'ಪ್ರತಿ ಕುಟುಂಬಕ್ಕೆ ಕನಿಷ್ಠ 12 ಬಿಂದಿಗೆ ನೀರು ನೀಡಿ'

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್, 25: ಪ್ರತಿ ಕುಟುಂಬಕ್ಕೆ ದಿನವೊಂದಕ್ಕೆ ಕನಿಷ್ಠ 12 ಬಿಂದಿಗೆ ನೀರು ಒದಗಿಸಬೇಕು.ಕುಡಿಯುವ ನೀರು ಸರಬರಾಜಿಗೆ ತೆರೆದಿರುವ ಕೊಳವೆ ಬಾವಿಗಳಿಗೆ ಹೆಸ್ಕಾಂ ಯಾವುದೇ ಶುಲ್ಕ ವಿಧಿಸದೇ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಬೆಳಗಾವಿ ವಿಭಾಗದ ಬರಪೀಡಿತ ಪ್ರದೇಶಗಳ ಅಧ್ಯಯನ ಮತ್ತು ಬರ ನಿರ್ವಹಣೆಯ ಸಚಿವ ಸಂಪುಟ ಉಪಸಮಿತಿಯ ಅಧ್ಯಕ್ಷ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಡಾ. ಡಿ. ಎಸ್. ಕರ್ಕಿ ಕನ್ನಡ ಭವನದಲ್ಲಿ ನಡೆದ ಬರ ಪರಿಹಾರ ಕಾಮಗಾರಿಗಳ ಸಂಪುಟ ಉಪಸಮಿತಿಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ದೇಶಪಾಂಡೆ, 1971 ರ ನಂತರ ಬಳಿಕ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. ಪ್ರತಿ ತಾಲ್ಲೂಕಿನಲ್ಲಿ ನಾಲ್ಕು ಕೆರೆಗಳ ಹೂಳೆತ್ತಲು ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.[ಕುಡಿಯಾಕ್ ತೊಟ್‌ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ..!]

hubballi

ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು, ಜಾನುವಾರುಗಳಿಗೆ ಮೇವು ಪೂರೈಕೆ ಹಾಗೂ ಬರ ಪರಿಹಾರ ಕಾಮಗಾರಿಗಳ ಮೂಲಕ ಜನರಿಗೆ ಉದ್ಯೋಗ ಒದಗಿಸುವ ಕಾರ್ಯವನ್ನು ಆದ್ಯತೆಯ ಮೇರೆಗೆ ನಡೆಸಲಾಗುತ್ತಿದೆ. ಅಧಿಕಾರಿಗಳು ಜೂನ್ 15 ರವರೆಗೂ ಕೇಂದ್ರ ಸ್ಥಳವನ್ನು ಬಿಟ್ಟು ತೆರಳದೇ ಕಾರ್ಯ ನಿರ್ವಹಿಸಬೇಕು ಎಂದು ದೇಶಪಾಂಡೆ ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ ಬರ ನಿರ್ವಹಣೆಗಾಗಿ ಒಟ್ಟು 20.5 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 16 ಕೋಟಿ ರೂ. ಗಳ ಬಳಕೆಯಾಗಿದೆ. ಎಲ್ಲ ತಹಸೀಲ್ದಾರರ ಖಾತೆಗಳಲ್ಲಿಯೂ ಕುಡಿಯುವ ನೀರು ಸರಬರಾಜಿಗಾಗಿ ತುರ್ತು ಹಣಕಾಸು ಲಭ್ಯವಿದೆ. ಕುಡಿಯುವ ನೀರು ಪೂರೈಸುವ ಟ್ಯಾಂಕರ್ ಗಳ ಬಾಡಿಗೆಯನ್ನು ತ್ವರಿತವಾಗಿ ಪಾವತಿಸಬೇಕು ಎಂದು ತಿಳಿಸಿದರು.

ಬರಪರಿಹಾರ ಕಾಮಗಾರಿಗಳಿಗೆ ಟೆಂಡರ್ ಕರೆಯುವ ಅಗತ್ಯವಿಲ್ಲ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿಗಳು ಕೆಲಸ ಮಾಡಿದಾಗ ಬರ ನಿರ್ವಹಣೆ ಕಾರ್ಯ ಸುಗಮವಾಗುತ್ತದೆ. ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ 1420 ಕೋಟಿ ರೂ. ಬಿಡುಗಡೆ ಮಾಡಲು ಕೋರಲಾಗಿತ್ತು. ಆದರೆ 706 ಕೋಟಿ ರೂ. ಬಿಡುಗಡೆ ಮಾಡಿದೆ. ಬಾಕಿ ಹಣಕ್ಕಾಗಿ ಮತ್ತೊಂದು ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವದು. ಹಿಂಗಾರು ಹಂಗಾಮಿನ ಬೆಳೆಹಾನಿ ಪರಿಹಾರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಸಚಿವ ದೇಶಪಾಂಡೆ ಹೇಳಿದರು.

ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಪಾವತಿಸುವ ಕಾರ್ಯ ವಿಳಂಬವಾಗಬಾರದು. ಪ್ರತಿ ವಾರ ನರೇಗಾ ಕೂಲಿಕಾರರಿಗೆ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಕೆರೆಗಳ ಹೂಳೆತ್ತುವ, ಕೃಷಿಹೊಂಡಗಳನ್ನು ನಿರ್ಮಿಸುವ ಕೆಲಸಗಳಿಗೆ ಒತ್ತು ನೀಡಬೇಕೆಂದರು.

ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಶಾಸಕರ ಅನುದಾನದಲ್ಲಿ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಹಣ ಬಳಕೆ ಮಾಡಲು ಬರುವದಿಲ್ಲ ಅದು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು.

