ಧಾರವಾಡ ಕರ್ನಾಟಕ ಕಾಲೇಜಿಗೆ ಶತಮಾನೋತ್ಸವ ಸಂಭ್ರಮ

ಧಾರವಾಡದ ಪ್ರಖ್ಯಾತ ವಿದ್ಯಾಸಂಸ್ಥೆಯಾದ ಕರ್ನಾಟಕ ಕಾಲೇಜು ಈ ವರ್ಷ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಆದರೆ, ಈ ಕಾಲೇಜಿನ ಶತಮಾನೋತ್ಸವದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಳೆದಿರುವುದು ಬೇಸರ ತರಿಸಿದೆ.

ಧಾರವಾಡ, ಜೂನ್ 21: ವಿದ್ಯಾಕಾಶಿ ಎಂಬ ವಿಖ್ಯಾತಿಯಾಗಿರುವ ಧಾರವಾಡದಲ್ಲಿ ತಲೆ ಎತ್ತಿರುವ ಕರ್ನಾಟಕ ಕಾಲೇಜಿಗೆ ಈಗ ಶತಕದ ಸಂಭ್ರಮ. ಆದರೆ, ಭವ್ಯ ಇತಿಹಾಸ ಹೊಂದಿರುವ ಹಾಗೂ ಈ ಭಾಗದ ಲಕ್ಷಾಂತರ ಜನರಿಗೆ ದಾರಿ ದೀಪವಾಗಿರುವ ಈ ಕಾಲೇಜಿನ ಶತಮಾನೋತ್ಸವ ಆಚರಣೆಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ.

ಶತಮಾನೋತ್ಸವ ಸಮಾರಂಭಕ್ಕೆ ಹಾಜರಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿನಾಂಕವನ್ನು ಇನ್ನೂ ನಿಗದಿಗೊಳಿಸದ ಕಾರಣ, ಕಾರಣ ಸಂಭ್ರಮಕ್ಕೆ ಮಂಕು ಕವಿದಿದೆ. ಶತಮಾನೋತ್ಸವ ಸಮಾರಂಭ ಹೀಗೆ ನೆನೆಗುದಿಗೆ ಬಿದ್ದರೆ, ಇಂದಿನ ಪೀಳಿಗೆ ಕಾಲೇಜಿನ ಘನತೆಯನ್ನು ಸಾಕ್ಷಾತ್ತಾಗಿ ಅರಿಯುವ ಅವಕಾಶದಿಂದ ವಂಚಿತವಾಗಲಿದೆ.

ರೊದ್ದ ಶ್ರೀನಿವಾಸರಾಯರು, ಅರಟಾಳ ರುದ್ರಗೌಡರು ಹಾಗೂ ಸರ್ ಸಿದ್ಧಪ್ಪ ಕಂಬಳಿ ಅವರ ಬೆವರಿನ ಫಲವಾಗಿ ತಲೆ ಎತ್ತಿದ ಕರ್ನಾಟಕ ಕಾಲೇಜು ಜೂನ್ ೨೦ಕ್ಕೆ ನೂರು ವರ್ಷ ಪೂರೈಸಿದೆ.

Karnataka College Dharwad preparing for Centenary celebration

೬೦೦೦ ವಿದ್ಯಾರ್ಥಿಗಳು: ಇಲ್ಲಿನ ಗಂಡು ಮಕ್ಕಳ ಟ್ರೈನಿಂಗ್ ಶಾಲೆಯಲ್ಲಿ ೧೯೧೭ರ ಜೂನ್ ೨೦ರಂದು ಆರಂಭವಾದ ಕರ್ನಾಟಕ ಕಾಲೇಜು ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರದ ಕೆಲ ಪ್ರಾಂತ್ಯಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಬಡಿಸಿದೆ ಮತ್ತು ಆ ಕಾರ್ಯವನ್ನು ಇಂದಿಗೂ ಮುಂದುವರಿಸಿದೆ. ಕೇವಲ ೧೬೦ ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆ ಇಂದು ೬೦೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಅಲ್ಲದೆ ಐದು ವಿಷಯ ಬೋಧನೆಯೊಂದಿಗೆ ತರಗತಿ ಆರಂಭಿಸಿದ್ದು, ಇಂದು ೫೦ ವಿಷಯಗಳ ಬೋಧನೆಯೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ.

