ಕುಂದಗೋಳ ಉಪ ಚುನಾವಣೆ : ಕುಸುಮಾ ಶಿವಳ್ಳಿ ನಾಮಪತ್ರ ಸಲ್ಲಿಕೆ
ಧಾರವಾಡ, ಏಪ್ರಿಲ್ 29 : ಕುಂದಗೋಳ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಶಿವಳ್ಳಿ ಅವರು ನಾಮಪತ್ರ ಸಲ್ಲಿಸಿದರು. ಮೇ 19ರಂದು ಚುನಾವಣೆ ನಡೆಯಲಿದೆ, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಸೋಮವಾರ ಕುಸುಮಾ ಶಿವಳ್ಳಿ ಅವರು ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಜೊತೆ ರೋಡ್ ಶೋ ಮಾಡುವ ಮೂಲಕ ಪ್ರಚಾರವನ್ನು ಆರಂಭಿಸಿದರು.
ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ಕ್ಷೇತ್ರಕ್ಕೆ ಮೇ 19ರಂದು ಚುನಾವಣೆ ನಡೆಯಲಿದೆ. ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಚಿಂತನೆ ನಡೆಸಿದ್ದು, ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರನ್ನು ಕಣಕ್ಕಿಳಿಸಿದೆ.
ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡರ್ ಅವರು ಅಭ್ಯರ್ಥಿ. 2018ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 600 ಮತಗಳಲ್ಲಿ ಸೋತಿದ್ದ ಚಿಕ್ಕನಗೌಡರ್ ಈ ಬಾರಿ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ.

ಪೌರಾಡಳಿತ ಸಚಿವರಾಗಿದ್ದರು
2018ರ ವಿಧಾನಸಭೆ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಸಿ.ಎಸ್.ಶಿವಳ್ಳಿ ಅವರು ಮೈತ್ರಿ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದರು. ಮಾರ್ಚ್ 22ರಂದು ಹೃದಯಾಘಾತದಿಂದಾಗಿ ನಿಧನಹೊಂದಿದರು. ಕುರುಬ ಸಮುದಾಯದ ಪ್ರಭಾವಿ ನಾಯಕ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ.

ಮೂರು ಬಾರಿ ಶಾಸಕರು
ಸಿ.ಎಸ್.ಶಿವಳ್ಳಿ ಅವರು ಮೂರು ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, 2013ರಲ್ಲಿ ಕಾಂಗ್ರೆಸ್‌ನಿಂದ, 2018ರಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದರು. ಆದ್ದರಿಂದ, ಉಪ ಚುನಾವಣೆಯಲ್ಲಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

ಎಸ್.ಐ.ಚಿಕ್ಕನಗೌಡರ್
ಎಸ್.ಐ.ಚಿಕ್ಕನಗೌಡರ್ ಅವರು ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. 2008ರಲ್ಲಿ ಬಿಜೆಪಿಯಿಂದ, 2013ರಲ್ಲಿ ಕೆಜೆಪಿಯಿಂದ ಮತ್ತು 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಎಸ್.ಐ.ಚಿಕ್ಕನಗೌಡರ್ ಸತತ ಮೂರು ಚುನಾವಣೆ ಸೋತಿದ್ದಾರೆ. 2018ರ ಚುನಾವಣೆಯಲ್ಲಿ ಎಸ್.ಐ.ಚಿಕ್ಕನಗೌಡರ್ ಅವರು ಸಿ.ಎಸ್.ಶಿವಳ್ಳಿ ಅವರ ವಿರುದ್ಧ ಕೇವಲ 634 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.

ಕಾಂಗ್ರೆಸ್‌ಗೆ ಪ್ರತಿಷ್ಠೆ
ಕುಂದಗೋಳ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಆದ್ದರಿಂದ, ಉಪ ಚುನಾವಣೆಯನ್ನು ಗೆಲ್ಲಲು ತಂತ್ರ ರೂಪಿಸಲಾಗಿದೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.












Click it and Unblock the Notifications