ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕುಡಿಯವ ನೀರಿನ ಕೊರತೆ, ರೋಗಿಗಳ ಪರದಾಟ
ಧಾರವಾಡ, ಮೇ, 30: ಧಾರವಾಡದ ಜಿಲ್ಲಾಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜಲಮಂಡಳಿಯ ಕಾರ್ಯ ನಿರ್ವಹಣೆಯನ್ನು ಯಾವಾಗ ಎಲ್ ಆ್ಯಂಡ್ ಟಿ ಕಂಪೆನಿಗೆ ವಹಿಸಲಾಯಿತೋ ಆಗಿನಿಂದಲೂ ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡಮಟ್ಟದಲ್ಲಿ ತಲೆದೋರಿದೆ. ಈ ಸಮಸ್ಯೆಗೆ ಇದೀಗ ಜಿಲ್ಲಾ ಆಸ್ಪತ್ರೆ ಕೂಡ ಹೊರತಾಗಿಲ್ಲ.ಕಳೆದ ಹಲವಾರು ದಿನಗಳಿಂದ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಸಮರ್ಪಕ ನೀರಿನ ಸರಬರಾಜು ಆಗದೇ ರೋಗಿಗಳು ಪರದಾಡುವಂತಾಗಿದೆ.
ಚಿಕಿತ್ಸೆ ಹಾಗೂ ಹೆರಿಗೆಗೆ ದಾಖಲಾದ ಹೆಣ್ಣು ಮಕ್ಕಳು ನೀರಿಗಾಗಿ ಈ ಆಸ್ಪತ್ರೆಯಲ್ಲಿ ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಇದೀಗ ಖಾಸಗಿಯವರಿಂದ ಹಾಗೂ ಜಲಮಂಡಳಿಯವರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಸಿಕೊಳ್ಳುತ್ತಿದ್ದಾರೆ. ಈ ರೀತಿ ಟ್ಯಾಂಕರ್ ಮೂಲಕ ಸರಬರಾಜು ಮಾಡಿಸಿಕೊಂಡ ನೀರು ಸಮರ್ಪಕವಾಗಿ ಸಾಕಾಗುತ್ತಿಲ್ಲ ಎಂಬುದು ರೋಗಿಗಳ ಅಭಿಪ್ರಾಯ ಆಗಿದೆ.

ಧಾರವಾಡದ ಜಿಲ್ಲಾ ಆಸ್ಪತ್ರೆ ಇದೀಗ ಮೇಲ್ದರ್ಜೆಗೆ ಏರಿದೆ. ಹಳೇ ಕಟ್ಟಡದ ಪಕ್ಕವೇ ಮತ್ತೊಂದು ಹೊಸ ಕಟ್ಟಡ ನಿರ್ಮಾಣವಾಗಿದ್ದು, ಅದನ್ನು ಹೆರಿಗೆ ವಾರ್ಡ್ ಅನ್ನಾಗಿ ಮಾಡಲಾಗಿದೆ. ಆದರೆ, ಇಡೀ ಜಿಲ್ಲಾ ಆಸ್ಪತ್ರೆಯಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮಹಾನಗರ ಪಾಲಿಕೆಯಾಗಲಿ ಅಥವಾ ಹೊಸದಾಗಿ ಆಯ್ಕೆಯಾದ ಜನಪ್ರತಿನಿಧಿಗಳಾಗಲಿ ಇದರತ್ತ ಗಮನಹರಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ತಲೆದೋರಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.