೨೫ ಕೋಟಿ ಘೋಷಣೆ
ಕಾಲೇಜು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಹಾಗೂ ಕಾಲೇಜಿನ ಅಭಿವೃದ್ಧಿಗಾಗಿ ಸರ್ಕಾರ 25 ಕೋಟಿ ರು. ನೀಡುವ ಭರವಸೆ ನೀಡಿದೆ. ಸದ್ಯಕ್ಕೆ ೫ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಹಿರಿಯರ ಶ್ರಮ
''ಕಾಲೇಜು ಸ್ಥಾಪನೆಗೆ ಬ್ರಿಟಿಷ್ ಸರ್ಕಾರಕ್ಕೆ ನೀಡಬೇಕಾಗಿದ್ದ ೨ ಲಕ್ಷ ಹಣ ಸಂಗ್ರಹಿಸಲು ಶ್ರೀನಿವಾಸರಾಯರು ಹಾಗೂ ರುದ್ರಗೌಡರು ಜೋಳಿಗೆ ಹಾಕಿದ್ದರಂತೆ. ಆ ಸಂದರ್ಭದಲ್ಲಿ ಅವರಿಗೆ ನಿರೀಕ್ಷೆಗಿಂತಲೂ ಹೆಚ್ಚು ಹಣ ಸಂಗ್ರಹವಾಗಿತ್ತು. ಇದು ಇಲ್ಲಿನ ಶಿಕ್ಷಣ ಪ್ರೀತಿಗೆ ಹಿಡಿದ ಕನ್ನಡಿ'' ಎನ್ನುವ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೋದ ಗಾಯಿ,''ಕಾಲೇಜು ಬೆಳವಣಿಗೆಗೆ ಕೊಡುಗೆ ನೀಡಿದವರನ್ನು, ಉನ್ನತ ಸಾಧನೆ ಮಾಡಿದ ಹಳೇ ವಿದ್ಯಾರ್ಥಿಗಳನ್ನು ಶತಮಾನೋತ್ಸವ ಸಂದರ್ಭದಲ್ಲಿ ಗೌರವಿಸಲಾಗುವುದು' ಎಂದರು.

''೧೯೧೯ರಲ್ಲಿ ಮುಂಬೈ ಪ್ರಾಂತ್ಯದ ಗವರ್ನರ್ ಜಾರ್ಜ್ ಲೈಡ್ ಅವರು ಇಲ್ಲಿನ ಚೋಟಾ ಮಹಾಬಲೇಶ್ವರ ಅಂದರೆ ಈಗಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಕಾಲೇಜಿಗಾಗಿ ಅಡಿಗಲ್ಲು ಹಾಕಿದರೂ ಕಟ್ಟಡ ನಿರ್ಮಾಣವಾಗಲಿಲ್ಲ.

ನಂತರ 'ಸದರನ್ ಮರಾಠಾ ರೈಲ್ವೆ' ಕಟ್ಟಡವನ್ನೇ ಕಾಲೇಜಿಗೆ ಪಡೆಯುವ ಚಿಂತನೆ ನಡೆಸಿದರು. ಮದ್ರಾಸ್ ಆಡಳಿತದ ವಶದಲ್ಲಿದ್ದ ಈ ಕಟ್ಟಡವನ್ನು ೬ ಲಕ್ಷ ರೂಪಾಯಿಗೆ ಖರೀದಿಸಿ ಕರ್ನಾಟಕ ಕಾಲೇಜಿಗೆ ನೀಡಿದರು. ಈಗಲೂ ಇದೇ ಕಟ್ಟಡದಲ್ಲಿಯೇ ಕಾಲೇಜು ಕಾರ್ಯನಿರ್ವಹಿಸುತ್ತಿದೆ.

