ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ?
ಧಾರವಾಡ, ಡಿಸೆಂಬರ್ 01: ಭಾರತೀಯ ಜನತಾ ಪಕ್ಷವು ಉಪ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದರೆ ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರಾ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸವಾಲ್ ಹಾಕಿದ್ದಾರೆ.
ಭಾನುವಾರ ಹುಬ್ಬಳ್ಳಿ ನಗರದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಸಿದ್ದರಾಮಯ್ಯ ಅವರು ಈವರೆಗೆ ನೀಡಿದ ಹೇಳಿಕೆಗಳೆಲ್ಲ ಸುಳ್ಳಾಗಿವೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 7 ರಿಂದ 8 ಸ್ಥಾನಗಳು ಬರಲಿವೆ ಎಂದು ಹೇಳಿದ್ದರು, ಆದರೆ ನಾವು ೨೫ ಸ್ಥಾನ ಗೆದ್ದೇವು ಎಂದು ಹೇಳಿದರು.
ಅವರಪ್ಪನಾಣೆ ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಲ್ಲ ಎಂದು ಹೇಳಿದ್ದರು. ಆದರೆ ಇಬ್ಬರೂ ಮುಖ್ಯಮಂತ್ರಿಗಳಾದರು. ನರೇಂದ್ರ ಮೋದಿ ಪ್ರಧಾನಿಯಾಗಲ್ಲ ಎಂದಿದ್ದರು, ಆವರೂ ಪ್ರಧಾನಿಯಾದರು ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಯಾವಗಲೂ ಭ್ರಮೆಯಲ್ಲಿರುತ್ತಾರೆ, ಅವರು ಹೇಳೋದೆಲ್ಲವೂ ಸುಳ್ಳುಗಳು ಎಂದರು. ಬಿಜೆಪಿ ಪಕ್ಷ ಎಲ್ಲ ಹದಿನೈದು ಕ್ಷೇತ್ರಗಳಲ್ಲಿಯೂ ಜಯಭೇರಿ ಬಾರಿಸಲಿದೆ. ಆ ಬಳಿಕ ಅವರು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಿದ್ದಾರಾ ಎಂದು ಪ್ರಶ್ನಿಸಿದರು.
ಪ್ರಚಾರಕ್ಕೆ ಹೋದಲೆಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ನವರಿಗೆ ಸೋಲಿನ ಭೀತ ಎದುರಾಗಿದೆ, ಹಾಗಾಗಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ, ಬಿಎಸ್ವೈ ರಾಜೀನಾಮೆ ನೀಡಲಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಡಿಸೆಂಬರ್ 9 ರಂದು ಫಲಿತಾಂಶ ಬಂದ ಬಳಿಕ ಎಲ್ಲ ಸತ್ಯವೂ ತಿಳಿಯಲಿದೆ, ಆಗ ಅವರಿಗೆ ಭ್ರಮನಿರಸನವಾಗುವುದು ಖಚಿತವೆಂದರು. ಸುಳ್ಳು ಹೇಳಿ ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ನೋಡುತ್ತಿದ್ದಾರೆ ಅದು ನಡೆಯುವುದಿಲ್ಲ ಎಂದು ಹೇಳಿದರು.
ಕುಮಾರಸ್ವಮಿ ಮತ್ತು ಸಿದ್ದರಾಮಯ್ಯರ ತಿಕ್ಕಾಟ ನೋಡಲಾಗದೇ 17 ಶಾಸಕರು ರಾಜೀನಾಮೆ ನೀಡಿದರು. ಈಗ ಮತ್ತೆ ಮೈತ್ರಿಯ ನಗ್ಗೆ ಮಾತನಾಡುತ್ತಿದ್ದಾರೆ, ಅದು ಆಗದ ಕೆಲಸ ಎಂದು ಮೈತ್ರಿ ಬಗ್ಗೆ ಟೀಕಿಸಿದರು.
ಯಡಿಯೂರಪ್ಪ ಸರ್ಕಾರ ಸುಭದ್ರವಾಗಿದ್ದು, ಉಳಿದ ಅವಧಿಯನ್ನು ಯಾವುದೇ ಆತಂಕವಲ್ಲದೇ ಪೂರ್ಣಗೊಳಿಸಲಿದೆ, ಅಲ್ಲದೇ ಇತರ ಪಕ್ಷಗಳಿಂದ ಮತ್ತಷ್ಟು ಶಾಸಕರು ಬಿಜೆಪಿಗೆ ಬರಲಿದೆ ಎಂದು ವಿಪಕ್ಷಗಳಿಗೆ ಶಾಕ್ ಕೊಟ್ಟರು.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 05 ರಂದು ಉಪ ಚುನಾವಣೆಯ ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications