Hubballi-Dharwad Rain: ಅವಳಿನಗರದಲ್ಲಿ ಮಲೆನಾಡಿನ ವಾತಾವರಣ, ಜುಲೈ 26ರವರೆಗೆ ಮಳೆ ಮುನ್ಸೂಚನೆ
ಧಾರವಾಡ, ಜುಲೈ 18: ಮುಂಗಾರು ಮಳೆ ರಾಜ್ಯದ ಬಹುತೇಕ ಕಡೆಗಳಲ್ಲಿ ಅಬ್ಬರಿಸುತ್ತಿದೆ. ಮೊದಲು ಮಲೆನಾಡು, ಕರಾವಳಿಗೆ ಸೀಮಿತವಾಗಿದ್ದ ಮಳೆ ಇದೀಗ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೂ ವ್ಯಾಪ್ತಿಸಿದೆ. ಹುಬ್ಬಳ್ಳಿ-ಧಾರವಾಡ ಭಾಗದಲ್ಲಂತೂ ಜನರು ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೈರಾಣಾಗಿದ್ದಾರೆ.
ಮಳೆ ಬೇಕು ಬೇಕು ಎನ್ನುತ್ತಿದ್ದ ಜನರು, ಇದೀಗ ಜಿಟಿ ಜಿಟಿ ಸುರಿಯುತ್ತಿರುವ ಮಳೆ ನಿಂತರೆ, ಬಿಡುವು ಕೊಟ್ಟರೆ ಸಾಕಪ್ಪ ಎಂಬಂತಹ ವಾತಾವರಣ ಜಿಲ್ಲೆಯಾದ್ಯಂತ ನಿರ್ಮಾಣವಾಗಿದೆ. ಏಕೆಂದರೆ ಕಳೆದೊಂದು ವಾರದಿಂದ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಗಳಲ್ಲಿ ಮಳೆ ಸುರಿಯುತ್ತಲೇ ಇದೆ.

ಧಾರವಾಡ ಮಾತ್ರವಲ್ಲದೇ, ಬೆಳಗಾವಿ, ಹಾವೇರಿ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಆಗಾಗ ಮಳೆ ಬರುತ್ತಿದೆ. ಇಲ್ಲೆಲ್ಲ ಕಡೆಗಳಲ್ಲಿ ಮುಂಗಾರು ಸಕ್ರಿಯಗೊಂಡಿದೆ. ಆದರೆ ಧಾರವಾಡ ವ್ಯಾಪ್ತಿಯಲ್ಲಿ ಮಳೆ ದಿನದಲ್ಲಿ ನಾಲ್ಕೈದು ಭಾರಿ ವ್ಯಾಪಕ ಮಳೆ ದಾಖಲಾಗುತ್ತಿದೆ.
ಇಂದು ಮುಂದುವರಿದ ವ್ಯಾಪಕ ಮಳೆ
ಹುಬ್ಬಳ್ಳಿಯಲ್ಲಿ ಹಲವು ಕಡೆಗಳಲ್ಲಿ ಗುರುವಾರ ಬೆಳಗಿನ ಜಾವದಿಂದ ಮಳೆ ಅಬ್ಬರ ಶುರುವಿಟ್ಟುಕೊಂಡಿದ್ದು, ಬೆಳಗ್ಗೆ 6 ಗಂಟೆಯಿಂದ 8.30ರವರೆಗೆ ಜೋರು ಮಳೆ ಆಗಿದೆ. ಒಟ್ಟಾರೆ ಜಿಲ್ಲೆ ವ್ಯಾಪ್ತಿಯಲ್ಲಿ ಒಂದು ವಾರದಿಂದ ಮಲೆನಾಡಿನ ಅನುಭವ ಆಗುತ್ತಿದೆ.
ಜನರು ಮಕ್ಕಳನ್ನು ಶಾಲೆಗೆ ಬಿಡಲು, ವ್ಯಾಪಾರ, ವಹೀವಾಟು ನಡೆಸಲು ಆಗಾಗ ಬುರುವ ಜಿಟಿ ಜಿಟಿ ಮಳೆ ಕಿರಿಕಿರಿ ಉಂಟು ಮಾಡುತ್ತಿದೆ. ಕೊಡೆ, ರೈನ್ ಕೋಟ್ ಗೆ ಅಂಟಿಕೊಂಡೆ ಬದುಕಬೇಕಾದ ಸ್ಥಿತಿ ಇಲ್ಲಿದೆ. ಚಳಿಗಾಲ, ಶೀಥದ ವಾತಾವರಣ ನಿರ್ಮಾಣವಾಗಿದೆ. ಎಲ್ಲೆಡೆ ಮಬ್ಬು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಬಿಸಿಲಿನ ದರ್ಶನವೇ ಇಲ್ದಾಗಿದ್ದು, ತಾಪಮಾನದಲ್ಲಿ ಇಳಿಕೆ ಆಗಿದೆ.

ಡೆಂಗ್ಯೂ ಹೆಚ್ಚಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ನಿರಂತರ ಮಳೆಗೆ ಶೀಥದ ವಾತಾವರಣ, ಚಳಿ ಗಾಳಿಗೆ ಜನರು ಅನಾರೋಗ್ಯಕ್ಕೆ ತುತ್ತಾಗುವ ಆತಂಕದಲ್ಲಿದ್ದಾರೆ. ಕೆಲವು ದಿನಗಳ ಕಾಲ ಮಳೆ ಬಿಡುವು ನೀಡಿದರೆ ಸಾಕು ಎಂಬಂತಾಗಿದೆ.
ಜುಲೈ 26ರವರೆಗೆ ಅವಳಿನಗರಕ್ಕೆ ಮಳೆ ಸಾಧ್ಯತೆ?
ಸದ್ಯ ಸುರಿಯುತ್ತಿರುವ ಮುಂಗಾರು ಮಳೆ, ಇನ್ನು ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಹವಾಮಾನ ಇಲಾಖೆ ಪ್ರಕಾರ, ಜುಲೈ 26ರವರೆಗೆ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಹೀಗೆ ಮಳೆ ಮುಂದುವರಿಯಲಿದೆ. ನಿತ್ಯ ಮೋಡ ಕವಿದ ವಾತಾವರಣ ಸಹಿತ ಆಗಾಗ ಮಳೆಯ ದರ್ಶನವಾಗಲಿದೆ. ಕೆಲವು ಕಡೆಗಳಲ್ಲಿ ವ್ಯಾಪಕ ಮಳೆಯು ಸುರಿಯುವ ಸಾಧ್ಯತೆ ಇದೆ ಮಳೆ ಮುನ್ಸೂಚನಾ ವರದಿ ತಿಳಿಸಿದೆ.
ಮುಂದಿನ ಇನ್ನೂ ಒಂದು ವಾರ ಮಕ್ಕಳು, ಅನಾರೋಗ್ಯ ಪೀಡಿತರ ಬೆಚ್ಚಗಿನ ಧಿರಿಸು ಧರಿಸುವುದು, ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಅಗತ್ಯ ಕೆಲಸಗಳಿಗೆ ಮಾತ್ರವೇ ಹೊರ ಓಡಾಡುವುದು ಸೂಕ್ತವಾಗಿದೆ.












Click it and Unblock the Notifications