-
-
-
-
-
-
-
-
-
-
-
-
-
-
-

ವಿಪಕ್ಷ ನಾಯಕ ಜಗದೀಶ ಶೆಟ್ಟರ ಮಾತನಾಡಿ, ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಸುಮಾರು 300 ಎಕರೆ ವಿಸ್ತೀರ್ಣವುಳ್ಳ ಉಣಕಲ್ ಕೆರೆಯಲ್ಲಿ ಹೂಳು ಸಂಗ್ರಹವಾಗಿದೆ ಹಾಗೂ ವೇಗವಾಗಿ ಹಬ್ಬುತ್ತಿರುವ ಅಂತರಗಂಗೆ ಸಸ್ಯವು ಕೆರೆಯ ನೀರಿಗೆ ಧಕ್ಕೆ ಉಂಟುಮಾಡುತ್ತಿದೆ. ಇದರ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ ಸ್ಥಾಪಿಸಿರುವ ಮೇವು ಬ್ಯಾಂಕುಗಳು ಹಾಗೂ ಕುಡಿಯುವ ನೀರು ಪೂರೈಸಲು ಇನ್ಫೋಸಿಸ್ ಪ್ರತಿಷ್ಠಾನ ಮತ್ತು ದೇಶಪಾಂಡೆ ಫೌಂಡೇಷನ್ ಅವರೂ ಸಹ ನೆರವು ನೀಡುತ್ತಿದ್ದು ಅದರ ಸಮರ್ಪಕ ಬಳಕೆಯಾಗಬೇಕು ಎಂದರು.[ದಾಖಲೆ ಮುರಿದ ಬೆಂಗಳೂರು ಬಿಸಿಲು]

ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆಯ ವ್ಯವಸ್ಥೆ. ಜಾನುವಾರುಗಳಿಗೆ ಮೇವು ಬ್ಯಾಂಕುಗಳ ಸ್ಥಾಪನೆ, ಕೃಷಿ ಭಾಗ್ಯ ಯೋಜನೆಯ ಅನುಷ್ಠಾನ, ಮಹಾತ್ಮ ಗಾಂಧೀ ನರೇಗಾ ಯೋಜನೆಯಡಿ ಉದ್ಯೋಗ ಸೃಷ್ಟಿ, ಕುಡಿಯುವ ನೀರಿನ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಕುರಿತ ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಸಿ.ಎಸ್.ಶಿವಳ್ಳಿ, ಸಂಸದ ಪ್ರಹ್ಲಾದ ಜೋಷಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್. ಹೆಚ್. ಕೋನರಡ್ಡಿ, ಪ್ರದೀಪ ಶೆಟ್ಟರ್, ಮೇಯರ್ ಮಂಜುಳಾ ಅಕ್ಕೂರ, ಉಪಮೇಯರ್ ಲಕ್ಷ್ಮೀ ಲಕ್ಷ್ಮಣ ಉಪ್ಪಾರ ಉಪಸ್ಥಿತರಿದ್ದರು.[ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]

ಬರಪೀಡಿತ ಪ್ರದೇಶಗಳಿಗೆ ಭೇಟಿ:
ಬೆಳಗಾವಿ ವಿಭಾಗದ ಬರಪೀಡಿತ ಪ್ರದೇಶಗಳ ಅಧ್ಯಯನ ಮತ್ತು ಬರನಿರ್ವಹಣೆಯ ಸಚಿವ ಸಂಪುಟದ ಉಪಸಮಿತಿಯು ಕುಂದಗೋಳ ಎಪಿಎಂಸಿ ಆವರಣದಲ್ಲಿ ಸ್ಥಾಪನೆಯಾಗಿರುವ ಮೇವು ಬ್ಯಾಂಕಿನ ಕಾರ್ಯ ಪರಿಶೀಲನೆ ನಡೆಸಿ , ರೈತರಿಗೆ ಕೃಷಿಭಾಗ್ಯ ಯೋಜನೆಯಡಿ ಮಂಜೂರಾದ ಕೃಷಿ ಯಂತ್ರೋಪಕರಣಗಳನ್ನು ಹಸ್ತಾಂತರಿಸಿತು.

ಶಿರೂರು ಗ್ರಾಮದಲ್ಲಿ ಕೆರೆ ಹಾಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಪರಿಸ್ಥಿತಿ ವೀಕ್ಷಣೆ ಮಾಡಲಾಯಿತು. ಸಂಶಿ ಗ್ರಾಮದ ಕುಡಿಯುವ ನೀರಿನ ಕೆರೆಗೆ ನೀರು ಹರಿದು ಬರುವ ಮಾರ್ಗದ ಕಾಲುವೆಗಳ ಒತ್ತುವರಿ ತೆರವುಗೊಳಿಸಲು ಸೂಚಿಸಲಾಯಿತು. ಚಾಕಲಬ್ಬಿ ಗ್ರಾಮದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಕೊಳ್ಳಲಾದ ಕೆರೆ ಹೂಳೆತ್ತುವ ಕಾಮಗಾರಿ, ರೊಟ್ಟಿಗವಾಡದಲ್ಲಿ ಕೃಷಿಹೊಂಡಗಳ ನಿರ್ಮಾಣ, ನವಲಗುಂದ ತಾಲ್ಲೂಕಿನ ಅಣ್ಣಿಗೇರಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸಂಗ್ರಹಗಾರದ ಸ್ಥಳವನ್ನು ಪರಿಶೀಲನೆ ಮಾಡಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: Various villages in Hubballi-Dharwad District are drought-hit and the plight of the people belonging to these villages are miserable. Minister for heavy industries RV Deshpande has taken a step further to tackle this water problem. He conducted a district officers meet.
Please Wait while comments are loading...