ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ; 74,268 ಮತದಾರರು
ಧಾರವಾಡ, ಅಕ್ಟೋಬರ್ 27: ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಬುಧವಾರ ಮತದಾನ ನಡೆಯಲಿದೆ. ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಕ್ಷೇತ್ರ ಒಳಗೊಂಡಿದೆ.
ಬುಧವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಚುನಾವಣೆಗೆ ಮತಯಂತ್ರದ ಬದಲು ಮತಪತ್ರವನ್ನು ಬಳಕೆ ಮಾಡಲಾಗುತ್ತದೆ. ನೋಟಾ ಆಯ್ಕೆ ಸಹ ಮತದಾರರಿಗೆ ಇರುವುದಿಲ್ಲ.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಧಾರವಾಡದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ಮತದಾದನ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

ಮತ ಪತ್ರ, ಮತಪೆಟ್ಟಿಗೆ, ಚುನಾವಣಾ ಸಾಮಗ್ರಿಗಳ ಜೊತೆಗೆ ಕೋವಿಡ್ ನಿಯಂತ್ರಣದ ಮುಂಜಾಗ್ರತಾ ಕ್ರಮಕ್ಕಾಗಿ ಮತಗಟ್ಟೆ ಅಧಿಕಾರಿಗಳಿಗೆ ಮಾಸ್ಕ್, ಹ್ಯಾಂಡ್ ಗೌಸ್ ಮುಂತಾದ ಪರಿಕರಗಳನ್ನು ವಿತರಣೆ ಮಾಡಲಾಗಿದೆ.
ಒಟ್ಟು ಮತದಾರರು: ಪಶ್ಚಿಮ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆ ಬರುತ್ತದೆ. ಧಾರವಾಡದಲ್ಲಿ 21,549. ಗದಗ 15,978. ಹಾವೇರಿ 23,593 ಹಾಗೂ ಉತ್ತರ ಕನ್ನಡದಲ್ಲಿ 13,148 ಸೇರಿ 74,268 ಮತದಾರರು ಇದ್ದಾರೆ.
ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಮತಯಂತ್ರದ ಬದಲು ಮತ ಪತ್ರವನ್ನು ಉಪಯೋಗ ಮಾಡಲಾಗುತ್ತದೆ. ಮತಚೀಟಿಯಲ್ಲಿ ದಾಖಲಾದ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಗೆದ್ದ ಅಭ್ಯರ್ಥಿ ಆಯ್ಕೆ ನಡೆಯಲಿದೆ.
ಮತದಾರರು ಮತದಾನ ಮಾಡುವಾಗ ಮೊದಲ ಪ್ರಾಶಸ್ತ್ಯದ ಮತ ಯಾರಿಗೆ ಎಂದು ಮತದಾನ ಮಾಡಬೇಕು. ನವೆಂಬರ್ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications