International Yoga day 2023: ಯೋಗ ದಿನಾಚರಣೆಗೆ ಜನಪ್ರತಿನಿಧಿಗಳೇ ಗೈರು: ತಡವಾಗಿ ಬಂದ ಅಧಿಕಾರಿಗಳು
ಧಾರವಾಡ, ಜೂನ್ 21: ಇಂದು ದೇಶದಾದ್ಯಂತ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲೂ ಜಿಲ್ಲಾಡಳಿತದಿಂದ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಯೋಗ ದಿನಾಚರಣೆಗೆ ಜನಪ್ರತಿನಿಧಿಗಳೇ ಗೈರಾಗಿದ್ದರು. ಇನ್ನು ಅಧಿಕಾರಿಗಳು ಸಹ ಸರಿಯಾದ ಸಮಯಕ್ಕೆ ಬರದೇ ತಡವಾಗಿ ಆಗಮಿಸಿದ್ದಾರೆ.
ಜನಪ್ರತಿನಿಧಿಗಳು ಬರದ ಕಾರಣ ಯೋಗ ಕಾರ್ಯಕ್ರಮ ತಡವಾಗಿ ಆರಂಭಗೊಂಡಿತು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಬಂದು ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಯೋಗಾಸನಗಳನ್ನು ಮಾಡಿದರು.

ಇನ್ನು ಯೋಗ ಮಾಡುವ ಮಧ್ಯೆಯೇ ಮಕ್ಕಳಿಗೆ ಟೀ ಶರ್ಟ್‌ಗಳನ್ನು ವಿತರಣೆ ಮಾಡಲಾಗುತ್ತಿತ್ತು. ಯೋಗ ಮಾಡುವುದನ್ನು ಬಿಟ್ಟು ಮಕ್ಕಳು ಟೀ ಶರ್ಟ್ ಪಡೆಯಲು ಮುಗಿಬಿದ್ದ ಘಟನೆಯೂ ನಡೆದಿದೆ. ಕೆಲವರಿಗಂತೂ ಯೋಗಾಸನ ಮಾಡುವುದನ್ನು ತಡೆದು ಟೀ ಶರ್ಟ್ ನೀಡಲಾಯಿತು. ಯೋಗಥಾನ್ 2022ರ ಟೀ ಶರ್ಟ್‌ಗಳನ್ನು ಈ ವರ್ಷ ನೀಡಿರುವುದು ಕಂಡು ಬಂದಿದೆ.
ಯೋಗಾಸನ ಆರಂಭಗೊಂಡ ಕೆಲವು ನಿಮಿಷಗಳ ನಂತರ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ಜನಪ್ರತಿನಿಧಿಗಳಿಗಾಗಿ ಕಾದು ತಡವಾಗಿ ಆರಂಭಗೊಂಡಿದ್ದ ಯೋಗ ಕಾರ್ಯಕ್ರಮದಲ್ಲಿ ಶಾಸಕ ಕೋನರಡ್ಡಿ ತಡವಾಗಿ ಭಾಗಿಯಾಗಿದರು. ಒಟ್ಟಾರೆ ಧಾರವಾಡದಲ್ಲಿ ನಡೆದ ಯೋಗಾಸನ ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆಯದೇ ಅವ್ಯವಸ್ಥೆಯಾಗಿರುವುದು ಕಂಡು ಬಂದಿದೆ.

ಯೋಗದಿಂದ ರೋಗ ದೂರ: ವಿಶ್ವ ಯೋಗದಿನಕ್ಕೆ ಕೇಂದ್ರ ಸಚಿವ ಜೋಶಿ ಚಾಲನೆ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ವಿಶ್ವಯೋಗ ದಿನಕ್ಕೆ ನಿಜಕ್ಕೂ ಹೊಸದೊಂದು ಮೆರಗು ಸಿಕ್ಕಂತಾಗಿದೆ. ವರ್ಷದಿಂದ ವರ್ಷಕ್ಕೆ ಯೋಗಪಟುಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿಂದು ಆಯೋಜಿಸಲಾಗಿದ್ದ ವಿಶ್ವಯೋಗ ದಿನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಯೋಗದಿಂದ ರೋಗ ದೂರ ಎಂಬ ಮಾತಿನಂತೆ ಯೋಗದಿನಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಹುಬ್ಬಳ್ಳಿಯ ಜಿಮ್ ಖಾನ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಬಹುತೇಕ ನಾಯಕರು ಭಾಗವಹಿಸಿ ಯೋಗದ ಆಸನಗಳ ಮೂಲಕ ಆರೋಗ್ಯಕರ ಸಂದೇಶ ನೀಡಿದ್ದಾರೆ.
ಇನ್ನು ಕ್ಷಮತಾ ಸೇವಾ ಸಂಸ್ಥೆ ಹಾಗೂ ಧನ್ಯಸ್ಮಿ ಯೋಗ ಕೇಂದ್ರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಯೋಗದಿನಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಬಹುತೇಕ ಕಡೆಯಿಂದಲೂ ಜನರು ಆಗಮಿಸಿ ವಿಶ್ವ ಯೋಗ ದಿನ ಯಶಸ್ವಿಗೊಳಿಸಿದರು.












Click it and Unblock the Notifications