ಕಿಲ್ಲರ್ ಒಂಟಿ ಸಲಗಕ್ಕೆ ವೃದ್ಧ, 3 ಹಸು ಬಲಿ
ರಾಮನಗರ, ಸೆ.12 : ಮೊನ್ನೆ ತಾನೇ ಮಾಗಡಿಯ ತಾವರೆಕೆರೆ ಬಳಿ ಒಂಟಿ ಸಲಗ ದಾಳಿ ಶಾಲಾಬಾಲಕನೊಬ್ಬನನ್ನು ಬಲಿ ತೆಗೆದುಕೊಂಡಿತ್ತು. ಈ ಘಟನೆ ಇನ್ನೂ ಹಸಿಯಾಗಿರುವಾಗಲೇ, ಅದೇ ರೀತಿಯ ಒಂಟಿ ಸಲಗ ರಾಮನಗರದ ಬಿಡದಿಯ ಇಟ್ಟಮಡು, ದಿಣ್ಣೂರುಪಾಳ್ಯ ಸುತ್ತ ಮತ್ತು ಪ್ರತ್ಯಕ್ಷವಾಗಿ ಓರ್ವ ವಯೋವೃದ್ಧ ಮತ್ತು 3 ಹಸುಗಳನ್ನು ಬುಧವಾರ ಬಲಿತೆಗೆದುಕೊಂಡಿದೆ.
ರಾಮನಗರ ಜಿಲ್ಲೆ ಬಿಡದಿ ಬಳಿಯ ಇಟ್ಟಮಡು, ದಿಣ್ಣೂರು ವ್ಯಾಪ್ತಿಯ ಹಳ್ಳಿ ಜನ ಬೆಳ್ಳಂಬೆಳಿಗ್ಗೆಯೇ ಬೆಚ್ಚಿ ಬಿದ್ದಿದ್ದರು. ಬೆಚ್ಚಿ ಬೀಳುವುದಕ್ಕೂ ಕಾರಣವಿತ್ತು, ತಾವರೆಕೆರೆ ಬಳಿ ವಿದ್ಯಾರ್ಥಿಯನ್ನು ಬಲಿತೆಗೆದುಕೊಂಡಿದ್ದ ಒಂಟಿ ಸಲಗ ಇಟ್ಟಮಡು ಸಮೀಪವೇ ಪ್ರತ್ಯಕ್ಷವಾಗಿತ್ತು. ರಾತ್ರಿ ಹೊತ್ತಿನಲ್ಲಿ ಹಿಂಡು ಹಿಂಡಾಗಿ ಬಂದು ರೈತರ ಬೆಳೆಯನ್ನು ನೆಲಸಮ ಮಾಡಿಹೋಗುತ್ತಿದ್ದ ಗಜಪಡೆಗಳನ್ನು ಹೆಚ್ಚುಮಂದಿ ನೋಡಿರಲಿಲ್ಲ.
ಆದರೆ ಈ ಒಂಟಿ ಸಲಗ ಯಾವ ಭಯವೂ ಇಲ್ಲದೇ ಜನವಸತಿ ಇರುವ ಪ್ರದೇಶದ ಸಮೀಪದಲ್ಲೇ ಕಾಣಿಸಿಕೊಂಡು ಘೀಳಿಡುತ್ತಿತ್ತು. ನೋಡಿದಾಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಿದ್ದಾರೆ, ಆದರೆ ಸಿಬ್ಬಂದಿಗಳು ಸ್ಥಳಕ್ಕೆ ಬರುವುದು ವಿಳಂಬವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಆನೆಯನ್ನ ಓಡಿಸುವ ಪ್ರಯತ್ನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆಕ್ರೋಶಗೊಂಡಿದ ಒಂಟಿ ಸಲಗ ಮಾರುತಿಪುರದ ಚಂದ್ರಪ್ಪನವರ ಹಸುವನ್ನು ಬಲಿತೆಗೆದುಕೊಂಡಿದೆ. ರಾಮನಹಳ್ಳಿಯ ಸಿದ್ದರಾಜು, ಬಿಲ್ಲೆದೊಡ್ಡಿಯ ಶಿವಣ್ಣ ಎಂಬುವವರಿಗೆ ಸೇರಿದ ಹಸುಗಳು ಗಾಯಗೊಂಡಿವೆ. ಇದೇ ಸಂದರ್ಭದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ 60 ವರ್ಷದ ವೆಂಕಟರಮಣಯ್ಯ ಎಂಬುವವರ ಮೇಲೆ ದಾಳಿ ನಡೆಸಿ ಸೊಂಡಿಲಿನಿಂದ ಎಸೆದು ಎರಡೂ ಕಾಲನ್ನ ತುಳಿದು ತನ್ನ ಆಕ್ರೊಶವ್ಯಕ್ತಪಡಿಸಿತ್ತು. ಸಲಗದ ದಾಳಿಯಿಂದ ಗಾಯಗೊಂಡಿದ್ದ ವೆಂಕಟರಮಣಯ್ಯ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.

