೊಡದಂತೆ ನರೇಂದ್ರ ಮೋದಿ ಅವರಿಗೆ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿಗಳು ಸುದೀರ್ಘ ಪತ್ರ ಬರೆದಿದ್ದಾರೆ.
ಗದಗ, ಫೆಬ್ರವರಿ, 26: ಅಪಾರ ಆರ್ಯರ್ವೇದಿಕ್ ಗಿಡಮೂಲಿಕೆ ಮತ್ತು ಖನಿಜ ಸಂಪತ್ತು ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹೊಂಚು ಹಾಕಿ ಕುಳಿತಿವೆ. ಇದಕ್ಕೆ ಅವಕಾಶ ಮಾಡಿಕೊಡದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿಗಳು ಸುದೀರ್ಘ ಪತ್ರ ಬರೆದಿದ್ದಾರೆ.
ಅಪಾರ ಸಂಪತ್ತಿನಿಂದ ಕೂಡಿರುವ ಗದಗ ಜಿಲ್ಲೆಯ ಈ ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಹಸಿರು ಸಹ್ಯಾದ್ರಿ ಎಂಬ ಪ್ರಖ್ಯಾತಿ ಪಡೆದಿದೆ. ಭೂಗಳ್ಳರಿಂದ ಕಪ್ಪತ್ತಗುಡ್ಡ ಉಳಿಸುವಂತೆ ಶ್ರೀಗಳು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಕಪ್ಪತ್ತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಈಗಾಗಲೇ ಹೊಂಚು ಹಾಕಿ ಕುಳಿತಿವೆ. ಅರಣ್ಯ ಇಲಾಖೆ ಇವರ ಅರ್ಜಿ ತಿರಸ್ಕರಿಸಿದೆ. ಆದರೂ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವಂತೆ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಬೆನ್ನು ಬಿದ್ದಿದ್ದಾರೆ.

ಶ್ರೀಗಳು ಪತ್ರದಲ್ಲಿ ಉಲ್ಲೇಖಿಸಿರುವುದೇನು?
ಸದ್ಯ ವನ್ಯಜೀವಿ ಧಾಮದ ಕಾನೂನಿನ ಪ್ರಕಾರ ಗುಡ್ಡದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡುವಂತಿಲ್ಲ. ಆದರೆ ಇದನ್ನು ಒಂದು ಕಿಲೋ ಮೀಟರ್ ವ್ಯಾಪ್ತಿಗೆ ಇಳಿಸುವಂತೆ ಭೂಗಳ್ಳರು ಒಳಸಂಚು ರೂಪಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಬಲ್ಡೋಟಾ ಎಂಬ ಕಂಪನಿಯು ಸದ್ಯ ಹೈಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದೆ. ಶತಾಯಗತಾಯ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಈ ಮೂಲಕ ಎಲ್ಲ ಪ್ರಯತ್ನಗಳು ನಡೆಯುತ್ತಲ್ಲಿವೆ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಸಂಪತ್ತು.. ನಮ್ಮ ಹೊಣೆ
ನಮ್ಮ ಸಂಪತ್ತು ನಮ್ಮ ಹೊಣೆ. ಅದನ್ನು ಉಳಿಸಿ, ಬೆಳೆಸಿ, ಬಳಸಬೇಕು. ಪದೇ ಪದೇ ಕಪ್ಪತ್ತಗುಡ್ಡಕ್ಕೆ ಕಂಠಕ ತರುತ್ತಿರುವ ಗಣಿಗಾರಿಕೆ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಹಿಂದೆ ಹಲವು ಮಠಾಧೀಶರು ಮತ್ತು ಪರಿಸರ ಹೋರಾಟಗಾರರಿಂದ ಕಪ್ಪತ್ತಗುಡ್ಡ ರಕ್ಷಣೆ ಮಾಡುವ ಕೆಲಸವಾಗಿದೆ.

ನಮ್ಮ ಸತತ ಹೋರಾಟದ ಫಲವಾಗಿ ಸರ್ಕಾರ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದೆ. ಹಾಗಾಗಿ ಗಣಿಗಾರಿಕೆ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗೆ ಅವಕಾಶ ಮಾಡಿಕೊಡದಂತೆ ತಾವು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications