ಧಾರವಾಡ-ಬೆಳಗಾವಿ ನೂತನ ರೈಲ್ವೆ ಮಾರ್ಗ, ಕೇಂದ್ರ ಸಚಿವರಿಗೆ ಪತ್ರ

ಧಾರವಾಡ, ಅಕ್ಟೋಬರ್ 14: ಕರ್ನಾಟಕದ ಪ್ರಮುಖ ರೈಲು ಯೋಜನೆಗಳಲ್ಲಿ ಒಂದು ಧಾರವಾಡ-ಬೆಳಗಾವಿ ನಡುವೆ ಸಂಪರ್ಕ ಕಲ್ಪಿಸುವ ನೂತನವಾದ ರೈಲು ಮಾರ್ಗ. ರಾಜ್ಯ ಮತ್ತು ಕೇಂದ್ರ ಸರ್ಕಾರ ಶೇ 50:50ರಷ್ಟು ವೆಚ್ಚ ಹಂಚಿಕೆಯೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಕನಸಿನ ಯೋಜನೆ ಇದಾಗಿದೆ. ಯೋಜನೆ ಜಾರಿಯಾದರೆ ಧಾರವಾಡ-ಬೆಳಗಾವಿ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ.

ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗದ ಕಾಮಗಾರಿಯನ್ನು ಆರಂಭಿಸುವಂತೆ ಈಗ ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಪತ್ರವನ್ನು ಬರೆಯಲಾಗಿದೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಪತ್ರವನ್ನು ಬರೆದಿದ್ದಾರೆ.

New Railway Line Between Dharwad And Belagavi Letter To V Somanna

ಈ ಪತ್ರ ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲ್ವೆ ಮಾರ್ಗದ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸುವ ಕುರಿತು ಎಂಬ ವಿಚಾರವನ್ನು ಒಳಗೊಂಡಿದೆ. ಈ ಯೋಜನೆಯನ್ನು ಆರಂಭಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರ ಭೂಮಿ ನೀಡುವುದು ವಿಳಂಬ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಆದ್ದರಿಂದ ಕಾಮಗಾರಿ ಇನ್ನೂ ಸಹ ಆರಂಭವಾಗಿಲ್ಲ.

ಪತ್ರದ ವಿವರಗಳು: ಶಾಸಕರು ಪತ್ರದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಬೆಳಗಾವಿ-ಹುಬ್ಬಳ್ಳಿ-ಧಾರವಾಡ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾದ ಕಿತ್ತೂರು ಮಾರ್ಗವಾಗಿ ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಅಂದಾಜು 927,40 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು 2020ರಲ್ಲಿಯೇ ಪ್ರಧಾನಮಂತ್ರಿಗಳಾದ ಸನ್ಮಾನ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಮಂಜೂರಾತಿ ನೀಡಿತ್ತು ಎಂದು ಹೇಳಿದ್ದಾರೆ.

ಪ್ರಸ್ತುತದಲ್ಲಿ ಬೆಳಗಾವಿಯಿಂದ ಧಾರವಾಡಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸಲು ಸುಮಾರು 3 ಗಂಟೆಗಳ ಸಮಯ ಬೇಕಾಗಿದ್ದು. ಆದರೆ ಸದರಿ ಯೋಜನೆಯಿಂದ ಕೇವಲ 1 ಗಂಟೆಯಲ್ಲೇ ಬೆಳಗಾವಿಯಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಬಹುದು. ಈ ಮಹತ್ತರ ಯೋಜನೆಗೆ ಕೇಂದ್ರ ಸರಕಾರ ಮಂಜೂರಾತಿ ನೀಡಿ 4 ವರ್ಷಗಳು ಕಳೆದರೂ ಭೂಸ್ವಾಧೀನಕ್ಕಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವ ಪ್ರಕ್ರಿಯೆಯ ನಂತರವೂ ರಾಜ್ಯ ಸರ್ಕಾರದಿಂದ ಯಾವುದೇ ಭೂಮಿಯನ್ನು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ರೈಲು ಮಾರ್ಗ ಯೋಜನೆ ಅನುಷ್ಠಾನದ ಅಗತ್ಯವಿದೆ. ಆದ್ದರಿಂದ ಈ, ಯೋಜನೆಯನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಅಗತ್ಯವಿರುವ ಭೂಮಿಯನ್ನು ತ್ವರಿತವಾಗಿ ಹಸ್ತಾಂತರಿಸಲು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ, ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಹೇಳಿದ್ದಾರೆ.

