ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು: ಆತಂಕ ವ್ಯಕ್ತಪಡಿಸಿದ ಸಲೀಂ ಅಹಮದ್
ಧಾರವಾಡ, ಅಕ್ಟೋಬರ್ 11: ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ. ಅಕ್ಟೋಬರ್ 16ರಿಂದ ಅ.31ರವರೆಗೆ ನೀರು ಹರಿಸುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡ ಸಲೀಂ ಅಹಮದ್ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬರಗಾಲದಿಂದ ತತ್ತರಿಸಿ ಹೋಗಿದ್ದು, ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ ವಿಚಾರ ಬಹಳ ಇದು ನಮಗೆ ಆಘಾತ ತಂದಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಾಗೂವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಕಳವಳ ವ್ಯಕ್ತಪಡಿಸಿದರು.

ಧಾರವಾಡದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತ್ತೆ ನೀರು ಹರಿಸುವ ಆದೇಶ ನಾವು ನೀರಿಕ್ಷೆ ಮಾಡಿರಲಿಲ್ಲ ಆದರೆ ಈಗ ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಈಗ ಮಾಹಿತಿ ಸಿಕ್ಕಿದೆ. ಇದು ನಮಗೆ ಆಘಾತ ಹಾಗೂ ನೋವು ತಂದಿದೆ. ನಮ್ಮಲ್ಲಿ ನೀರಿಲ್ಲ. ಈ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಸರ್ಕಾರ ಮಾಡಿತ್ತು. ಆದರೂ ಸಹ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸುತ್ತಾರೆ ಎಂದರು.
ಈ ವಿಷಯದಲ್ಲಿ ಪ್ರಧಾನ ಮಂತ್ರಿ ಅವರು ಯಾಕೆ ಮಧ್ಯ ಪ್ರವೇಶಿಸುತ್ತಿಲ್ಲ, ಕೇಂದ್ರ ಸಚಿವರುಗಳು ಯಾಕೆ ಮಧ್ಯಸ್ಥಿಕೆ ವಹಿಸುತ್ತಿಲ್ಲ. ನಮ್ಮ ಲೋಕಸಭಾ ಸದಸ್ಯರು ಏನು ಮಾಡುತ್ತಿದ್ದಾರೆ? ಅವರ ಮೇಲೆಯೂ ಜವಾಬ್ದಾರಿ ಇದೆ ಅಲ್ವಾ? ಈಗ ರಾಜ್ಯದಲ್ಲಿಕಾಂಗ್ರೆಸ್ ಸರ್ಕಾರ ಬಂದಿದೆಯಂದು ದೂರ ಹೋಗುವುದು ಸರಿಯಲ್ಲ ಎಂದು ಹೇಳಿದರು.
ಈಗಾಗಲೇ ನಿಯೋಗದಲ್ಲಿ ಹೋಗಲು ಸಮಯ ಕೇಳಿದ್ದೇವು. ಇದಕ್ಕೋ ಸಹಮತ ವ್ಯಕ್ತಪಡಿಸಿಲ್ಲ. ಇನ್ನು ಸರ್ವ ಪಕ್ಷಗಳ ಸಭೆಗೂ ಸಮಯ ಕೇಳಿದ್ದೇವು, ಇಲ್ಲಿಯವರೆಗೂ ಸಮಯ ಕೊಟ್ಟಿಲ್ಲ.ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಅಲ್ವಾ? ನಮ್ಮ ಕೇಂದ್ರ ಮಂತ್ರಿಗಳು, ಎಂಪಿ ಗಳು ರಾಜಕಾರಣ ಮಾಡುತ್ತಿಲ್ಲವಾ? ಪಕ್ಷಾತೀತವಾಗಿ ಇದರಲ್ಲಿ ಹೋರಾಟ ಮಾಡಬೇಕಿದೆ ಕೂಡಲೇ ಪ್ರಧಾನಿಗಳು ರಾಜ್ಯಗಳ ಸಿಎಂಗಳನ್ನು ಕರೆಯಬೇಕು. ಸಮಸ್ಯೆಗೆ ಇತ್ಯರ್ಥ ಕೊಡಬೇಕು ರಾಜ್ಯಕ್ಕೆ ಅನ್ಯಾಯವಾಗದಂತೆ ಎಂಪಿಗಳು ಹೋರಾಟ ಮಾಡಬೇಕು ಎಂದರು.

ನಮ್ಮಲ್ಲಿಯೇ ನೀರಿಲ್ಲ ತಮಿಳುನಾಡಿಗೆ ಎಲ್ಲಿಂದ ಬಿಡಬೇಕು- ಶಾಸಕ ಕೋನರೆಡ್ಡಿ
ಧಾರವಾಡ : ಬರಗಾಲದಿಂದ ಕರ್ನಾಟಕದ ಜಲಾಶಯ ಬರಿದಾಗಿದ್ದು, ನಮ್ಮಲ್ಲಿಯೇ ನೀರು ಇಲ್ಲ. ಇನ್ನೂ ತಮಿಳುನಾಡಿಗೆ ಎಲ್ಲಿಂದ ನೀರು ಬಿಡಬೇಕು ಎಂದು ನವಲಗುಂದ ಶಾಸಕ ಎನ್.ಎಚ್ ಕೋನರೆಡ್ಡಿ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದವರು ತಾಯಿ ಹೃದಯ ಇದ್ದವರು ಯಾವಾಗ ಹೇಳ್ತಾರೋ ಆವಾಗ ನೀರು ಬಿಡಲಾಗಿದೆ. ಈಗ ಕಾವೇರಿ ತೀರದಲ್ಲಿ ನೀರು ಇಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾವೇರಿ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿ. ಈ ಸಮಸ್ಯೆ ನಿವಾರಣೆಗೆ ಮುಂದಾಗಲಿ ಎಂದು ಆಗ್ರಹಿಸಿದರು.
ಕಾವೇರಿ ನೀರು ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಬಿಡಬಾರದು. ಮಹಾದಾಯಿ ಕಳಸಾ ಬಂಡೂರಿ ನೀರಿಲ್ಲದೇ ಕರ್ನಾಟಕ ಜನರು ಪರದಾಡುವ ಸ್ಥಿತಿ ಇದೆ. ಮಾನ್ಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಕಾವೇರಿ ವಿಚಾರದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಕರ್ನಾಟಕದವರು ಬರಿ ನೀರು ಕೊಡಲು ಇರುವಂತಾಗಿದ್ದು, ಮಹಾದಾಯಿ ಕಳಸಾ ಬಂಡೂರಿ ಯೋಜನೆ ಇಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುತ್ತಿಲ್ಲ, ನಾವು ಮೊದಲು ಬದುಕಬೇಕು ಆಗ ಇನ್ನೊಬ್ಬರಿಗೆ ಸಹಾಯ ಮಾಡಬಹುದು ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿರುವುದು ಖಂಡನೀಯ ಎಂದು ತಿಳಿಸಿದರು.












Click it and Unblock the Notifications