ಕೆರೆ ನೀರು ಖಾಲಿ ಮಾಡಿಸಿದ ಗ್ರಾಮಸ್ಥರು
ಮತ್ತೊಂದೆಡೆ ಇದೀಗ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ನೀರಿನ ಅಭಾವ ಎದುರಾಗಿದೆ. ಇದರಿಂದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ನೀರಿಗಾಗಿ ಹಾಹಾಕಾರ. ಹಲವಾರು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಹುಬ್ಬಳ್ಳಿ ತಾಲೂಕಿನ ಈ ಊರಿನಲ್ಲಿ ಮಾತ್ರ ಜನರು ಕೆರೆ ನೀರು ಖಾಲಿ ಮಾಡಿಸುತ್ತಿದ್ದಾರೆ. ಜನರು ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಕೆರೆಯಲ್ಲಿ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ. ಆದ್ದರಿಂದ ಇಲ್ಲಿನ ಜನರು ಅಧಿಕಾರಿಗಳು ಬೇಡ ಬೇಡ ಅಂದರೂ ಕೆರೆಯಲ್ಲಿ ನೀರಿರುವುದು ಬೇಡವೇ ಬೇಡ ಎನ್ನುತ್ತಿದ್ದಾರೆ. ಹೀಗೆ ಜನರ ಒತ್ತಡಕ್ಕೆ ಮಣಿದ ಗ್ರಾಮ ಪಂಚಾಯತಿ ಅಧಿಕಾರಿಗಳು ಕೆರೆ ನೀರನ್ನು ಯಂತ್ರಗಳ ಮೂಲಕ ಹೊರ ಚೆಲ್ಲುತ್ತಿದ್ದಾರೆ. 500ಕ್ಕೂ ಹೆಚ್ಚು ಮನೆಗಳಿರುವ 3,500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಉಮಚಗಿಯಲ್ಲಿ ವ್ಯಕ್ತಿಯೋರ್ವನ ಆತ್ಮಹತ್ಯೆಯಿಂದ ಇಂತಹದೊಂದು ನಿರ್ಧಾರಕ್ಕೆ ಜನರು ಮುಂದಾಗಿದ್ದಾರೆ.
ಇನ್ನು ಮಲ್ಲಿಗವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಉಮಚಗಿ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ಸಾಲ ಬಾಧೆ ತಾಳದೆ ಶಂಕರಪ್ಪ ಹುರಳಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆ ಮಾಡಿಕೊಂಡ ನಾಲ್ಕು ದಿನಗಳ ನಂತರ ಕೆರೆಯಲ್ಲಿ ಶವ ತೇಲಿತ್ತು. ಕೊಳೆತ ಸ್ಥಿತಿಯಲ್ಲಿ ಸ್ಥಿತಿಯಲ್ಲಿ ಶವ ಸಿಕ್ಕಿದ್ದರಿಂದ ನೀರು ಕಲುಷಿತಗೊಂಡಿದೆ ಎಂದು ಜನರು ಹೇಳಿದ್ದರು. ಆಗ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನೀರು ಕಲುಷಿತಗೊಂಡಿಲ್ಲ ಅಂದರೂ ಕೇಳದ ಜನ ಕೆರೆ ನೀರನ್ನು ಖಾಲಿ ಮಾಡಿಸುವಂತೆ ಪಟ್ಟುಹಿಡಿದಿದ್ದಾರೆ.
ಒಟ್ಟಿನಲ್ಲಿ ಗ್ರಾಮಸ್ಥರ ಪಟ್ಟಿಗೆ ಮಣಿದ ಗ್ರಾಮ ಪಂಚಾಯಿತಿ ಯಂತ್ರಗಳ ಮೂಲಕ ಹಗಲು- ರಾತ್ರಿ ನೀರು ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ. ಐದಾರು ದಿನಗಳ ನಂತರ ಕೆರೆ ಸಂಪೂರ್ಣ ಖಾಲಿಯಾಗುವ ನಿರೀಕ್ಷೆ ಇದೆ. ಸಾವನ್ನಪ್ಪಿದ ಅನಿಷ್ಟದಿಂದಾಗಿ ಕೆರೆ ಕಲುಷಿತಗೊಂಡಿದೆ. ಬೇರೆ ಊರಿಗೆ ಹೋಗಿ ನೀರು ತಂದರೂ ಪರವಾಗಿಲ್ಲ. ನೀರು ಖಾಲಿ ಮಾಡಿಸಲೇಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿರುವುದು ವಿಪರ್ಯಾಸಕರ ಸಂಗತಿ ಆಗಿದೆ.












Click it and Unblock the Notifications