ನಾಪತ್ತೆಯಾದ ಪಿಡಿಒ; ನಾವಳ್ಳಿ ಗ್ರಾಮಸ್ಥರಿಗೆ ಶಾಸಕ ಶಂಕರ ಪಾಟೀಲ್ ಅಭಯ
ಧಾರವಾಡ, ನವೆಂಬರ್ 26: ಅಧಿಕಾರ ಹಸ್ತಾಂತರ ಮಾಡದೆ ಕಳೆದ 40 ದಿನಗಳಿಂದ ನಾಪತ್ತೆಯಾಗಿರುವ ಪಿಡಿಒ ಧೋರಣೆಯಿಂದಾಗಿ ನಾಲ್ಕೈದು ಗ್ರಾಮದ ಜನರು ನಿತ್ಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರ್ಕಾರದ ಯೋಜನೆಗಳು ಜಾರಿಯಾಗಲೂ ತೊಂದರೆಯಾಗಿ, ಗ್ರಾಮಸ್ಥರು ಸರ್ಕಾರಕ್ಕೆ ಶಾಪ ಹಾಕುವಂತಾಗಿದೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಾವಳ್ಳಿ ಗ್ರಾಮ ಪಂಚಾಯತಿ ಪಿಡಿಒ ಎ.ಐ.ಸೈಯದ್ ಅವರು ಅಧಿಕಾರ ಹಸ್ತಾಂತರ ಮಾಡದೆ ನಾಪತ್ತೆಯಾಗಿದ್ದಾರೆ. ನಾವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನಾವಳ್ಳಿ, ಅಡ್ನೂರು, ಕಿತ್ತೂರು ಗ್ರಾಮಗಳು ಬರುತ್ತವೆ. ಪಿಡಿಒ ನಡವಳಿಕೆಯಿಂದಾಗಿ ಈ ಗ್ರಾಮದ ಜನರಿಗೆ ಸರ್ಕಾರದ ಯೋಜನೆಗಳೂ ತಲುಪುತ್ತಿಲ್ಲ. ಕುಡಿಯುವ ನೀರು, ವಿದ್ಯುತ್ ಸಂಪರ್ಕ, ನೆರೆ ಹಾವಳಿಯಿಂದ ಹಾನಿಯಾದ ಸಂತ್ರಸ್ತರು ಪರಿಹಾರ ಸಿಗದೆ ಕಷ್ಟ ಎದುರಿಸುವಂತಾಗಿದೆ.
ಈ ಹಿಂದೆ ಸೈಯದ್ ಅವರನ್ನು ಅಮಾನತು ಮಾಡಬೇಕು ಹಾಗೂ ಬೇರೆ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ನಾವಳ್ಳಿ, ಅಡ್ನೂರು, ಕಿತ್ತೂರು ಗ್ರಾಮಸ್ಥರು ಒತ್ತಾಯಿಸಿದ್ದರು. ನಾವಳ್ಳಿ ಗ್ರಾಮ ಪಂಚಾಯತಿಗೆ ಪಿಡಿಒ ಇಲ್ಲದ ಕಾರಣಕ್ಕೆ ಸೈಯದ್ ಅವರನ್ನು ನೇಮಕ ಮಾಡಲಾಗಿತ್ತು. ಎರಡು ವರ್ಷಗಳ ಕಾಲ ಪಿಡಿಒ ಆಗಿ ಕಾರ್ಯನಿರ್ವಹಿಸಿದ ನಂತರ ಅವರನ್ನು ಹಿಂಬಡ್ತಿ ನೀಡಿ ಸಾಸ್ವಿಹಳ್ಳಿ ಗ್ರಾಮ ಪಂಚಾಯಿತಿಗೆ ಕಾರ್ಯದರ್ಶಿ ಹುದ್ದೆ ನೀಡಿ ವರ್ಗಾವಣೆ ಮಾಡಲಾಗಿತ್ತು. ಆದರೆ ನಾವಳ್ಳಿ ಹಾಗೂ ಸಾಸ್ವಿಹಳ್ಳಿ ಗ್ರಾಮದಲ್ಲಿ ಕೆಲಸ ಮಾಡದೆ ಸೈಯದ್ ನಾಪತ್ತೆಯಾಗಿದ್ದರಿಂದ ಅವರನ್ನು ಅಮಾನತು ಮಾಡಿ ಧಾರವಾಡ ಜಿಇಒ ಡಾ. ಸತೀಶ ಆದೇಶ ಮಾಡಿದ್ದಾರೆ.

ಈ ಸಮಸ್ಯೆ ಕುರಿತು ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಗ್ರಾಮಸ್ಥರಿಗೆ ಅಭಯ ನೀಡಿದ್ದು, "ಇನ್ನೆರಡು ದಿನದಲ್ಲಿ ಬೇರೆ ಪಿಡಿಒ ಅಧಿಕಾರ ಸ್ವೀಕಾರ ಮಾಡುತ್ತಾರೆ, ಬಾಕಿ ಉಳಿದ ಕೆಲಸವನ್ನು ಅವರು ತುರ್ತಾಗಿ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯ ಇಲ್ಲ" ಎಂದು ತಿಳಿಸಿದ್ದಾರೆ.












Click it and Unblock the Notifications