ಅರಣ್ಯ ಅಧಿಕಾರಿಗಳ ಜಾಣ ಕುರುಡುತನ
ಬೈರಮಂಗಲ, ಇಟ್ಟಮಡು, ದಿಣ್ಣೂರುಪಾಳ್ಯ, ಬೆಣ್ಣೆಹಳ್ಳ ವ್ಯಾಪ್ತಿಯಲ್ಲಿ ಗಜಪಡೆಗಳು ನಿರಂತರವಾಗಿ ದಾಂಗುಡಿ ಇಟ್ಟು ರೈತರ ಬೆಳೆಯನ್ನ ನಾಶಪಡಿಸುತ್ತಲೇ ಇದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತೆ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆಂಬುದು ಸ್ಥಳೀಯರ ಆಕ್ರೋಶದ ಮಾತಾಗಿದೆ.

ಕಾಡು ಬಿಟ್ಟು ನಾಡಿಗೆ ಆನೆ ಬರುತ್ತಿರುವುದೇಕೆ?
ಬೆಣ್ಣೆಹಳ್ಳಿ ವ್ಯಾಪ್ತಿಯಲ್ಲಿ ಕ್ರಷರ್‌ಗಳು ಹೆಚ್ಚಾಗಿರುವುದರಿಂದ ಬಂಡೆ ಸಿಡಿಸಲು ಸ್ಪೋಟಕಗಳನ್ನು ಸಿಡಿಸುತ್ತಿರುವುದರಿಂದ ಆನೆಗಳು ಕಾಡು ಬಿಟ್ಟು ನಾಡಿನೆಡೆಗೆ ಬಂದು ದಾಳಿ ಇಡುತ್ತಿವೆ. ಇದರಿಂದ ಹಳ್ಳಿಗಳಲ್ಲಿರುವ ಮಂದಿ ಸದಾ ಭಯದ ನೆರಳಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂಪಾಯಿ ಬೆಳೆಯನ್ನು ಕೂಡ ಆನೆಹಿಂಡು ನಾಶ ಮಾಡಿದೆ.

ಸುತ್ತಲೂ ಹೇರಳವಾದ ಅರಣ್ಯ ಪ್ರದೇಶ
ಕನಕಪುರದಲ್ಲಿ ಮೇಕೆದಾಟು, ಸಾತನೂರು ಅರಣ್ಯಪ್ರದೇಶ, ಚನ್ನಪಟ್ಟಣದಲ್ಲೂ ಮಾಕಳಿ ಅರಣ್ಯ ಪ್ರದೇಶ, ಮಾಗಡಿಯಲ್ಲಿ ಸಾವನದುರ್ಗ, ತಗಚಗುಪ್ಪೆ, ಮಂಚನಬೆಲೆ ವ್ಯಾಪ್ತಿಯಲ್ಲಿ ಹೇರಳವಾದ ಅರಣ್ಯ ಪ್ರದೇಶವಿರುವುದರಿಂದ ಗಜಪಡೆಗಳ ಹಾವಳಿ ವಿಪರೀತವಾಗಿದೆ.

ಕೈಗೆ ಬಂದ ಫಸಲು ಮಣ್ಣುಪಾಲಾಗುತ್ತಿದೆ
ಕಾಡಿನಲ್ಲಿ ಸೊಂಪಾಗಿ ಬೆಳೆಯುವ ಹಸಿರು ಬಿದಿರುನ್ನು ಮೇಯಲು ಗಜಪಡೆಗಳು ಆಗಮಿಸುತ್ತಿರುತ್ತವೆ. ರಾತ್ರಿ ಸಮಯದಲ್ಲಿ ರೈತರು ಬೆಳೆದ ಬೆಳೆಗಳನ್ನು ತಿನ್ನಲು ಬಂದು ನೆಲಸಮ ಮಾಡುತ್ತಿರುವುದರಿಂದ ರೈತರ ಕೈಗೆ ಬಂದ ಫಸಲು ಮಣ್ಣುಪಾಲಾಗುತ್ತಿದೆ.

