ಧಾರವಾಡದಲ್ಲಿ ವಿನಯ್ ಕುಲಕರ್ಣಿ ಆಪ್ತ ಪ್ರಶಾಂತ್ ಕೇಕರೆ ಮನೆ ಮೇಲೆ ಐಟಿ ದಾಳಿ
ಧಾರವಾಡ, ಮೇ, 05: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ರಾಜ್ಯದ ಹಲವೆಡೆ ಐಟಿ ಅಧಿಕಾರಿಗಳ ದಾಳಿಯು ಮುಂದುವರೆದಿದೆ. ಅದೇ ರೀತಿ ಇದೀಗ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಆಪ್ತ ಪ್ರಶಾಂತ್ ಕೇಕರೆ ಅವರ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಧಾರವಾಡದ ಸಪ್ತಾಪುರ ಕೃಷಿ ಪಾರ್ಕ್‌ನಲ್ಲಿ ಪ್ರಶಾಂತ್ ಅವರ ಮನೆ ಇದ್ದು, ಆ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಅರ್ಧ ಗಂಟೆಯಿಂದಲೂ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೀಗೆ ಚುನಾವಣೆ ಹೊಸ್ತಿಲಲ್ಲೇ ವಿನಯ್ ಕುಲಕರ್ಣಿಗೆ ಐಟಿ ಶಾಕ್ ನೀಡಿದೆ. ಪ್ರಶಾಂತ್ ಕೇಕರೆ ಚುನಾವಣೆ ವೇಳೆ ಇದು ಸಹಜ ಎನ್ನುತ್ತಲೇ ಐಟಿ ಅಧಿಕಾರಿಗಳಿಗೆ ಮನೆಯ ಕೀ ನೀಡಿ ಅವರನ್ನು ಒಳಗಡೆ ಕರೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ವಿರುದ್ಧ ವಿನಯ್ ಕುಲಕರ್ಣಿ ಆರೋಪ
ಕರ್ನಾಟಕದ ಅನೇಕ ನಾಯಕರ ಮೇಲೆ ಬಿಜೆಪಿ ಷಡ್ಯಂತ್ರ ರೂಪಿಸಿದೆ. ಬಿಜೆಪಿ ಕುತಂತ್ರದ ರಾಜಕಾರಣ ಮಾಡುತ್ತಿದೆ. ನನ್ನ ಮೇಲೆ ಬಿಜೆಪಿ ಕುತಂತ್ರ ನಡೆಸಿದೆ ಎಂಬ ಹೇಳಿಕೆಗೆ ಈಗಲೂ ನಾನು ಬದ್ಧ ಎಂದು ಧಾರವಾಡ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಇತ್ತೀಚೆಗಷ್ಟೇ ಆಕ್ರೋಶ ವ್ಯಕ್ತಪಡಿಸಿದ್ದರು.
ಕಿತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿನಯ್ ಕುಲಕರ್ಣಿ, ನ್ಯಾಯಾಲಯದಲ್ಲಿ ಯಾರು ಬಂದು ಕುಳಿತಿರುತ್ತಾರೆ ಎಂಬದನ್ನು ನೋಡಿದರೆ ಬಿಜೆಪಿ ನನ್ನ ಮೇಲಷ್ಟೇ ಅಲ್ಲದೇ ರಾಜ್ಯ ಅನೇಕ ನಾಯಕರ ಮೇಲೆ ಬಿಜೆಪಿ ಷಡ್ಯಂತ್ರ ನಡೆಸಿರುವುದು ಗೊತ್ತಾಗುತ್ತದೆ. ಇಂದಿಗೂ ಅನೇಕರ ಮೇಲೆ ಐಟಿ ರೇಡ್ ಮಾಡಿಸಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯವರು ನಮ್ಮ ಪಿಎ ಮನೆಗಳ ಮೇಲೆ ಐಟಿ ದಾಳಿ ನಡೆಸಿಹೊ ರಗಡೆ ಬರದಂತೆ ಮಾಡಿತು ಎಂದಿದ್ದರು.
ಇಷ್ಟು ದಿನ ಬಿಜೆಪಿ ಶಾಸಕರನ್ನೇ ಬೈದಾಡಿಕೊಂಡು ಓಡಾಡುತ್ತಿದ್ದ ಬಸವರಾಜ ಕೊರವರ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ ನನ್ನನ್ನು ಬೈಯುತ್ತಿದ್ದಾರೆ. ಇದನ್ನು ನೋಡಿದರೆ ಅವರು ಹಣಕ್ಕೆ ಬುಕ್ ಆಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಆದರೆ ನಾನು ದುಡ್ಡು ಪಡೆದು ಮಾತನಾಡುವವರಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದರು.
ಸದ್ಯ ಕೋರ್ಟ್ ನನಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ಕೊಟ್ಟಿಲ್ಲ. ಹೊರಗಡೆ ಇದ್ದುಕೊಂಡೇ ನಾನು ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನ ಇದೀಗ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಮರಳಿ ನನಗೆ ಅವಕಾಶ ಕೊಡಲು ಉತ್ಸುಕರಾಗಿದ್ದಾರೆ ಎಂದು ಅವರ ವಿಶ್ವಾಸ ವ್ಯಕ್ತಪಡಿಸಿದ್ದರು.












Click it and Unblock the Notifications