ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ
ಗದಗ, ಏಪ್ರಿಲ್ 16 : ಗದಗ-ವಾಡಿ ನಡುವಿನ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಇದ್ದ ಅಡೆ-ತಡೆಗಳು ನಿವಾರಣೆಯಾಗಿವೆ. ಮಾರ್ಗ ನಿರ್ಮಾಣಕ್ಕೆ 40 ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಿಗೆ ಸಿಕ್ಕಿದೆ.
Recommended Video
ಏಳು ವರ್ಷಗಳ ಹಿಂದೆ ರೈಲ್ವೆ ಇಲಾಖೆ ಗದಗ-ವಾಡಿ ನಡುವಿನ 257 ಕಿ. ಮೀ. ಮಾರ್ಗ ನಿರ್ಮಾಣದ ಪ್ರಸ್ತಾವನೆ ಮಂಡಿಸಿತ್ತು. ಹಲವಾರು ಅಡೆ-ತಡೆ ದಾಟಿ ನೂತನ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಇದರಿಂದಾಗಿ ಉತ್ತರ ಕರ್ನಾಟಕದ 4 ಜಿಲ್ಲೆಗಳಿಗೆ ಅನುಕೂಲವಾಗಲಿದೆ.
ಬೆಂಗಳೂರಿನಲ್ಲಿ ನಡೆದ ನೈಋತ್ಯ ರೈಲ್ವೆ ವಲಯದ ಸಭೆಯಲ್ಲಿ ಅರಣ್ಯ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ರೈಲ್ವೆ ಅರಣ್ಯ ಭೂಮಿಗೆ ಪರ್ಯಾಯವಾಗಿ ರೈಲು ಮಾರ್ಗ ಸಾಗುವಲ್ಲಿ ಎಲ್ಲೆಲ್ಲೆ ಗಿಡಗಳನ್ನು ನೆಡಬೇಕು ಎಂದು ವರದಿ ಕೇಳಿದೆ.

ಗದಗ-ವಾಡಿ ರೈಲು ಮಾರ್ಗಕ್ಕೆ 1922 ಕೋಟಿ ವೆಚ್ಚವಾಗಲಿದೆ ಎಂದು 2014-15ರಲ್ಲಿ ಅಂದಾಜಿಸಲಾಗಿತ್ತು. ಈ ಮಾರ್ಗ ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳನ್ನು ಸಂಪರ್ಕಿಸಲಿದೆ. ಯಲಬುರ್ಗಾ, ಕುಷ್ಟಗಿ, ಲಿಂಗಸಗೂರು, ಸೊಲ್ಹಾಪುರ ಮೂಲಕ ಈ ಮಾರ್ಗ ಹಾದು ಹೋಗಲಿದೆ.
"ಯೋಜನೆಗೆ ಅರಣ್ಯ ಭೂಮಿ ಸ್ವಾಧೀನವೇ ದೊಡ್ಡ ತೊಡಕಾಗಿತ್ತು. ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿ ಅಡೆ-ತಡೆಗಳನ್ನು ನಿವಾರಣೆ ಮಾಡಿದ್ದಾರೆ" ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ಹೇಳಿದ್ದಾರೆ.
ಗದಗ-ವಾಡಿ ಯೋಜನೆ ಮೊದಲ ಹಂತದಲ್ಲಿ 57 ಕಿ. ಮೀ. ಮಾರ್ಗದ ಕಾಮಗಾರಿ ಕೊಪ್ಪಳದಿಂದ ಆರಂಭವಾಗುತ್ತದೆ. 2ನೇ ಹಂತದಲ್ಲಿ 47 ಕಿ. ಮೀ. ಮಾರ್ಗ ವಾಡಿಯಿಂದ ಆರಂಭವಾಗಲಿದೆ. ಕೆಲವು ಪ್ರದೇಶದಲ್ಲಿ ರೈತರಿಗೆ ಇನ್ನೂ ಪರಿಹಾರವನ್ನು ವಿತರಣೆ ಮಾಡಬೇಕಿದೆ.












Click it and Unblock the Notifications