ಮತ್ತೆ ನಡೆಯುತ್ತಾ ಆಪರೇಷನ್ ಪುಂಡಾನೆ?
2 ವರ್ಷಗಳ ಹಿಂದೆ ಇದೇ ರೀತಿ ಪುಂಡಾನೆಯೊಂದು ಹಳ್ಳಿಮಂದಿಗೆ ಭೀತಿಯುನ್ನುಂಟು ಮಾಡಿತ್ತು. ಆ ಸಂದರ್ಭದಲ್ಲಿ ಅಂದಿನ ಡಿ.ಎಫ್.ಓ ಆಗಿದ್ದ ಗೀತಾಂಜಲಿಯವರ ನೇತೃತ್ವದಲ್ಲಿ 'ಆಪರೇಷನ್ ಪುಂಡಾನೆ' ಕಾರ್ಯಾಚರಣೆಯನ್ನು ಸುಮಾರು 6 ದಿನಗಳ ಕಾಲ ನಡೆಸಿ ನಂತರ ಪುಂಡಾನೆಯನ್ನು ಸೆರೆಹಿಡಿದು ಬಂಡೀಪುರ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಆ ಸಂಧರ್ಭದಲ್ಲಿ ದಸರಾ ಆನೆಗಳಾದ ಅರ್ಜುನ್, ಅಭಿಮನ್ಯು ಸೇರಿದಂತೆ ನಾಲ್ಕು ಆನೆಗಳನ್ನ ಆಪರೇಷನ್ ಪುಂಡಾನೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.

ಇದೇನಾ ಅದೇ ಕಿಲ್ಲರ್ ಒಂಟಿ ಸಲಗ?
ಈಗ ತಾವರೆಕರೆಯಲ್ಲಿ ಬಾಲಕನನ್ನ ಬಲಿ ತೆಗೆದುಕೊಂಡ ಕಿಲ್ಲರ್ ಒಂಟಿ ಸಲಗವೇ ಬಿಡದಿ ಬಳಿ ಪ್ರತ್ಯಕ್ಷವಾಗಿದೆ ಎಂಬ ಅನುಮಾನ ಅರಣ್ಯ ಇಲಾಖೆ ಅಧಿಕಾರಿಗಳಿಗಿದೆ. ಆದ್ದರಿಂದ ಆಪರೇಷನ್ ಕಿಲ್ಲರ್ ಒಂಟಿ ಸಲಗ ಕಾರ್ಯಾಚರಣೆ ನಡೆಸಲು ರಾಮನಗರ ಜಿಲ್ಲಾ ಅರಣ್ಯ ಇಲಾಖೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ.

ಆಪರೇಷನ್ ಕಿಲ್ಲರ್ ಒಂಟಿ ಸಲಗ
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು 'ಆಪರೇಷನ್ ಕಿಲ್ಲರ್ ಒಂಟಿ ಸಲಗ' ಕಾರ್ಯಾಚರಣೆ ನಡೆಸಲು ಅನುಮತಿ ನೀಡುತ್ತಾರೆಯೇ ಇಲ್ಲವೇ ಎಂಬುದು ಗೊತ್ತಿಲ್ಲ. ಆದರೆ ಒಂದು ಮೂಲದ ಪ್ರಕಾರ, ಮತ್ತೆ ಮತ್ತೆ ಇದೇ ರೀತಿಯ ದಾಳಿ ನಡೆಯುವ ಮುನ್ನ ಪಳಗಿರುವ ಆನೆಗಳ ಮೂಲಕ 'ಆಪರೇಷನ್ ಕಿಲ್ಲರ್ ಒಂಟಿ ಸಲಗ' ಕಾರ್ಯಾಚರಣೆ ನಡೆಸಲು ಹಿರಿಯ ಅಧಿಕಾರಿಗಳು ಸಮ್ಮತಿ ಸೂಚಿಸಬಹುದು ಎನ್ನಲಾಗಿದೆ.

ಎಚ್ಚರದಿಂದಿರುವಂತೆ ಅರಣ್ಯ ಇಲಾಖೆ ಸೂಚನೆ
ಆದರೆ ಈಗ ದಸರಾ ಹಬ್ಬ ಹತ್ತಿರವಾಗಿರುವುದರಿಂದ ದಸರಾ ಮುಗಿದ ನಂತರ ಪಳಗಿರುವ ಆನೆಗಳನ್ನು ಬಳಸಿಕೊಳ್ಳಬಹುದೆಂಬ ಚಿಂತನೆ ನಡೆದಿದೆ. ಆದರೆ ಅಷ್ಡರಲ್ಲಿ ರಾಮನಗರ ಜಿಲ್ಲೆ ಬಿಟ್ಟು ಬೇರೆಡೆ ಆನೆ ಹೋದರೆ ಕಾರ್ಯಾಚರಣೆ ಬಿಡಬಹುದು. ಆದರೆ ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಸುಮಾರು 8 ಆನೆಗಳಿರುವ ಹಿಂಡು ಇರುವುದರಿಂದ ಈ ವ್ಯಾಪ್ತಿಯ ಮಂದಿ ಎಚ್ಚರದಿಂದಿರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.











Click it and Unblock the Notifications