ಐಟಿ ದಾಳಿಯಲ್ಲಿ ಸಿಕ್ಕಿದ್ದು ಸರ್ಕಾರದ್ದೇ ಹಣ, ಸಂದೇಹ ಬೇಡ- ಶಾಸಕ ಮಹೇಶ್ ಟೆಂಗಿನಕಾಯಿ
ಧಾರವಾಡ, ಅಕ್ಟೋಬರ್ 16: ರಾಜ್ಯ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ ಕರ್ನಾಟಕವನ್ನು ಎಟಿಎಂ ಮಾಡುತ್ತಾರೆ ಅಂತಾ ಹೇಳಿದ್ದೇವು. ಈಗ ಅದು ಈಗ ನಿಜವಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಆರೋಪಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬೆಂಗಳೂರಿನಲ್ಲಿಯೇ ದೊಡ್ಡ ಪ್ರಮಾಣದ ಆದಾಯ ತೆರಿಗೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಹಣ ಸಿಕ್ಕಿದ್ದು, ಈ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಇದರಲ್ಲಿ ಯಾವುದೇ ಸಂದೇಹ ಬೇಡಾ ಇದು ರಾಜ್ಯ ಸರ್ಕಾರದ್ದೇ ಹಣ ಎಂದರು.

ರಾಜ್ಯದಲ್ಲಿ ದಟ್ಟವಾದ ಬರಗಾಲ ಇದ್ದು ಸರ್ಕಾರ ಹಣ ವಸೂಲಿ ಮಾಡುವುದಕ್ಕೆ ಇಳಿದಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು .
ಅಬಕಾರಿ ಇಲಾಖೆ ಬಗ್ಗೆ ಮದ್ಯ ವ್ಯಾಪಾರಿಗಳು ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಹತ್ತು ಲಕ್ಷದ ನೋಟಿಫಿಕೇಷ್‌ಗೆ 25 ಲಕ್ಷ ಕೊಡಬೇಕಂತೆ. ಇಂತಹದು ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎಂದು ಆರೋಪ ಮಾಡಿದರು.
ಗುತ್ತಿಗೆದಾರರ ಸಂಘದ ಕೆಂಪಯ್ಯ ಅವರು ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಕೇವಲ ಐದು ತಿಂಗಳಿನಲ್ಲಿ ಸರ್ಕಾರದ ಬಗ್ಗೆ ಜನ ಭ್ರಮನಿರಸ ಗೊಂಡಿದ್ದಾರೆ. ಇನ್ನು ಯಾವುದೇ ಅಭಿವೃದ್ಧಿ ಕಾಮಗಾರಿಗಳು ಇಲ್ಲ. ಈ ಗ್ಯಾರಂಟಿಗಳ ಬಗ್ಗೆಯೂ ಯಾವುದೇ ಲೆಕ್ಕವಿಲ್ಲ. ರಾಜ್ಯವನ್ನು ಕತ್ತಲೆ ರಾಜ್ಯ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಯಾವುದೇ ಸಮಸ್ಯೆ ಪರಿಹಾರ ಮಾಡುವವರಲ್ಲ. ಸಮಸ್ಯೆಗಳನ್ನು ಹುಟ್ಟಿಸುವವರು ಎಂದ ಅವರು ಜಗದೀಶ ಶೆಟ್ಟರ್‌ಗೆ ನಮ್ಮ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಈಗ ಸಿಕ್ಕಿರುವ 40 ಕೋಟಿ ಬಗ್ಗೆ ಅವರು ಮೊದಲು ಸ್ಪಷ್ಟನೆ ಕೊಡಲಿ. ತಮ್ಮ ಸರ್ಕಾರದ ಅವಧಿಯಲ್ಲಿ ಸಿಕ್ಕಿರುವ ಹಣದ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಾರಾ ನೋಡೋಣ ಎಂದು ಸವಾಲು ಹಾಕಿದರು.
ಐಟಿ, ಇಡಿ, ಸಿಬಿಐ ಕೇಂದ್ರದ ವ್ಯಾಪ್ತಿಯಲ್ಲಿವೆ- ಸಚಿವ ಸಂತೋಷ್ ಲಾಡ್
ಧಾರವಾಡ: ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ ಸಿಕ್ಕ 40 ಕೋಟಿ ರೂಪಾಯಿ ಹಣ ಕಾಂಗ್ರೆಸ್‌ಗೆ ಸೇರಿದ್ದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ವಿರೋಧ ಪಕ್ಷದವರು ಸಾಮಾನ್ಯವಾಗಿ ಈ ರೀತಿಯ ಆರೋಪ ಮಾಡಿಯೇ ಮಾಡುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಐಟಿ, ಇಡಿ, ಸಿಬಿಐ ಎಲ್ಲವೂ ಅವರ ಕೈಯಲ್ಲಿದೆ. ಅವರು ಮಾಡಿದ್ದೇ ಆಟ. ಈಗ ಎಲ್ಲವೂ ತನಿಖೆ ನಡೆಯುತ್ತಿದೆ. ತನಿಖೆ ಮುಗಿಯವವರೆಗೂ ಕಾಯೋಣ ಎಂದರು.
ಅಬಕಾರಿ ಇಲಾಖೆಯು ಮದ್ಯ ವ್ಯಾಪಾರಿಗಳಿಂದ ಲಂಚ ಪಡೆಯುತ್ತಿದೆ ಎಂದು ಮದ್ಯ ವ್ಯಾಪಾರಿಗಳು ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ವಿಚಾರ ಸಿಎಂ ಸಿದ್ದರಾಮಯ್ಯ ಗಮನಕ್ಕೆ ಹೋಗಿದೆ. ಅವರು ಅದಕ್ಕೆ ಪರಿಹಾರ ಕಂಡು ಹಿಡಿಯುತ್ತಾರೆ ಎಂದರು.












Click it and Unblock the Notifications