73 ಕಿ. ಮೀ. ಮಾರ್ಗ: ಬೆಳಗಾವಿ-ಧಾರವಾಡ ನಡುವಿನ ನೂತನ ರೈಲು ಮಾರ್ಗ 73 ಕಿ. ಮೀ. ಉದ್ದವಿದೆ. 50:50 ಪಾಲುದಾರಿಕೆಯಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯ ಕುರಿತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದರು. ಆಗ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಉತ್ತರಿಸಿದ್ದರು.

ಸಚಿವರು ತಮ್ಮ ಉತ್ತರದಲ್ಲಿ, "ಧಾರವಾಡ-ಬೆಳಗಾವಿ ರೈಲು ಮಾರ್ಗದ ಅಭಿವೃದ್ಧಿಗೆ ಅಗತ್ಯವಿರುವ ಭೂಮಿಯನ್ನು ಕರ್ನಾಟಕ ಸರ್ಕಾರ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ರೈಲು ಮಾರ್ಗವನ್ನು 50:50 ಪಾಲುದಾರಿಕೆಯಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಕರ್ನಾಟಕ ಸರ್ಕಾರ ಯೋಜನೆನೆಗೆ ಭೂಮಿಯನ್ನು ಉಚಿತವಾಗಿ ನೀಡಬೇಕಿದೆ. ಭೂಮಿ ನೀಡುವ ಜೊತೆಗ ರೈಲ್ವೆ ಯೋಜನಾ ವೆಚ್ಚದಲ್ಲಿ ಶೇ 50ರಷ್ಟು ಭರಿಸಬೇಕಿದೆ" ಎಂದು ಹೇಳಿದ್ದರು.

"ಈ ನೂತನ ರೈಲು ಯೋಜನಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ಕೆಐಎಡಿಬಿಗೆ ನೀಡಿದೆ. 888 ಎಕರೆ ಭೂಮಿ ಒದಗಿಸುವಂತೆ ಕೆಐಎಡಿಬಿಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ" ಎಂದು ರೈಲ್ವೆ ಸಚಿವರು ಲೋಕಸಭೆಗೆ ಮಾಹಿತಿ ನೀಡಿದ್ದರು.

ಧಾರವಾಡ-ಬೆಳಗಾವಿ ರೈಲು ಮಾರ್ಗದ ಕುರಿತು 2020ರಿಂದಲೇ ಚರ್ಚೆಗಳು ನಡೆಯುತ್ತಿವೆ. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಧಾರವಾಡ ಮತ್ತು ಬೆಳಗಾವಿ ಮಧ್ಯೆ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿರುವುದರಿಂದ, ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಸಮೀಕ್ಷೆ ಮಾಡಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಲಾಖೆಗೆ ನೀಡುವ ಕಾರ್ಯವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಕೈಗೊಳ್ಳಲಿದೆ ಎಂದು ಹೇಳಿತ್ತು.

ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಅಗತ್ಯ ಸಹಕಾರ ನೀಡಲಾಗುವುದು ಎಂದು ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ 2024 ಬಂದರೂ ಸಹ ರೈಲ್ವೆ ಇಲಾಖೆಗೆ ಇನ್ನೂ ಭೂಮಿ ಹಸ್ತಾಂತರವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+