ಮಾಳಾಪುರ: ಸೇವಾ ನ್ಯೂನ್ಯತೆ ಎಸಗಿದ ಸ್ಪೈಸ್‌ಜೆಟ್ ಕಂಪೆನಿಗೆ 63,457 ರೂಪಾಯಿ ದಂಡ
ಸ್ಪೈಸ್‌ಜೆಟ್ ಕಂಪೆನಿಗೆ 63,457 ರೂಪಾಯಿ ದಂಡ ವಿಧಿಸಲು ಕಾರಣವೇನು ಅನ್ನುವುದನ್ನು ಇಲ್ಲಿ ತಿಳಿಯಿರಿ.
ಧಾರವಾಡ, ಫೆಬ್ರವರಿ, 03: ಧಾರವಾಡ ಮಾಳಾಪುರದ ಶಕೀಲ್, ಶೌಕತ ಅಲಿ ಮುಲ್ಲಾ ಮತ್ತು ಮಹ್ಮದ್ ಮಾವಜಾನ್ ಎಂಬುವವರು ಡಿಸೆಂಬರ್ 21,2021ರಂದು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಸ್ಪೈಸ್‍ಜೆಟ್ ಲಿಮಿಟೆಡ್ ಮೂಲಕ ಹೈದರಾಬಾದನಿಂದ ಬೆಳಗಾವಿಗೆ ಮರಳಿ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಈ ವಿಮಾನ ನಿಗದಿತ ದಿನಾಂಕದಂದು ಮಧ್ಯಾಹ್ನ 1:30ಕ್ಕೆ ಹೊರಡಬೇಕಿತ್ತು. ದೂರುದಾರರು ವಿಮಾನ ಹೊರಡುವ 1 ತಾಸು 15 ನಿಮಿಷಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೂ ಅಲ್ಲಿನ ಕರ್ತವ್ಯ ನಿರತ ಸೆಕ್ಯುರಿಟಿ ದೂರುದಾರರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶಿಸಲು ನಿರಾಕರಿಸಿದ್ದರು. ಅವತ್ತಿನಿಂದ ಕೋರ್ಟ್‌ನಲ್ಲಿ ವಾದ-ಪ್ರತಿವಾದಗಳು ನಡೆಯುತ್ತಲೇ ಇದ್ದವು. ಇದೀಗ ಕೋರ್ಟ್ ಅಂತಿಮ ನಿರ್ಧಾರಕ್ಕೆ ಬಂದಿದ್ದು, ಸ್ಪೈಸ್ ಜೆಟ್ ಕಂಪನಿಗೆ 63,457 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಆಯೋಗದಲ್ಲಿ ದೂರು ಸಲ್ಲಿಕೆ
ಈ ದೂರುದಾರರು ಎಷ್ಟೇ ವಿನಂತಿಸಿದರೂ ವಿಮಾನ ನಿಲ್ದಾಣದ ಸಿಬ್ಬಂದಿ ಫಿರ್ಯಾದುದಾರರ ವಿನಂತಿಯನ್ನು ನಿರ್ಲಕ್ಷಿಸಿದ್ದರು. ಕಾರಣ ಸದರಿ ಸ್ಪೈಸ್‍ಜೆಟ್‌ನವರು ಗ್ರಾಹಕರ ರಕ್ಷಣಾ ಕಾಯ್ದೆಯಡಿ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.

ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರಾಕರಣೆ
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ವಿಮಾನ ಹೊರಡುವ 75 ನಿಮಿಷಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೂ ಕೂಡ ಅಲ್ಲಿನ ಕರ್ತವ್ಯನಿರತ ಸಿಬ್ಬಂದಿ ದೂರುದಾರರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರಾಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದರು.

ಫಿರ್ಯಾದುದಾರರಿಗೆ ಅವರು ಸಂದಾಯ ಮಾಡಿದ ಏರ್ ಟಿಕೆಟ್ ಪೂರ್ತಿ ಶುಲ್ಕ 8,457 ಮತ್ತು ಅವರು ಅನುಭವಿಸಿದ ಅನಾನುಕೂಲ, ಮಾನಸಿಕ ತೊಂದರೆ ಮತ್ತು ಹಾನಿಗಾಗಿ 50,000 ರೂಪಾಯಿಗಳ ಪರಿಹಾರ ಜೊತೆಗೆ ಪ್ರಕರಣದ ಖರ್ಚು ಎಂದು 5,000 ರೂಪಾಯಿಗಳನ್ನು ಈ ಆದೇಶದ ದಿನಾಂಕದಿಂದ 30 ದಿನಗಳ ಒಳಗಾಗಿ ಕೊಡಲು ಆಯೋಗ ಆದೇಶಿಸಿದೆ.












Click it and Unblock the Notifications