೧೦೦ ಪುಸ್ತಕ ಹೊರ ತರುವ ಯೋಜನೆ
'ಶತಮಾನೋತ್ಸವದ ಸಂದರ್ಭದಲ್ಲಿ ಈ ಸವಿ ನೆನಪಿಗೊಸ್ಕರ ನೂರು ಪುಸ್ತಕ ಹೊರತರುವ ಯೋಚನೆ ಹೊಂದಲಾಗಿದೆ' ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ ತಿಳಿಸಿದರು. ''ಮೆನಜೆನ್, ಫ್ಯಾರನ್, ಗೋಕಾಕರು ಸೇರಿದಂತೆ ಹಲವರು ಈ ಕಾಲೇಜಿನ ಪ್ರಾಚಾರ್ಯರಾಗಿ ಕಾಲೇಜಿನ ಘನತೆ ಹೆಚ್ಚಿಸಿದ್ದಾರೆ. ಅವರ ಕುರಿತಾಗಿ 'ತೇರನ್ನು ಎಳೆದವರು', ಕಾಲೇಜಿನ ಘನತೆಯ ಕಿರೀಟಕ್ಕೆ ಗರಿಯನ್ನಿಟ್ಟವರ ಕುರಿತಾಗಿ 'ಮಲ್ಲಿಗೆ ತಂದವರು', ಡಾ. ಡಿ.ಸಿ.ಪಾವಟೆ, ಪ್ರೊ. ನಂಜುಂಡಪ್ಪ, ಡಾ. ಪಾಟೀಲ ಪುಟ್ಟಪ್ಪ, ಡಾ. ಚೆನ್ನವೀರ ಕಣವಿ ಸೇರಿದಂತೆ ಹಲವರ ಕೊಡುಗೆ ಸ್ಮರಿಸುವ 'ನೆಲದ ನಕ್ಷತ್ರಗಳು' ಎಂಬ ಕೃತಿಗಳನ್ನು ಹೊರತರಲು ಚಿಂತನೆ ನಡೆದಿದೆ'' ಎಂದು ಅವರು ಮಾಹಿತಿ ನೀಡಿದರು.

ಹಳೆ ವಿದ್ಯಾರ್ಥಿಗಳ ಕಥೆ ಕವನ ಸಂಗ್ರಹ
'ಕಾಲೇಜಿನ ಲಕ್ಷಾಂತರ ಹಳೆಯ ವಿದ್ಯಾರ್ಥಿಗಳು ಶತಮಾನೋತ್ಸವ ಸಂಭ್ರಮದಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದು, ಆಸಕ್ತ ಹಳೇ ವಿದ್ಯಾರ್ಥಿಗಳಿಂದಲೂ ಕಥೆ ಹಾಗೂ ಕವನಗಳನ್ನು ಆಹ್ವಾನಿಸಿ ಪ್ರಕಟಿಸಲಾಗುವುದು. ಅಲ್ಲದೆ ಶೀಘ್ರದಲ್ಲಿ ಸಂಪಾದಕರ ಮಂಡಳಿಯೂ ಸ್ಥಾಪನೆಯಾಗಲಿದೆ' ಎಂದರು.

'ಕರ್ನಾಟಕ ಕಾಲೇಜಿನ ಶತಮನೋತ್ಸವದ ಸವಿ ನೆನಪಿಗಾಗಿ ವರ್ಷವಿಡೀ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಪ್ರತಿ ವಿಭಾಗದಿಂದ ಹತ್ತು ರಾಷ್ಟ್ರೀಯ ವಿಚಾರ ಸಂಕಿರಣ, ಎರಡು ಅಂತರರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸುವ ಚಿಂತನೆ ಇದ್ದು, ವಿದ್ಯಾರ್ಥಿಗಳ ಈ ವರ್ಷದ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡ ನಂತರ ಶತಮಾನೋತ್ಸವದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು' ಎಂದು ಅವರು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+