ಭಾರೀ ಮಳೆಯಿಂದ ನೀರ ಸಾಗರ ಜಲಾಶಯಕ್ಕೆ ಜೀವಕಳೆ: ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ
ಹುಬ್ಬಳ್ಳಿ, ಜುಲೈ 31: ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ನದಿ, ಹಳ್ಳ-ಕೊಳ್ಳ, ಕೆರೆಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಜೊತೆಗೆ ಮಳೆಗಾಲದ ಪ್ರವಾಸ ಕೂಡ ಆರಂಭವಾಗಿದ್ದು, ಜಲಪಾತ ಹಾಗೂ ಜಲಾಶಯಗಳನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ.
ಧಾರಾವಾಡ ಜಿಲ್ಲೆಯಲ್ಲಿ ನಿರಂತರ ಮಳೆ ಪರಿಣಾಮವಾಗಿ ಕಲಘಟಗಿ ತಾಲೂಕಿನ ನೀರ ಸಾಗರ ಬೇಡ್ತಿ ಹಳ್ಳಕ್ಕೆ ನಿರ್ಮಿಸಲಾಗಿರುವ ಜಲಾಶಯ ಪ್ರತಿ ಬಾರಿ ಮಳೆಗಾಲದಲ್ಲಿ ಜೀವ ಪಡೆಯುವ ರೀತಿಯಲ್ಲಿ ನೀರ ಸಾಗರ ತುಂಬಿ ಹರಿಯುತ್ತಿದೆ. ನೀರ ಸಾಗರ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಅಪಾಯವನ್ನೂ ಲೆಕ್ಕಿಸದೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ.

ಜಲಾಶಯದ ಮೇಲೆ ನೀರು ಹರಿಯುತ್ತಿದ್ದರೂ ಯುವ ಸಮುದಾಯದ ಹುಚ್ಚಾಟ ನಡೆಸುತ್ತಿದ್ದಾರೆ. ಜಲಾಶಯ ಕೋಡಿ ಮೇಲೆ ನೀರಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನೀರಿನ ಮಧ್ಯ ನಡುಗಡ್ಡೆಯಂತಿರುವ ಪ್ರದೇಶದಲ್ಲಿ ನಿಂತು ಕೆಲವರ ಹುಚ್ಚಾಟ ನಡೆಸಿದ್ದು, ನೀರ ಸಾಗರ ಜಲಾಶಯದ ಬಳಿ ಹೇಳುವವರು, ಕೇಳುವವರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರ ಸಾಗರ ಸ್ವಲ್ಪ ಕೆಳಗೆ ಜಲಪಾತದ ಸ್ವರೂಪ ಪಡೆಯುತ್ತದೆ. ಜನರ ದಂಡು ತಂಡೋಪಾದಿಯಲ್ಲಿ ಆಗಮಿಸಿ ಜಲಾಶಯ ಮತ್ತು ಜಲಪಾತದ ವೀಕ್ಷಣೆ ಮಾಡುತ್ತಿದ್ದಾರೆ. ಅಲ್ಲದೇ ಹರಿಯುವ ನೀರ ಮಧ್ಯೆ ನಿಂತು ಜನರು ಹುಚ್ಚಾಟ ನಡೆಸುತ್ತಿದ್ದಾರೆ. ಕಳೆದ ವರ್ಷ ಇದೇ ಜಲಪಾತದ ಬಳಿ ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದ ಘಟನೆ ನಡೆದಿತ್ತು. ಆದರೂ ಎಚ್ಚೆತ್ತುಕೊಳ್ಳದ ಜನತೆ, 1.02 ಟಿಎಂಸಿ ಸಾಮರ್ಥ್ಯದ ನೀರ ಸಾಗರದಲ್ಲಿ ಹುಚ್ಚಾಟ ಮುಂದುವರೆಸಿದ್ದಾರೆ.

ಇನ್ನು 1955 ರಿಂದಲೂ ಹುಬ್ಬಳ್ಳಿ ನಗರಕ್ಕೆ ನೀರು ಪೂರೈಸುತ್ತಿರುವ ನೀರ ಸಾಗರ, ಈಗಲೂ ಹುಬ್ಬಳ್ಳಿಯ ಶೇ. 25ರಷ್ಟು ಭಾಗಕ್ಕೆ ಕುಡಿಯುವ ನೀರು ಪೂರೈಸುತ್ತದೆ. ಜಲ ಜಲಧಾರೆಯಾಗುವ ಜಲಾಶಯ ಕಣ್ತುಂಬಿಕೊಳ್ಳಲು ಧಾರವಾಡ ಜೊತೆ ನೆರೆ ಜಿಲ್ಲೆಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಕೆಲವರ ಹುಚ್ಚಾಟದಿಂದ ನೀರ ಸಾಗರದ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೇ ನೀರ ಸಾಗರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications