Neha Hiremath Murder Case: ನೇಹಾ ಹತ್ಯೆ ಕೇಸ್ ಬಗ್ಗೆ ಸಚಿವ ಸಂತೋಷ್ ಲಾಡ್ ಏನ್ ಹೇಳಿದ್ರು ಗೊತ್ತಾ?
ಧಾರವಾಡ, ಏಪ್ರಿಲ್, 21: ನೇಹಾ ನಿರಂಜನ ಹಿರೇಮಠ ಹತ್ಯೆ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಸಂಬಂಧ ಇಡೀ ಸ್ಯಾಂಡಲ್‌ವುಡ್ ಬಳಗ, ರಾಜಕೀಯ ವ್ಯಕ್ತಿಗಳು, ಸಾಮಾನ್ಯ ಜನರು ಸೇರಿದಂತೆ ಇಡೀ ರಾಜ್ಯವೇ ಆರೋಪಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸುತ್ತಿವೆ. ಇನ್ನು ಈ ಬಗ್ಗೆ ಮಾತಾನಾಡಿರುವ ಸಚಿವ ಸಂತೋಷ್ ಲಾಡ್ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನೇಹಾ ನಿರಂಜನ ಹಿರೇಮಠ ಕೊಲೆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಎರಡು ತಿಂಗಳ ಹಿಂದೆಯೇ ಇದೇ ರೀತಿ ಘಟನೆ ತುಮಕೂರಿನಲ್ಲಿಯೂ ನಡೆದಿತ್ತು. ಒಬ್ಬ ಹಿಂದೂ ಹುಡುಗ ಮುಸಲ್ಮಾನ್ ಹುಡುಗಿಗೆ ಹೊಡೆದಿದ್ದ, ಅವಾಗ ಯಾಕೆ ಇವರು ಹೋಗಿ ಹೋರಾಟ ಮಾಡಲಿಲ್ಲ. ಇಲ್ಲಿ ಮುಸ್ಲಿಂ ಅನ್ನೋ ವಿಷಯ ಬಂದಿದೆ ಅಂತಾ ಈ ರೀತಿ ಮಾಡುತ್ತಿದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಪ್ರಶ್ನಿಸುವ ಮೂಲಕ ನೇರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಇಲ್ಲಿ ನಡೆದಂತಹ ಘಟನೆಗೆ ನಮ್ಮ ಖಂಡನೆ ಇದೆ. ನೇಹಾ ಕುಟುಂಬಕ್ಕೆ ಖಂಡಿತವಾಗಲೂ ನ್ಯಾಯವನ್ನೂ ನಮ್ಮ ಸರ್ಕಾರ ಒದಗಿಸಿಕೊಡುತ್ತದೆ. ಇದನ್ನು ರಾಜಕೀಯವಾಗಿ ಬಳಸಬಾರದು ಅಂತಾ ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದರು.
ದಿಂಗಾಲೇಶ್ವರ ಶ್ರೀಗಳ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳ್ ಸಾಹೇಬರು ಏನು ಬೇಕು ಅದನ್ನೇ ಮಾತನಾಡುತ್ತಾರೆ. ಒನ್ ಟು ತ್ರಿ ಆಲ್ ಇಂಡಿಯಾ ಫ್ರೀ ಯಂತೆ ಅವರ ಹೇಳಿಕೆಗೆ ಅವರನ್ನೇ ಕೇಳಬೇಕು. ಹುಬ್ಬಳ್ಳಿಯಂತಹ ಘಟನೆ ಇಡೀ ದೇಶದಲ್ಲಿ ಯಾರಿಗೂ ಕೂಡ ಆಗಬಾರದು. ಕೊಲೆಗಾರರಿಗೆ ಯಾಕೆ ಸರ್ಕಾರ ಪ್ರೋತ್ಸಾಹ ಕೊಡುತ್ತದೆ ಈ ರೀತಿ ಮಾಡಿ ಅಂತಾ ವಾಗ್ದಾಳಿ ನಡೆಸಿದರು.
ಎಲ್ಲರಿಗೂ ಒಂದು ಮಿತಿ ಅನ್ನೋದು ಬೇಕು, ಇವರೇ ಪ್ರೋತ್ಸಾಹ ಕೊಡುತ್ತಾರೆ ಅಂತಾರೆ. ನಾವು ಮನುಷ್ಯರಲ್ವಾ? ನಮಗೆ ಸಾಮಾನ್ಯ ಜ್ಞಾನ ಇಲ್ವಾ? ನಾವು ಈ ರೀತಿ ಮಾಡುವುದಕ್ಕಾಗಿಯೇ ಆರಿಸಿ ಬಂದಿದ್ದೇವಾ? ನಮಗೆ ಜೀವನದಲ್ಲಿ ಬೇರೆ ಉದ್ದೇಶಾನೇ ಇಲ್ವಾ? ಕಾಂಗ್ರೆಸ್ ಕಳೆದ 70 ವರ್ಷದಿಂದ ಬೇರೇನು ಮಾಡೆ ಇಲ್ವಾ? ಇದನ್ನೇ ಮಾಡಿಕೊಂಡು ಬಂದಿದ್ದೇವಾ? ನಾವು ದೇಶ, ರಾಜ್ಯವನ್ನು ಕಟ್ಟಿದ್ದೇವೆ. ಇಂತಹ ಘಟನೆಗಳು ಆದಾಗ ಎಲ್ಲರೂ ಒಂದಾಗಿರಬೇಕು ಎಂದರು.
ಇದಕ್ಕೆ ಕಾನೂನು ತರಬೇಕು. ಈ ರೀತಿ ಆದರೆ ಎನ್‌ಕೌಂಟರ್ ಮಾಡಬೇಕು, ಈ ರೀತಿಯಾದಾಗ ಇರೋ ಬರೋರೆಲ್ಲರೂ ಮಾತನಾಡೋದು ಒಂದು ವಾರದ ನಂತರ ಯಾರು ಏನು ಮಾತನಾಡುತ್ತಾರೆ ನೋಡೋಣ ಎಂದರು.












Click it and Unblock the Notifications