Pralhad Joshi: ಕ್ಷೇತ್ರದಲ್ಲಿಯೇ ನಾಲ್ವರು ಲಿಂಗಾಯತ ಶಾಸಕರಿದ್ದಾರೆ: ನಾನ್ಯಾರಿಗೂ ಅನ್ಯಾಯ ಮಾಡಿಲ್ಲ: ಜೋಶಿ
ಧಾರವಾಡ, ಏಪ್ರಿಲ್ 11: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿಯೇ ನಾಲ್ಕು ಜನ ಲಿಂಗಾಯತ ಶಾಸಕರಿದ್ದಾರೆ. ನಾನು ಯಾವುದೇ ಲಿಂಗಾಯರಿಗೆ ಅನ್ಯಾಯ ಮಾಡಿಲ್ಲ ಎಂದು ಕೇಂದ್ರ ಸಚಿವ ಮತ್ತು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲ ಜನಾಂಗದವರ ಬೆಂಬಲ ಬಿಜೆಪಿಗೆ ಇದೆ. ಲಿಂಗಾಯತರಿಗೆ ಯಾವುದೇ ರೀತಿ ಅನ್ಯಾಯ ಮಾಡಿರದ ನನ್ನ ಬಗ್ಗೆ ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಅಂದರೇನೆ ಸುಳ್ಳು-ಸುಳ್ಳು ಅಂದರೆನೇ ಕಾಂಗ್ರೆಸ್. ಬಿಜೆಪಿಯು ಹಿಂದುತ್ವದ ಮೇಲೆ ಗೆದ್ದೆ ಗೆಲ್ಲುತ್ತದೆ ಎಂದು ಕಾಂಗ್ರೆಸ್ ಗೆ ಗೊತ್ತಿದೆ ಎಂದು ಅವರು ಚಾಟಿ ಬೀಸಿದರು.

ಪಕ್ಷಕ್ಕೆ ದ್ರೋಹ ಬಗೆದ ಶಿವರಾಮ್ ಹೆಬ್ಬಾರ್
ಬಿಜೆಪಿ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಪಕ್ಷಕ್ಕೆ ದ್ರೋಹ ಬಗೆಗಿದ್ದಾರೆ ಎಂದು ದೂರಿದ ಅವರು, ಹೆಬ್ಬಾರ್ ಅವರ ಪುತ್ರನ ಕಾಂಗ್ರೆಸ್ ಸೇರ್ಪಡೆ ನಮಗೇನು ಅಚ್ಚರಿ ಎನ್ನಿಸಿಲ್ಲ. ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಮಾತುಗಳು ನನಗೆ ಆಶೀರ್ವಾದ ಎಂದು ಅವರು ಹೇಳಿದರು.
ವಿನಯ್ ಕುಲಕರ್ಣಿಗೆ ಜೋಶಿ ತಿರುಗೇಟು
ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ಆರೋಪಕ್ಕೆ ತಿರುಗೇಟು ಪ್ರಹ್ಲಾದ್ ಜೋಶಿಯವರು, ಅವರಿಗೆ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದೆ. ವಿವಿದ ಹಂತದ ನ್ಯಾಯಾಲಯದಲ್ಲಿ ಅವರ ಅರ್ಜಿಗಳು ವಜಾಗೊಂಡಿವೆ. ಹೀಗಿದ್ದರೂ ಅವರು ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅದರಲ್ಲಿ ಹುರುಳಿಲ್ಲ ಎಂದು ವಿವರಿಸಿದರು.
ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಗೃಹ ಲಕ್ಷ್ಮಿಹಣ ಸಹಾಯವಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಯಾರದಾದ್ರು ಮನೆಯಲ್ಲಿ ಮಗು ಹುಟ್ಟಿದರೂ, ಗ್ಯಾರಂಟಿ ಯೋಜನೆಯಿಂದ ಹುಟ್ಟಿದ್ದು ಎಂದು ಕಾಂಗ್ರೆಸ್ ನವರು ಹೇಳುತ್ತಾರೆ. ಅದು ನಮ್ಮ 2000 ರೂ.ನಿಂದಲೇ ಹುಟ್ಟಿದೆ ಎಂದು ಹೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಗೆ ಅವರು ವ್ಯಂಗ್ಯವಾಡಿದರು.

ಪ್ರಹ್ಲಾದ್ ಜೋಶಿ ಮಾದರಿ ಕಾರ್ಯಕರ್ತ: ಬೆಲ್ಲದ್
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಹಿಟ್ಲರ್ ಗೆ ಹೋಲಿಕೆ ಮಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ ಪ್ರತಿಕ್ರಿಯಿಸಿದ್ದಾರೆ. ವಿನಯ್ ಕುಲಕರ್ಣಿ ಅವರು ಸಿಟ್ಟಿನಲ್ಲಿ ಈ ರೀತಿ ಟೀಕೆ ಮಾಡುತ್ತಿದ್ದಾರೆ.
ಪ್ರಹ್ಲಾದ್ ಜೋಶಿಯವರು ಎಲ್ಲರಿಗೂ ಅತ್ಯಂತ ಪ್ರೀತಿಯಿಂದ ಸಿಗುವ ನಾಯಕರು. ನಮಗೆಲ್ಲರಿಗೂ ಮಾದರಿಯಾದಂತಹ ಕಾರ್ಯಕರ್ತರು. ಇಂತಹವರಿಗೆ 'ಹಿಟ್ಲರ್' ಜೊತೆ ಹೋಲಿಕೆ ಮಾಡುವುದು, ಟೀಕಿಸುವುದು ಸರಿಯಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಎಲ್ಲ ಸಂಘ ಸಂಸ್ಥೆಗಳಲ್ಲಿ ಬೆಳೆದಿದ್ದಾರೆ. ಹಿಂದಿ ಪ್ರಚಾರ ಸಭೆಯಲ್ಲಿ ನಮ್ಮ ಅಜ್ಜ ಸೇರಿದಂತೆ ಹಲವು ಮುಖಂಡರು ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ನಾವು ಜನರ ಬಳಿ ಹೋಗುತ್ತೇವೆ. ಯಾರು ಏನೇ ತಿಪ್ಪರಲ್ಲಾಗ ಹೊಡೆದರೂ ಪ್ರಹ್ಲಾದ್ ಜೋಶಿಯವರೇ ಈ ಕ್ಷೇತ್ರದಲ್ಲಿ ಗೆಲ್ಲುತ್ತಾರೆ. ಮತ್ತೊಮ್ಮೆ ನರೇಂದ್ರ ಮೋದಿವಯರು ಪ್ರಧಾನಿ ಆಗುತ್ತಾರೆ. ಅಲ್ಲದೇ ಪ್ರಹ್ಲಾದ್ ಜೋಶಿಯವರಿಂದ ಯಾವ ಲಿಂಗಾಯತರಿಗೂ ಅನ್ಯಾಯವಾಗಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಧಾರವಾಡದಲ್ಲಿ ಅನೇಕ ಅಭಿವೃದ್ಧಿ ಕಾರ್ಯ: ಶಾಸಕ
ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷಗಳ ಕಾಲ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಪ್ರಹ್ಲಾದ್ ಜೋಶಿಯವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications