6 ಕ್ಷೇತ್ರಗಳಿಂದ ಲೋಕಸಭೆಗೆ ಶ್ರೀರಾಮಸೇನೆ ಸ್ಪರ್ಧೆ
ಧಾರವಾಡ, ಫೆ.7 : ಈ ಬಾರಿಯ ಲೋಕಸಭೆ ಚುನಾವಣೆಗೆ ಶ್ರೀರಾಮ ಸೇನೆ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಆರು ಕ್ಷೇತ್ರಗಳಲ್ಲಿ ಸೇನೆಯ ಅಭ್ಯರ್ಥಿಗಳು ಏಕಾಂಗಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಮುತಾಲಿಕ್ ತಿಳಿಸಿದ್ದಾರೆ.
ಧಾರವಾಡದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಟಿಕೆಟ್ ಸಿಗುವ ಬಗ್ಗೆ ಯಾವುದೇ ಭರವಸೆ ದೊರಕಿಲ್ಲ. ಆದ್ದರಿಂದ ಸೇನೆಯ ಅಭ್ಯರ್ಥಿಗಳು ಸ್ವತಂತ್ರ್ಯವಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು. [ಮುತಾಲಿಕ್-ಜೋಶಿ ಹಣಾಹಣಿ]

ಚಿಕ್ಕಮಗಳೂರು, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಬಾಗಲಕೋಟೆ ಮತ್ತು ಹಾವೇರಿ ಕ್ಷೇತ್ರಗಳಲ್ಲಿ ಸೇನೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ, ಒಟ್ಟು ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಮುತಾಲಿಕ್ ತಿಳಿಸಿದರು. ಸೇನೆಯ ಅಭ್ಯರ್ಥಿಗಳು ಗೆಲವು ಸಾಧಿಸಿದರೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು. [ಜೋಶಿ ವಿರುದ್ಧ ಸ್ಪರ್ಧಿಸದಂತೆ ಮುತಾಲಿಕ್ ಗೆ ಬೆದರಿಕೆ]
ಧಾರವಾಡ ಕ್ಷೇತ್ರದಿಂದ ಪ್ರಮೋದ್ ಮುತಾಲಿಕ್ ಸ್ಪರ್ಧಿಸುವ ಸಾಧ್ಯತೆ ಇದೆ. ಕೆಲವು ದಿನಗಳ ಹಿಂದೆ ಧಾರವಾಡದ ಹಾಲಿ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸದಂತೆ ಮುತಾಲಿಕ್ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಈ ಕುರಿತು ಅವರು, ಪೊಲೀಸ್ ಠಾಣೆಗೆ ದೂರು ನೀಡಿದ್ದರು. [ಬಿಜೆಪಿ ಸಂಭಾವ್ಯ ಪಟ್ಟಿ]












Click it and Unblock the Notifications