ಧಾರವಾಡ: ಸ್ವಚ್ಛತೆಯಲ್ಲಿ ನೈಋತ್ಯ ರೈಲ್ವೆ ವಲಯಕ್ಕೆ ಮೊದಲ ಸ್ಥಾನ
ಧಾರವಾಡ, ನವೆಂಬರ್ 20: ನೈರುತ್ಯ ರೈಲ್ವೆ ವಲಯ ಸಾಧನೆಗಳ ಮೇಲೆ ಸಾಧನೆ ಮಾಡಿ ಎಲ್ಲರಿಂದ ಮೆಚ್ಚುಗೆ ಗಳಿಸುತ್ತಲೇ ಇದೆ. ಈಗ ಇನ್ನೊಂದು ಸಾಧನೆ ಪಟ್ಟಿಗೆ ನೈರುತ್ಯ ರೈಲ್ವೆ ವಲಯ ತನ್ನ ಹೆಸರನ್ನು ಸೇರ್ಪಡೆ ಮಾಡಿದ್ದು, ಇಡೀ ರೈಲ್ವೆ ಇತಿಹಾಸದಲ್ಲಿಯೇ ಮರೆಯಲಾಗದ ಸಾಧನೆಗೈದಿದೆ.
ವಿಶ್ವದಲ್ಲೇ ಅತೀ ಉದ್ದವಾದ ಪ್ಲಾಟ್ ಫಾರ್ಮ್ ಹೊಂದಿದ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ, ನೈರುತ್ಯ ರೈಲ್ವೆ ನಿಲ್ದಾಣ ಈಗ ಮತ್ತೊಂದು ಪ್ರಶಸ್ತಿ ಪಡೆದಿದ್ದು, ಸ್ವಚ್ಛತಾ ಪಾಡಾ 2023ರಲ್ಲಿ ನೈಋತ್ಯ ರೈಲ್ವೆ ಮೊದಲ ಸ್ಥಾನ ಪಡೆದುಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ನಿಮಯಗಳನ್ನು ವಿಧಿಸಿ ಏನು ಬೇಕಾದರೂ ಮಾಡಬಹುದು. ಆದರೆ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಕಷ್ಟ. ಅದರಲ್ಲೂ ರೈಲಿನಲ್ಲಿ, ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡುವುದು ದೊಡ್ಡ ಸವಾಲೇ ಸರಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಸಂಘ ಸಂಸ್ಥೆಗಳು, ಪರಿಸರ ಕಾಪಾಡಿಕೊಳ್ಳಲು ಸ್ವಚ್ಛತೆ ಜಾಗೃತಿ ಜೊತೆಗೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡಿದರು ಪರಿಣಾಮವಾಗಿ ಜಾರಿಗೆ ಬರಲ್ಲ. ಆದರೆ ಸ್ವಚ್ಛತೆಯನ್ನು ಅಚ್ಚು ಕಟ್ಟಾಗಿ ಕಾಪಾಡಿಕೊಂಡು ಬರುವಲ್ಲಿ ಬಂದ ನೈರುತ್ಯ ರೈಲ್ವೆ ಯಶಸ್ವಿಯಾಗಿದೆ.
ಸ್ವಚ್ಛತಾ ಪಾಡಾ 2023ರಲ್ಲಿ ನೈಋತ್ಯ ರೈಲ್ವೆ ಮೊದಲ ಸ್ಥಾನ ಪಡೆದುಕೊಂಡರೆ, ಈಶ್ಯಾನ ಹಾಗೂ ದಕ್ಷಿಣ ಸೆಂಟ್ರಲ್ ರೈಲ್ವೆಗಳು ಎರಡು ಹಾಗೂ ಮೂರನೇ ಸ್ಥಾನ ಗಳಿಸಿವೆ. ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸ್ವಚ್ಛತಾ ಪಾಡಾ 2023 ಅಭಿಯಾನ ಆರಂಭವಾಗಿತ್ತು.
ಈ ಅಭಿಯಾನದಲ್ಲಿ ರೈಲ್ವೆ ಇಲಾಖೆಯ ರೈಲ್ವೆ ನಿಲ್ದಾಣ , ರೈಲ್ವೆ ಹಳಿಗಳು , ಕಚೇರಿಗಳು ಸ್ವಚ್ಛವಾಗಿಡುವುದು, ಪ್ರಯಾಣಿಕರ ಹಾಗೂ ರೈಲ್ವೆ ಸಿಬ್ಬಂದಿಯನ್ನು ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ದಿನನಿತ್ಯದ ವರದಿಗಳ ಮೌಲ್ಯಮಾಪನದ ಆಧಾರದ ಮೇಲೆ ನೈಋತ್ಯ ರೈಲ್ವೆಯು ಎಲ್ಲಾ ವಲಯ ರೈಲ್ವೆ ಗಳಲ್ಲಿ ಅತ್ಯುತ್ತಮವೆಂದು ಗುರುತಿಸಲ್ಪಟ್ಟಿದೆ.

ಸೆಪ್ಟೆಂಬರ್ 16 ,2023 ರಂದು ಬೆಂಗಳೂರಿನ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಸ್ವಚ್ಛತಾ ಪಾಡಾ 2023 ಗೆ ಚಾಲನೆ ನೀಡಿದ್ದರು. ರೈಲ್ವೆ ನಿಲ್ದಾಣಗಳು ಮತ್ತು ಇತರ ಆವರಣಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಹೆಚ್ಚಿಸಲು ಸಕ್ರಿಯವಾಗಿ ಭಾಗವಹಿಸಿದವು. ನೈಋತ್ಯ ರೈಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು 915 ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಅಭಿಯಾನದಲ್ಲಿ 23,744 ಜನರು ಭಾಗವಹಿಸಿದ್ದು, ಬರೋಬ್ಬರಿ 5.27 ಕೋಟಿ ಚ.ಕಿ ಪ್ರದೇಶ ಸ್ವಚ್ಛಗೊಳಿಸಿದ್ದಾರೆ. ಈ ಸ್ವಚ್ಛತಾ ಅಭಿಯಾನದಲ್ಲಿ 252 ಮರಗಳ ನೆಟ್ಟು , 17 ಟನ್ ಪ್ಲಾಸ್ಟಿಕ್ ತೆಗೆಯಲಾಗಿದೆ, 22 ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಸ್ವಚ್ಛತೆ ಕುರಿತು ರೈಲ್ವೆ ನಿಲ್ದಾಣಗಳಲ್ಲಿ ನಾಟಕ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಮಾಹಿತಿ ನೀಡಿದರು.
ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಪ್ರಯಾಣಿಕರಿಗೆ ಬಿತ್ತಿ ಪತ್ರ ಹಾಗೂ ಕರ ಪತ್ರ ಹಂಚಲಾಗಿದೆ. ನೈಋತ್ಯ ರೈಲ್ವೆ ಈ ಸಾಧನೆಗೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಭಾಗವಹಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದು, ಸ್ವಚ್ಛತಾ ಪಾಡಾ 2023 ಮೊದಲ ಸ್ಥಾನ ಪಡೆದ ನೈಋತ್ಯ ರೈಲ್ವೆ ವಲಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications